Advertisement

ಅವಸಾನದ ಅಂಚಿನಲ್ಲಿ ವೀರಮ್ಮಾಜಿ ಕೆರೆ

01:39 PM Jan 12, 2020 | Naveen |

ಎನ್‌.ಆರ್‌.ಪುರ: ಪಟ್ಟಣದ ಮಧ್ಯ ಭಾಗದಲ್ಲಿರುವ ಐತಿಹಾಸಿಕ ವೀರಮ್ಮಾಜಿ ಕೆರೆ ಸೂಕ್ತ ನಿರ್ವಹಣೆ ಇಲ್ಲದ ಕಾರಣ ಅಭಿವೃದ್ಧಿಯಿಂದ ವಂಚಿತವಾಗಿ ಅವಸಾನದ ಅಂಚು ತಲುಪಿದೆ.

Advertisement

ಕೆರೆಗೆ ತ್ಯಾಜ್ಯ ಸೇರಿ ನೀರು ಕಲ್ಮಷವಾಗುತ್ತಿದೆ. ಕೆರೆಯಲ್ಲಿ ಕಳೆ, ಗಿಡಗಂಟಿ ಬೆಳೆದು ನೀರು ಕಾಣದಂತಾಗಿದೆ. ಕೆಳದಿ ರಾಣಿ ಚೆನ್ನಮ್ಮಾಜಿ ಕ್ರಿ.ಶ. 1671ರಿಂದ 1697 ಮತ್ತು ವೀರಮ್ಮಾಜಿ ಕ್ರಿ.ಶ. 1757 ರಿಂದ 1763ರಲ್ಲಿ ಕೆರೆ ನಿರ್ಮಾಣ ಮಾಡಿದ್ದರು ಎಂಬುದಕ್ಕೆ ದಾಖಲೆಗಳಿವೆ.

9ನೇ ವಾರ್ಡ್‌ನಲ್ಲಿ ಇರುವ ಈ ಕೆರೆ ಬರೋಬ್ಬರಿ 13ಎಕರೆ ವಿಸ್ತೀರ್ಣ ಹೊಂದಿದ್ದು, ತಾಲೂಕಿನಲ್ಲಿ ಎಂದೂ ಬತ್ತದ ಕೆರೆಯಾಗಿದೆ. ಕೆರೆಯ ಪೂರ್ವ ಭಾಗದಲ್ಲಿರುವ ಈಗಿನ ಹಳೇಪೇಟೆ ಕೆಳದಿ ಅರಸರ ಕಾಲದಲ್ಲಿ ವೀರಮ್ಮಾಜಿ ಪೇಟೆಯಾಗಿತ್ತು. ಇಂತಹ ಐತಿಹಾಸಿಕ ಹಿನ್ನೆಲೆಯುಳ್ಳ ಕೆರೆಗೆ ಎಗ್ಗಿಲ್ಲದೆ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಕೋಳಿ, ಕುರಿ ಮಾಂಸದ ತ್ಯಾಜ್ಯವನ್ನೂ ಕೆರೆಗೆ ಹಾಕುತ್ತಿರುವುದರಿಂದ ನೀರು ಮಲಿನವಾಗಿದೆ.

ಈ ಹಿಂದೆ ಪಟ್ಟಣ ಪಂಚಾಯತ್‌ನಿಂದ ಕೆರೆಯ ದಂಡೆಯನ್ನು ಅಲ್ಪಸ್ವಲ್ಪ ಸ್ವತ್ಛಗೊಳಿಸಿ, ಬೀದಿ ದೀಪಗಳನ್ನು ಅಳವಡಿಸಲಾಗಿತ್ತು. ಆದರೆ, ರಾತ್ರಿ ವೇಳೆ ಕಿಡಿಗೇಡಿಗಳು ಬೀದಿ ದೀಪಗಳನ್ನು ಒಡೆದು ಹಾಕಿದ್ದಾರೆ. ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿಕೊಂಡು ಮದ್ಯ ಸೇವಿಸಿ ಬಾಟಲಿಗಳನ್ನು ಕೆರೆಗೆ ಎಸೆದು ಹೋಗುತ್ತಿದ್ದಾರೆ. ಕೆರೆ ಮೇಲಿನ ರಸ್ತೆ ಕತ್ತಲಿನಿಂದ ಕೂಡಿರುವುದರಿಂದ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿ ಮಾರ್ಪಟ್ಟಿದೆ.

ರಸ್ತೆ ಬೀದಿ ದೀಪ ಇಲ್ಲದಿರುವುದರಿಂದ ಕೆರೆಗೆ ಸನಿಹದಲ್ಲಿರುವ ಹಳೇಪೇಟೆಗೆ ಅಗ್ರಹಾರ ಮೂಲಕವೇ ಜನರು ಬರುತ್ತಾರೆ. ಯಾವ ಜನಪ್ರತಿನಿಧಿಗಳೂ ಕೆರೆ ಅಭಿವೃದ್ಧಿಗೆ, ಜಲ ಸಂರಕ್ಷಣೆಗೆ ಮುಂದಾಗದಿರುವುದು ಶೋಚನೀಯ ಸಂಗತಿ ಎಂಬುದು ಸ್ಥಳೀಯರ ನೋವಿನ ಮಾತಾಗಿದೆ.

Advertisement

ಮೂಗು ಮುಚ್ಚಿಕೊಂಡೇ ಸಂಚಾರ: ಕೆರೆ ಮೇಲಿನ ರಸ್ತೆ ಅಗ್ರಹಾರದಿಂದ ಹಳೇಪೇಟೆ ವರೆಗೆ ಮತ್ತು ಶಿವಮೊಗ್ಗ ರಸ್ತೆಗೆ ಸಂಪರ್ಕ ಕಲ್ಪಿಸುವುದರಿಂದ ಪ್ರತಿನಿತ್ಯ ಹೆಚ್ಚಿನ ವಾಹನಗಳು ಓಡಾಡುತ್ತವೆ. ಈ ರಸ್ತೆ ಮಾರ್ಗವಾಗಿ ರಾಘವೇಂದ್ರ ಬಡಾವಣೆ, ಅಗ್ರಹಾರದಿಂದ ಶಿವಮೊಗ್ಗ ರಸ್ತೆಯಲ್ಲಿರುವ ನ್ಯಾಯಾಲಯ, ಗುರುಭವನ, ಗುತ್ಯಮ್ಮ ದೇವಸ್ಥಾನ, ಶಾಲಾ- ಕಾಲೇಜು,ಪೆಟ್ರೋಲ್‌ ಬಂಕ್‌ಗೆ ಜನ ತೆರಳುತ್ತಾರೆ. ತ್ಯಾಜ್ಯ ತುಂಬಿರುವ ಕೆರೆಯಿಂದ ದುರ್ವಾಸನೆ ಬರುವುದರಿಂದ ಜನ ಮೂಗು ಮುಚ್ಚಿಕೊಂಡೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅಭಿವೃದ್ಧಿಗೆ ಏನು ಮಾಡಬೇಕು?: ಕೆರೆ ಜಾಗ ಸರ್ವೆ ಮಾಡಿ ಹದ್ದುಬಸ್ತು ಹಾಕಬೇಕಿದೆ. ಕೆರೆ ಸುತ್ತಲೂ ವಾಕಿಂಗ್‌ ಪಾಥ್‌ ನಿರ್ಮಿಸಬೇಕು. ಕೆರೆಗೆ ಹರಿದು ಬರುತ್ತಿರುವ ಚರಂಡಿ ನೀರನ್ನು ತಡೆಯಬೇಕು. ಕೆರೆಯ ಹೂಳು ತೆಗೆದರೆ ಅಕ್ಕಪಕ್ಕದ ತೋಟಗಳಿಗೂ ನೀರು ಸಿಗುತ್ತದೆ. ದಡಕ್ಕೆ ಕಲ್ಲಿನ ತಡೆಗೋಡೆ ನಿರ್ಮಿಸಿ, ತ್ಯಾಜ್ಯ ವಸ್ತುಗಳನ್ನು ಕೆರೆಗೆ ಅಥವಾ ಕೆರೆ ಸಮೀಪ ಹಾಕದಂತೆ ಕೆರೆ ಸುತ್ತಲೂ ಗ್ರಿಲ್‌ಗ‌ಳನ್ನು ಅಳವಡಿಸಬೇಕಿದೆ. ಕೆರೆ ಅಭಿವೃದ್ಧಿಗೊಳಿಸಿದರೆ ಸುಂದರ ವಾಯುವಿಹಾರ ತಾಣವಾಗಿ ಮಾರ್ಪಡಿಸಬಹುದು ಎಂಬುದು ಇಲ್ಲಿನ ನಾಗರಿಕರ ವಾದ.

ಕೆರೆ ಕೆಳದಿ ಅರಸರ ಕಾಲದ್ದಾಗಿರುವುದರಿಂದ ಪುರಾತತ್ವ ಇಲಾಖೆಯಿಂದ ಪುನಃ ಶ್ಚೇತನಗೊಳಿಸಬೇಕು. ಇದರಿಂದ ಪಟ್ಟಣದ ಸೌಂದರ್ಯ ಹೆಚ್ಚುವುದಲ್ಲದೇ ಅರಸರ ಕಾಲದ ಕೆರೆ ಉಳಿಸಿದಂತಾಗುತ್ತದೆ. ನಾನು ಪಟ್ಟಣ ಪಂಚಾಯತ್‌ ನಾಮ ನಿರ್ದೇಶಿತ ಸದಸ್ಯನಾಗಿದ್ದು, ಅವ ಧಿಯಲ್ಲಿ ದಂಡೆ ಮೇಲೆ ಬೀದಿ ದೀಪಗಳನ್ನು ಅಳವಡಿಸಿದ್ದೆ. ಆದರೆ ಅವುಗಳನ್ನು ಕಿಡಿಗೇಡಿಗಳು ಒಡೆದು ಹಾಕಿದ್ದಾರೆ.
ನಾಗಭೂಷಣ್‌,
ಪಪಂ ಮಾಜಿ ಸದಸ್ಯರು

ಕೆರೆ ಅಭಿವೃದ್ಧಿಗಾಗಿ ಈ ಹಿಂದೆ ಪ್ರವಾಸೋದ್ಯಮ ಇಲಾಖೆಗೆ
ಮನವಿ ಸಲ್ಲಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಕೆರೆಗೆ ಕೋಳಿ, ಕುರಿ ಮಾಂಸದ ಅಂಗಡಿಯವರು ತ್ಯಾಜ್ಯ ಸುರಿಯುತ್ತಿಲ್ಲ. ಬದಲಿಗೆ ಮನೆಗಳ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಹಲವು ಬಾರಿ ಬೀದಿ ದೀಪಗಳನ್ನು ಆಳವಡಿಸಿದರೂ ಕಿಡಿಗೇಡಿಗಳು ಒಂದೇ ದಿನಕ್ಕೆ ಒಡೆದು ಹಾಕುತ್ತಿದ್ದಾರೆ. ರಾತ್ರಿ ಪೊಲೀಸ್‌ ಗಸ್ತು ಹಾಕಿದರೆ ನಿಯಂತ್ರಣಕ್ಕೆ ಬರಬಹುದು.
.ಕುರಿಯಕೋಸ್‌,
ಪಪಂ ಮುಖ್ಯಾಧಿಕಾರಿಗಳು

„ಪ್ರಶಾಂತ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next