Advertisement

ನೀಗದ ಸರ್ವರ್‌ ಸಮಸ್ಯೆ: ಜನರ ಪರದಾಟ

01:35 PM Jan 30, 2020 | Naveen |

ಎನ್‌.ಆರ್‌.ಪುರ: ನ್ಯಾಯಬೆಲೆ ಅಂಗಡಿಗಳಲ್ಲಿ ಬೆಳಗ್ಗೆಯಿಂದ ಒಂದಿಬ್ಬರು ಫಲಾನುಭವಿಗಳು ಹೆಬ್ಬೆಟ್ಟು ಗುರುತು ನೀಡಿ ಪಡಿತರ ಅಕ್ಕಿ ಪಡೆಯುತ್ತಿದ್ದಂತೆ ಬಯೋಮೆಟ್ರಿಕ್‌ನಲ್ಲಿ ಸರ್ವರ್‌ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ. ತಾಲೂಕಿನಲ್ಲಿ ಕಳೆದ 6 ತಿಂಗಳಿಂದ ಇದೇ ವ್ಯವಸ್ಥೆ ಮುಂದುವರೆದಿವುದರಿಂದ ಬಹುತೇಕ ಕೂಲಿ ಕಾರ್ಮಿಕರೇ ಆಗಿರುವ ಫಲಾನುಭವಿಗಳು ತೀವ್ರ ಕಂಗಾಲಾಗಿದ್ದಾರೆ.

Advertisement

ಬಡವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಶ್ರೀಮಂತರ ಪಾಲಾಗಬಾರದು ಎಂಬ ಸದುದ್ದೇಶದಿಂದ ಸರ್ಕಾರ ಹಲವು ಕಾನೂನುಗಳನ್ನು ಜಾರಿಗೆ ತರುತ್ತಿದೆ. ಆದರೂ ತಾಂತ್ರಿಕ ಸಮಸ್ಯೆಯಿಂದಾಗಿ ಹಲವು ಯೋಜನೆಗಳು ವಿಫಲವಾಗುತ್ತಿವೆ. ಪ್ರಸ್ತುತ ಬಡವರಿಗೆ ಅನ್ನ ಭಾಗ್ಯ ಯೋಜನೆಯಡಿ ನ್ಯಾಯಬೆಲೆ ಅಂಗಡಿ ಮೂಲಕ ಕುಟುಂಬದ ಪ್ರತಿ ಸದಸ್ಯರಿಗೆ 7 ಕೆ.ಜಿ.ಯಂತೆ ವಿತರಿಸಲು ಸರ್ಕಾರ ಯೋಜನೆ ರೂಪಿಸಿದೆ. ಕುಟುಂಬದ 11 ವರ್ಷದ ಮೇಲ್ಪಟ್ಟ ಸದಸ್ಯರೊಬ್ಬರು ಅಥವಾ ಯಜಮಾನ ಬಯೋಮೆಟ್ರಿಕ್‌ ಯಂತ್ರದಲ್ಲಿ ಹೆಬ್ಬೆಟ್ಟು ಗುರುತು ನೀಡಿದರೆ ಅಲ್ಲಿ ಎಲ್ಲಾ ವಿವರ ತೋರಿಸುತ್ತದೆ. ಎಲ್ಲಾ ದಾಖಲೆ ಪರಿಶೀಲನೆ ಮಾಡಿದ ನಂತರ ನ್ಯಾಯ ಬೆಲೆ ಅಂಗಡಿಯವರು ಪ್ರತಿ ಸದಸ್ಯರಿಗೆ 7 ಕೆ.ಜಿ.ಯಂತೆ ಆ ಕುಟುಂಬದ ಎಲ್ಲಾ ಅಕ್ಕಿಯನ್ನು ಹೆಬ್ಬೆಟ್ಟು ನೀಡಿದವರಿಗೆ ನೀಡುತ್ತಾರೆ. ಆದರೆ, ಬಯೋಮೆಟ್ರಿಕ್‌ನಲ್ಲಿ ಸರ್ವರ್‌ ಸಮಸ್ಯೆ ಕಾಣಿಸಿಕೊಳ್ಳುವುದರಿಂದ ಅಕ್ಕಿ ತೆಗೆದುಕೊಳ್ಳಲು ದೂರದ ಹಳ್ಳಿಗಳಿಂದ ಬಂದಿದ್ದ ಜನರು ಕಾಯುತ್ತಾ ಕೂರಬೇಕಾಗುತ್ತದೆ.

ಕೆಲವು ಬಾರಿ ಬೆಳಗ್ಗೆಯಿಂದ ಸಂಜೆಯವರೆಗೆ ಕಾದರೂ ಸರ್ವರ್‌ ಸರಿ ಹೋಗುವುದಿಲ್ಲ. ಮತ್ತೆ ಮಾರನೇ ದಿನ ಕೆಲಸ ಬಿಟ್ಟು ಕಾಯುತ್ತಾ ಕೂರುವ ಪರಿಸ್ಥಿತಿ ಬಂದಿದೆ. ಕೆಲವು ನ್ಯಾಯ ಬೆಲೆ ಅಂಗಡಿಗಳಲ್ಲಿ ಸರ್ವರ್‌ ಜತೆಗೆ ಇಂಟರ್‌ ನೆಟ್‌ ಸಹ ಇರದೆ ಪಡಿತರ ನೀಡಲು ತೊಂದರೆಯಾಗುತ್ತಿದೆ. ಇದರ ಜತೆಗೆ ಕೆಲವು ಗ್ರಾಮೀಣ ಪ್ರದೇಶದ ಜನರು ಅಡಕೆ ಸುಲಿತ
ಮತ್ತಿತರ ಕೆಲಸ ಮಾಡಿ ಹೆಬ್ಬೆಟ್ಟು ನೀಡಿದರೆ ಸ್ಪಷ್ಟವಾಗಿ ಗೋಚರವಾಗುದಿಲ್ಲ. ಇದರಿಂದ ಪಡಿತರದಾರರಿಗೂ, ನ್ಯಾಯ ಬೆಲೆ ಅಂಗಡಿಯವರಿಗೆ ಮಾತಿನ ಚಕಮಕಿ ನಡೆಯುವುದು ಸಾಮಾನ್ಯವಾಗಿಬಿಟ್ಟಿದೆ.

ಯಂತ್ರಗಳೇ ಶಾಪವಾಗುತ್ತಿವೆ: ಈ ಹಿಂದಿನ ಕಾಲದಲ್ಲಿ ನಾಯ್ಯಬೆಲೆ ಅಂಗಡಿಗಳಲ್ಲಿ
ಫಲಾನುಭವಿಗಳಿಂದ ಸಹಿ ಪಡೆದು ಅಕ್ಕಿ, ಗೋಧಿ, ಸಕ್ಕರೆ ಮುಂತಾದ ಪಡಿತರ ನೀಡಲಾಗುತ್ತಿತ್ತು. ಆದರೆ, ಇದರಿಂದ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಮೋಸ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದರಿಂದ ಬಯೋಮೆಟ್ರಿಕ್‌ ಪದ್ಧತಿ ಜಾರಿಗೆ ತರಲಾಯಿತು. ಬಯೋಮೆಟ್ರಿಕ್‌ ಪದ್ಧತಿಯಿಂದ ಯಾವುದೇ ಫಲಾನುಭವಿಗಳಿಗೆ ಮೋಸವಾಗುವುದಿಲ್ಲ.

ಆದರೆ, ಮಲೆನಾಡು ಪ್ರದೇಶ ಗುಡ್ಡ, ಕಾಡುಗಳಿಂದ ಆವೃತವಾಗಿರುವುದರಿಂದ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಇಂಟರ್‌ನೆಟ್‌ ವ್ಯವಸ್ಥೆ ಸರಿಯಾಗಿ ಸಿಕ್ಕುವುದಿಲ್ಲ. ಇದರಿಂದ ಸಂಬಂಧಪಟ್ಟ ಬಯೋ ಮೆಟ್ರಿಕ್‌ ಯಂತ್ರಗಳು ಕೆಲಸ ಮಾಡುವುದಿಲ್ಲ. ಇದರ ಜತೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಾರಿಗೆ ತಂದ ಈ ಸಾಫ್ಟವೇರ್‌(ಎನ್‌ಐಸಿ) ಪದೇ, ಪದೆ ಸರ್ವರ್‌ ಸಮಸ್ಯೆ ತೋರಿಸುತ್ತಿದೆ. 6 ತಿಂಗಳು ಕಳೆದರೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡುತ್ತಿಲ್ಲ.

Advertisement

ಇ. ಕೆವೈಸಿ ಯೋಜನೆ: ಈ ಎಲ್ಲಾ ಸಮಸ್ಯೆ ನಡುವೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ
ಮತ್ತೂಂದು ಕಾನೂನು(ಇ. ಕೆವೈಸಿ) ಜಾರಿಗೆ ತಂದಿದೆ. ಈ ಕಾನೂನಿನ್ವಯ ಕುಟುಂಬದ ಎಲ್ಲಾ ಸದಸ್ಯರು ಒಂದು ಬಾರಿ ನ್ಯಾಯ ಬೆಲೆ ಅಂಗಡಿಗೆ ಬಂದು ಹೆಬ್ಬೆಟ್ಟು ನೀಡಿ ಸಂಬಂಧಪಟ್ಟವರ ಆಧಾರ ಕಾರ್ಡು ಸೇರಿದಂತೆ ಎಲ್ಲಾ ದಾಖಲೆಗಳನ್ನು ನೀಡಬೇಕಾಗಿದೆ. ಜನವರಿ 31ರ ಒಳಗೆ ಎಲ್ಲರೂ ಹೆಬ್ಬೆಟ್ಟು ನೀಡದಿದ್ದರೆ ಅವರಿಗೆ ಪಡಿತರ ನೀಡುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ತಾಲೂಕಿನಲ್ಲಿ ಹಲವು ಬಿಪಿಎಲ್‌ ಕುಟುಂಬಕ್ಕೆ ಸೇರಿದವರು ಬೆಂಗಳೂರು, ಬಾಂಬೆ ಸೇರಿದಂತೆ ಹಲವು ನಗರಗಳಲ್ಲಿ ವಾಸವಾಗಿದ್ದಾರೆ. ಅವರೆಲ್ಲಾ ಗಡಿಬಿಡಿಯಿಂದ ಊರಿಗೆ ಬಂದು ಹೆಬ್ಬೆಟ್ಟು ನೀಡಲು ಹೋದರೆ ಸರ್ವರ್‌ ಪ್ಲಾಬ್ಲಿಂ ಶುರುವಾಗಿ ದಿನಗಟ್ಟಲೇ ಊರಿನಲ್ಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯಕ್ಕೆ ಈ ಅವಧಿಯನ್ನು ಮಾರ್ಚ 31ರ ವರೆಗೆ ವಿಸ್ತರಿಸಲಾಗಿದೆ. ಅಲ್ಲಿಯವರೆಗೆ ಎಂದಿನಂತೆ ಪಡಿತರ ನೀಡಲಾಗುತ್ತದೆ.

ಸಹಿ ಹಾಕಿಸಿಕೊಂಡು ಪಡಿತರ ನೀಡಿ: ನರಸಿಂಹರಾಜಪುರ ತಾಲೂಕಿನಲ್ಲಿ 31 ನ್ಯಾಯಬೆಲೆ
ಅಂಗಡಿಗಳಿದ್ದು, ಸಾವಿರಾರು ಬಿಪಿಎಲ್‌ ಕಾರ್ಡುದಾರರು ಪ್ರತಿ ತಿಂಗಳು ಒಬ್ಬ ಸದಸ್ಯರಿಗೆ
7 ಕೆ.ಜಿ.ಯಂತೆ ಅಕ್ಕಿ ಪಡೆಯಲು ದಿನದ ಕೂಲಿ ಕೆಲಸ ನಿಲ್ಲಿಸಿ ಕಾಯುವ ಪರಿಸ್ಥಿತಿ ತಪ್ಪಿಸಬೇಕಾಗಿದೆ. ಸದ್ಯಕ್ಕೆ ಪಡಿತರ ಚೀಟಿದಾರರ ಒತ್ತಾಯವೆಂದರೆ ಈ ಸಾಫ್ಟವೇರ್‌ ಸರಿಯಾಗಿ ಕೆಲಸ ಮಾಡುವುವರೆಗೆ ಹಿಂದಿನಂತೆ ಸಹಿ ಹಾಕಿಸಿಕೊಂಡು ಪಡಿತರ ನೀಡಬೇಕು. ಇಂಟರ್‌ನೆಟ್‌, ಸರ್ವರ್‌ ಸಮಸ್ಯೆ ಎಂದು ಕಾಯುತ್ತ ಕುಳಿತರೆ ನಮ್ಮ ಜೀವನ ನಿರ್ವಹಣೆಯೇ ಕಷ್ಟವಾಗುತ್ತದೆ. ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಸದ್ಯಕ್ಕೆ ಮಲೆನಾಡಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಾವಿರಾರು ಪಡಿತರ ಕುಟುಂಬದವರ ಸಮಸ್ಯೆ ಬಗೆಹರಿಸಬೇಕಾಗಿದೆ.

ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್‌ ಸಮಸ್ಯೆ ಕಳೆದ 1 ವಾರದಿಂದ ಜಾಸ್ತಿಯಾಗಿದೆ ಎಂಬ ದೂರುಗಳು ಬಂದಿವೆ. ಆದ್ದರಿಂದ ಜನವರಿ 31ರ ವರೆಗೆ ಆಫ್‌ಲೈನ್‌ ನಲ್ಲಿ ಪಡಿತರದಾರರಿಂದ ಸಹಿ ಪಡೆದು ಅಕ್ಕಿ ನೀಡಲು ತೀರ್ಮಾನಿಸಿದ್ದೇವೆ. ನ್ಯಾಯ ಬೆಲೆ ಅಂಗಡಿಯವರು ಚೆಕ್‌ಲಿಸ್ಟ್‌ ತಂದು ಇಲಾಖೆಗೆ ಕೊಟ್ಟರೆ ಅನುಮತಿ ನೀಡಲಾಗುತ್ತದೆ. ಈ ಬಗ್ಗೆ ತಾಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ತಿಳಿಸಲಾಗಿದೆ. ಸರ್ವರ್‌ ಸಮಸ್ಯೆ ರಾಜ್ಯದ ಎಲ್ಲಾ ಕಡೆ ಇದೆ.
ಪಾಲಾಕ್ಷಪ್ಪ,
ಆಹಾರ ನಿರೀಕ್ಷಕರು,
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ನರಸಿಂಹರಾಜಪುರ

ಒಂದು ತಿಂಗಳಿಂದ ನಾವು ನ್ಯಾಯಬೆಲೆ ಅಂಗಡಿಗಳಿಗೆ ತಿರುಗುತ್ತಿದ್ದೇವೆ.ನಮಗೆ ಕೂಲಿ ಕೆಲಸ ನಿಂತು ಹೋಗುತ್ತಿದೆ. ಹೀಗಾದರೆ ಹೊಟ್ಟೆಪಾಡಿಗೆ ಏನು ಮಾಡುವುದು? ಬೆಳಗ್ಗೆಯಿಂದ ಸಂಜೆ ವರೆಗೂ ನ್ಯಾಯಬೆಲೆ ಅಂಗಡಿಗಳ ಮುಂದೆ ಕಾಯಬೇಕಾಗಿದೆ. ಸ್ವಲ್ಪ ಜನರು ಹೆಬ್ಬಟ್ಟು ಕೊಡುತ್ತಿದ್ದಂತೆ ಸರ್ವರ್‌ ಸಮಸ್ಯೆಯಿಂದ ಕಂಪ್ಯೂಟರ್‌ ನಿಂತು ಹೋಗುತ್ತದೆ. ಸಹಿ ಮಾಡಿಸಿಕೊಂಡು ನಮಗೆ ಪಡಿತರ ವ್ಯವಸ್ಥೆ ಮಾಡಿಸಬೇಕು.
ಮುನ್ನಿ, ಲೀಲಾ,
ಪಡಿತರ ಫಲಾನುಭವಿಗಳು

ವರ್ಷದಿಂದಲೂ ಬಯೋಮೆಟ್ರಿಕ್‌ನಲ್ಲಿ ಸರ್ವರ್‌ ಸಮಸ್ಯೆ ಇದೆ. ಇತ್ತೀಚೆಗೆ ಇ. ಕೆವೈಸಿಯನ್ನು ಜಾರಿಗೆ ತಂದ ಮೇಲೆ ಬಯೋಮೆಟ್ರಿಕ್‌ನಲ್ಲಿ ಸಮಸ್ಯೆ ಮತ್ತಷ್ಟು ಜಾಸ್ತಿಯಾಗಿದೆ. ಇದರಿಂದ ಒಬ್ಬ ಪಡಿತರದಾರರ ಹೆಬ್ಬೆಟ್ಟು ಪಡೆದು ಅವರಿಗೆ ಅಕ್ಕಿ ನೀಡಬೇಕಾದರೆ 10 ನಿಮಿಷದಿಂದ ಒಂದು ಗಂಟೆ ಹಿಡಿಯುತ್ತದೆ. ಕೆಲವು ಬಾರಿ ಇಂಟರ್‌ನೆಟ್‌ ಸರಿಯಾಗಿರುವುದಿಲ್ಲ. ಎಲ್ಲವೂ ಸರಿಯಾಗಿದ್ದರೆ ಗಂಟೆಯಲ್ಲಿ 50 ಜನರಿಗೆ ಅಕ್ಕಿ ನೀಡಬಹುದು. ಈ ಮಧ್ಯೆ ಸಹಕಾರ ಸಂಘದ ಚುನಾವಣೆ ಬಂದಿರುವುದರಿಂದ ನಮಗೆ ಕೆಲಸದ ಒತ್ತಡ ಜಾಸ್ತಿಯಾಗಿದೆ. ನಮ್ಮ ನ್ಯಾಯಬೆಲೆ ಅಂಗಡಿಯಲ್ಲಿ 800 ಕಾರ್ಡುದಾರರಿದ್ದಾರೆ.
ಶ್ರೀಕಾಂತ್‌,
ಸಿಇಒ, ಪ್ರಾ.ಕೃ.ಪತ್ತಿನ ಸಹಕಾರ ಸಂಘ

„ಪ್ರಶಾಂತ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next