Advertisement

ತೆಲಂಗಾಣಕ್ಕೆ ಎನ್ನಾರೈಗಳ ಪ್ರಚಾರ

08:53 AM Nov 12, 2018 | Harsha Rao |

ಹೈದರಾಬಾದ್‌/ಹೊಸದಿಲ್ಲಿ: ಈ ಬಾರಿಯ ವಿಧಾನಸಭೆ ಚುನಾವಣೆಗೆ ತೆಲಂಗಾಣದಲ್ಲಿ ಭಾರಿ ಪ್ರಮಾಣದಲ್ಲಿ ಅನಿವಾಸಿ ತೆಲುಗರು ಆಗಮಿಸಿ, ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ವಿಧಾನಸಭೆ ಚುನಾವಣೆಯಿಂದ ಆರಂಭವಾಗಿ 2019ರ ಲೋಕಸಭೆ ಚುನಾವಣೆಯವರೆಗೂ ಇದು ಮುಂದುವರಿಯಲಿದೆ.

Advertisement

ಈಗಾಗಲೇ ರಾಜಕೀಯವಾಗಿ ಸಕ್ರಿಯವಾಗಿರುವ ತೆಲುಗರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮೆಚ್ಚಿನ ಪಕ್ಷಗಳ ಸೈದ್ಧಾಂತಿಕ ನಿಲುವಿನ ಪ್ರಚಾರ ಮಾಡುತ್ತಿದ್ದಾರೆ. 2014ರ ಚುನಾವಣೆಯಲ್ಲೂ ಅನಿವಾಸಿ ಭಾರತೀಯರು ಪ್ರಚಾರ ಮಾಡಿದ್ದರು. ಆದರೆ ಆಗಷ್ಟೇ ತೆಲಂಗಾಣ ರಾಜ್ಯ ಉದಯಿಸಿತ್ತು. ಹೀಗಾಗಿ ಈಗಿನಷ್ಟು ಉತ್ಸಾಹ ಇರಲಿಲ್ಲ ಎಂದು ಟಿಆರ್‌ಎಸ್‌ನ ಎನ್‌ಆರ್‌ಐಗಳ ಆಯೋಜಕ ಮಹೇಶ್‌ ಬಿಗಾಲ ಹೇಳಿದ್ದಾರೆ. ಟಿಆರ್‌ಎಸ್‌  ಪರ ಸುಮಾರು 20-30 ಎನ್‌ಆರ್‌ಐಗಳು ಪ್ರಚಾರ ಮಾಡಲಿದ್ದಾರೆ ಎಂದು ಹೇಳಿದ್ದಾರೆ. 

ಸುಮಾರು 32 ದೇಶಗಳಲ್ಲಿರುವ ಅನಿವಾಸಿ ತೆಲಂಗಾಣ ಪ್ರಜೆಗಳು  ಚುನಾವಣೆ ವೇಳೆ ತೆಲಂಗಾಣಕ್ಕೆ ಆಗಮಿಸಲಿದ್ದಾರೆ. ಅಷ್ಟೇ ಅಲ್ಲ, ಲೋಕಸಭೆ ಚುನಾವಣೆಯ ವೇಳೆಗೆ ಸುಮಾರು 60 ದೇಶಗಳಲ್ಲಿರುವ ಭಾರತೀಯರು ಸ್ವದೇಶಕ್ಕೆ ಮರಳಿ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಇನ್ನೊಂದೆಡೆ ಕೆಲವು ಅನಿವಾಸಿ ಭಾರತೀಯರು ಕಣಕ್ಕಿಳಿಯುವ ಬಯಕೆಯನ್ನೂ ವ್ಯಕ್ತಪಡಿಸಿದ್ದಾರೆ. ಹುಜೂರ್‌ನಗರ ಕ್ಷೇತ್ರದಲ್ಲಿ ಇಬ್ಬರು ಎನ್‌ಆರ್‌ಐಗಳು ಟಿಕೆಟ್‌ ಬಯಸಿದ್ದಾರೆ.

ಇಂದು ಅಧಿಸೂಚನೆ: ಡಿಸೆಂಬರ್‌ 7 ರಂದು ನಡೆಯಲಿರುವ ಮತದಾನಕ್ಕೆ ಪೂರ್ವಭಾವಿಯಾಗಿ ಸೋಮವಾರ ಚುನಾವಣಾ ಆಯೋಗದ ಅಧಿಸೂಚನೆ ಹೊರಬೀಳಲಿದೆ. ನವೆಂಬರ್‌ 19 ರ ವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಟಿಆರೆಸ್‌ ಈಗಾಗಲೇ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಘೋಷಿಸಿದೆ. ಇನ್ನೊಂದೆಡೆ ಟಿಡಿಪಿ, ತೆಲಂಗಾಣ ಜನ ಸಮಿತಿ ಹಾಗೂ ಸಿಪಿಐ ಜೊತೆಗೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದೆ. ಈ ನಾಲ್ಕೂ ಪಕ್ಷಗಳು ಒಟ್ಟಾಗಿ ಟಿಆರೆಸ್ಸನ್ನು ಎದುರಿಸಲಿವೆ. ಬಿಜೆಪಿ ಕೂಡ ಸ್ವತಂತ್ರವಾಗಿ ಕಣಕ್ಕಿಳಿದಿದೆ.  ತೆಲಂಗಾಣ ಚುನಾವಣೆಯಂದೇ ರಾಜಸ್ಥಾನ ವಿಧಾನಸಭೆಗೂ ಚುನಾವಣೆ ನಡೆಯಲಿದೆ. ಅದಕ್ಕೂ ಸೋಮವಾರದಿಂದ ನಾಮಪತ್ರ ಸಲ್ಲಿಕೆ ಶುರುವಾಗಲಿದೆ.

ವಿವರ ನೀಡದಿದ್ದರೆ ನ್ಯಾಯಾಂಗ ನಿಂದನೆ
ತಮ್ಮ ವಿರುದ್ಧ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರವನ್ನು ಅಭ್ಯರ್ಥಿಗಳು ಬಹಿರಂಗಗೊಳಿಸದಿದ್ದರೆ ನ್ಯಾಯಾಂಗ ನಿಂದನೆ ಎಂಬುದಾಗಿ ಪರಿಗಣಿಸಲಾಗುತ್ತದೆ ಎಂದು ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲ, ಇತರ ಅಭ್ಯರ್ಥಿಗಳ ಮೇಲಿನ ಅಪರಾಧ ಪ್ರಕರಣಗಳ ಬಗ್ಗೆ ಸುಳ್ಳು ಮಾಹಿತಿ ನೀಡಿದರೂ ದಂಡ ವಿಧಿಸಲಾಗುತ್ತದೆ. ಚುನಾವಣೆ ಪ್ರಚಾರದ ಅವಧಿಯಲ್ಲಿ ಕನಿಷ್ಠ ಮೂರು ಬಾರಿ ಅಭ್ಯರ್ಥಿಯು ತನ್ನ ಮೇಲಿರುವ ಅಪರಾಧ ಪ್ರಕರಣಗಳ ವಿವರಗಳನ್ನು ಜಾಹೀರಾತು ರೂಪದಲ್ಲಿ ಟಿವಿ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟಿಸಬೇಕು ಎಂದು ಸುಪ್ರೀಂಕೋರ್ಟ್‌ ಆದೇಶಿಸಿತ್ತು. ಈ ಬಗ್ಗೆ  ಅಕ್ಟೋಬರ್‌ 10 ರಂದು ಚುನಾವಣಾ ಆಯೋಗ ಕೂಡ ಪ್ರಕಟಣೆ ಹೊರಡಿಸಿದೆ. ಚುನಾವಣೆ ಹೊಸ್ತಿಲಲ್ಲಿರುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ಮಿಜೋರಾಂ ಮತ್ತು ತೆಲಂಗಾಣದಲ್ಲಿ ಇದು ಅನ್ವಯಗೊಂಡಿದೆ.  ರಾಜಕೀಯ ಪಕ್ಷಗಳೂ ತಮ್ಮ ವಿರುದ್ಧ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರನೀಡಬೇಕು. ಒಂದು ವೇಳೆ ಅಭ್ಯರ್ಥಿ ಯಾವುದೇ ಅಪರಾಧ ಪ್ರಕರಣಗಳನ್ನು ಹೊಂದಿಲ್ಲದಿದ್ದರೆ, ಜಾಹೀರಾತು ಪ್ರಕಟಿಸಬೇಕಿಲ್ಲ. ಜಾಹೀರಾತು ನೀಡಲು ತಗಲುವ ವೆಚ್ಚವನ್ನು ಅಭ್ಯರ್ಥಿ ಅಥವಾ ಪಕ್ಷ ಭರಿಸಬೇಕು. ಈ ವೆಚ್ಚವು ಚುನಾವಣಾ ವೆಚ್ಚಕ್ಕೆ ಒಳಪಟ್ಟಿರುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next