Advertisement

ಸರಕಾರಿ ಶಾಲೆಗಳೆರಡರ ಸ್ವರೂಪ ಬದಲಿಸಿದ ನರೇಗಾ!

01:35 PM Jun 15, 2022 | Team Udayavani |

ಕಾರ್ಕಳ: ಗ್ರಾಮೀಣ ಅಭಿವೃದ್ಧಿಗೆ ಸಹಕರಿಸುತ್ತಿರುವ ನರೇಗಾ ಯೋಜನೆ ಸರಕಾರಿ ಶಾಲೆಯ ಅಭಿವೃದ್ಧಿಗೂ ನೆರವಾಗಿ ಸರಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸುವಂತೆ ಮಾಡಲಾಗುತ್ತಿದೆ.

Advertisement

ಗ್ರಾ.ಪಂ. ನರೇಗಾ ಸಿಬಂದಿ, ಕಾರ್ಕಳ ತಾ|ನಲ್ಲಿ ಮೊದಲ ಬಾರಿಗೆ 2 ಶಾಲೆಗಳ ಮೂಲ ಸೌಕರ್ಯ ಈಡೇರಿಕೆಗೆ ನರೇಗಾ ಯೋಜನೆ ಬಳಸಿಕೊಳ್ಳಲಾಗಿದೆ. ಹಿರ್ಗಾನ ಗ್ರಾ.ಪಂ. ವ್ಯಾಪ್ತಿಯ ಹಿರ್ಗಾನ ಸ. ಪ್ರೌಢಶಾಲೆ ಹಾಗೂ ನೆಲ್ಲಿಕಟ್ಟೆ ಸ.ಹಿ.ಪ್ರಾ. ಇವೆರಡು ಸರಕಾರಿ ಶಾಲೆಗಳನ್ನು ಮ.ಗಾಂ.ಉ. ಖಾತರಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರಾಥಮಿಕ ಹಂತದಲ್ಲಿ ಎರಡು ಶಾಲೆಗಳಲ್ಲಿ ತಲಾ 6 ಲಕ್ಷ ರೂ. ಹಾಗೂ 4 ಲಕ್ಷ ರೂ. ಸೇರಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಆವರಣ ಗೋಡೆ ನಿರ್ಮಾಣಗೊಳಿಸಿ, ಭದ್ರತೆ ಕಲ್ಪಿಸಲಾಗಿದೆ. 1.60 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಇಂಗು ಗುಂಡಿ ನಿರ್ಮಿಸಲಾಗಿದೆ. 855 ಮಾನವ ದಿನ ಸೃಜನೆಯಾಗಿದೆ.

ಗ್ರಾ.ಪಂ. ಮಾದರಿ ಕಾರ್ಯ: ಶಾಲೆಗಳಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಪೂರಕವಾಗಿ ಶಾಲೆಗಳಲ್ಲಿ ಸಮುದಾಯ ಬಚ್ಚಲು ಗುಂಡಿಯನ್ನು ನರೇಗಾ ಯೋಜನೆಯಡಿ ರಚಿಸಲಾಗಿದೆ. ಶಾಲೆ ಯಲ್ಲಿ ನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಸಮರ್ಪಕವಾಗಿ ವಿಲೇವಾರಿ ಮಾಡಲಾಗುತ್ತಿದೆ.

ಕಾಡು ಪ್ರಾಣಿ ಭೀತಿ ದೂರ: ಹಿರ್ಗಾನ ಅರಣ್ಯದಂಚಿನಲ್ಲಿರುವ ಗ್ರಾಮ ವಾಗಿದ್ದು, ಶಾಲೆಗೆ ಸುಸಜ್ಜಿತವಾದ ಕಟ್ಟಡವಿದ್ದರೂ ಸಮರ್ಪಕ ಆವರಣ ಗೋಡೆಯಿಲ್ಲದೆ ಸ್ಥಳೀಯರು ಶಾಲೆಯ ಆವರಣದೊಳಗೆ ಬರುತ್ತಿದ್ದರು. ಅಲ್ಲದೆ ಇಲ್ಲಿ ಕಾಡು ಪ್ರಾಣಿಗಳ ಹಾವಳಿಯೂ ಹೆಚ್ಚಾಗಿ ಕಾಡುತ್ತಿತ್ತು. ಆದ್ದರಿಂದ ಆವರಣ ಗೋಡೆಯ ಆವಶ್ಯಕತೆಯಿತ್ತು.

ಬಚ್ಚಲುಗುಂಡಿ ನಿರ್ಮಾಣ: ಮಕ್ಕಳು ಕೈ ತೊಳೆದ ನೀರು, ಅಡುಗೆ ಕೋಣೆಯ ಪಾತ್ರೆ, ತರಕಾರಿ ಇನ್ನಿತರ ವಸ್ತುಗಳನ್ನು ತೊಳೆದ ನೀರನ್ನು ತೆಂಗಿನ ಬುಡಕ್ಕೆ ಹರಿಯಲು ಬಿಡುತ್ತಿದ್ದೆವು. ನರೇಗಾ ಯೋಜನೆಯಡಿ ಬಚ್ಚಲು ಗುಂಡಿ ನಿರ್ಮಿಸಿದ ಬಳಿಕ ನೀರನ್ನು ಗುಂಡಿಯಲ್ಲಿ ಇಂಗಿಸಲಾಗುತ್ತಿದೆ. ಉದ್ಯೋಗ ಖಾತರಿ ಯೋಜನೆಯಡಿ ಪೌಷ್ಟಿಕ ಕೈ ತೋಟ ನಿರ್ಮಾಣಕ್ಕೂ ಬೇಡಿಕೆಯಿಟ್ಟಿದ್ದೇವೆ ಎನ್ನುತ್ತಾರೆ ಹಿರ್ಗಾನ ಸ. ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಹೇಮಲತಾ ಅವರು.

Advertisement

ಶಾಲೆಯ ಪಕ್ಕದಲ್ಲಿ ರಸ್ತೆಯಿದ್ದು, ಮಕ್ಕಳ ಹಿತದೃಷ್ಟಿಯಿಂದ ಶಾಲೆಗೆ ಆವರಣ ಗೋಡೆಯ ಆವಶ್ಯಕತೆ ಇತ್ತು, ನರೇಗಾ ಯೋಜನೆಯಡಿ ಆವರಣ ಗೋಡೆ ನಿರ್ಮಾಣವಾಗಿರುವುದರಿಂದ ಸಾಕಷ್ಟು ಉಪಯೋಗವಾಗಿದೆ ಎಂದು ನೆಲ್ಲಿಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮಲ್ಲಿಕಾ ಹೇಳುತ್ತಾರೆ.

ಹಿರ್ಗಾನ ಗ್ರಾ.ಪಂ. ಎರಡು ಶಾಲೆಗಳಿಗೆ ಆವರಣ ಗೋಡೆ ಹಾಗೂ ಬಚ್ಚಲು ಗುಂಡಿ ನಿರ್ಮಾಣಗೊಂಡಿವೆ. ಇನ್ನು ಮುಂದಿನ ಹಂತದಲ್ಲಿ ಚಿಕ್ಕಲ್‌ಬೆಟ್ಟು ಸರಕಾರಿ ಶಾಲೆಗೆ ಬಚ್ಚಲು ಗುಂಡಿ ರಚನೆಯಾಗಲಿದೆ. ಜತೆಗೆ ಎಲ್ಲಾ ಶಾಲೆಗಳಿಗೆ ಮಳೆ ನೀರು ಕೊಯ್ಲು, ಪೌಷ್ಟಿಕ ಕೈ ತೋಟ ನಿರ್ಮಾಣವಾಗಲಿದೆ. ಅಜಾದಿ ಕಿ ಅಮೃತ ಮಹೋತ್ಸವದ ಅಂಗವಾಗಿ ಅಮೃತ ಉದ್ಯಾನವನವನ್ನು ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನರೇಗಾ ಯೋಜನೆಯಡಿ ಇನ್ನು ಹೆಚ್ಚಿನ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹಿರ್ಗಾನ ಗ್ರಾ.ಪಂ. ಅಧ್ಯಕ್ಷ ಸಂತೋಷ್‌ ಶೆಟ್ಟಿ ಅಭಿಪ್ರಾಯಪಟ್ಟರು.

ಹಿರ್ಗಾನ ಗ್ರಾ.ಪಂ. ಅಮೃತ ಗ್ರಾ.ಪಂ.ಗೆ ಆಯ್ಕೆಗೊಂಡಿದ್ದು, ಉದ್ಯೋಗ ಖಾತರಿ ಯೋಜನೆಯಡಿ ಸರಕಾರಿ ಶಾಲೆಗಳನ್ನು ಸಮಗ್ರ ಅಭಿವೃದ್ಧಿಪಡಿಸಲಾಗುತ್ತದೆ. 3 ಸರಕಾರಿ ಶಾಲೆಗಳ ಪೈಕಿ ಈಗ ಎರಡು ಶಾಲೆಗಳಿಗೆ ಆವರಣ ಗೋಡೆ ಹಾಗೂ ಸಮುದಾಯ ಬಚ್ಚಲು ಗುಂಡಿ ನಿರ್ಮಾಣ ವಾಗಿದೆ. ಅಮೃತ ಉದ್ಯಾನವನ ಸೇರಿದಂತೆ ಇನ್ನಿತರ ಮಾದರಿ ಕಾಮಗಾರಿಗಳನ್ನು ಅನುಷ್ಠಾನ ಗೊಳಿಸಲು ಯೋಜನೆ ರೂಪಿಸಿದ್ದೇವೆ ಎಂದು ಹಿರ್ಗಾನ ಪಿಡಿಒ ಸಂಧ್ಯಾ ಶೆಟ್ಟಿ ಹೇಳಿದರು.

ಅಧಿಕಾರಿಗಳ ಭೇಟಿ: ರಕ್ಷಣ ಸಚಿವಾಲಯದ ನಿರ್ದೇಶಕರು, ಜಲಶಕ್ತಿ ಅಭಿಯಾನದ ನೋಡಲ್‌ ಅಧಿಕಾರಿ ಪಿಯುಷ್‌ ರಂಜನ್‌ ಹಾಗೂ ಅಡಿಷನಲ್‌ ಸೆಕ್ರೆಟರಿ ದೇಬಾಶ್ರಿ ಮುಖರ್ಜಿ ಉಡುಪಿ ಜಿಲ್ಲೆಗೆ ಭೇಟಿ ನೀಡಿದ ವೇಳೆ ಹಿರ್ಗಾನ ಗ್ರಾ.ಪಂ.ನಲ್ಲಿ ಜಲಶಕ್ತಿ ಅಭಿಯಾನದಡಿ ಮನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಸರಕಾರಿ ಪ್ರೌಢಶಾಲೆಯ ಸಮುದಾಯ ಬಚ್ಚಲು ಗುಂಡಿಯನ್ನು ಪರಿಶೀಲನೆ ನಡೆಸಿದರು.

ಜಿಲ್ಲೆಗೆ ಮಾದರಿ:  ಗ್ರಾ.ಪಂ.ನ ಚುನಾಯಿತ ಪ್ರತಿನಿಧಿಗಳು, ಪಂ.ಅಧಿಕಾರಿ, ಸಿಬಂದಿಯಲ್ಲಿನ ಅಭಿವೃದ್ಧಿ, ಹೊಂದಾಣಿಕೆ ಮನೋಭಾವ ಯೋಜನೆ ಸಫ‌ಲತೆಗೊಳ್ಳುವಲ್ಲಿ ಸಹಕಾರಿಯಾಗಿದೆ. ತಾ.ಪಂ. ನರೇಗಾ ಸಿಬಂದಿ, ಕಾರ್ಯ ಕ್ಷಮತೆಯಿಂದಲೂ ಸಾಧ್ಯವಾಗಿದೆ. ಗ್ರಾ.ಪಂ. ತಾ|ನಲ್ಲಿ ಅಷ್ಟೇ ಅಲ್ಲ ಜಿಲ್ಲೆಗೂ ಮಾದರಿಯಾಗಿದೆ. -ಗುರುದತ್ತ್, ಇ.ಒ. ತಾ.ಪಂ. ಕಾರ್ಕಳ

-ಬಾಲಕೃಷ್ಣ ಭೀಮಗುಳಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next