Advertisement

ಅಭಿವೃದ್ಧಿ ಕಾಮಗಾರಿಯಲ್ಲಿ ನೆಪ ಸಹಿಸಲ್ಲ

03:02 PM Aug 15, 2017 | Team Udayavani |

ಚಿತ್ರದುರ್ಗ: ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 800 ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ. ಆ ಎಲ್ಲ ಕಾಮಗಾರಿಗಳ ಟೆಂಡರ್‌ ಅಂತಿಮಗೊಳಿಸಿ ಸೆಪ್ಟೆಂಬರ್‌ ಅಂತ್ಯದೊಳಗೆ ಕಾಮಗಾರಿ ಆರಂಭಿಸಬೇಕು ಎಂದು
ಸಮಾಜಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ಆಂಜನೇಯ ಸೂಚನೆ ನೀಡಿದರು.

Advertisement

ಇಲ್ಲಿನ ಜಿಪಂ ಮಿನಿ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ವಿಶೇಷ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಂದಾಜು ಪಟ್ಟಿ ತಯಾರಿಸಿ ಆಡಳಿತಾತ್ಮಕ ಮತ್ತು ತಾಂತ್ರಿಕ ಒಪ್ಪಿಗೆ ಪಡೆಯುವ ಹಂತದಲ್ಲಿ ತೊಡಕುಗಳಿದ್ದಲ್ಲಿ ನಾನೇ ಸಂಬಂಧಿಸಿದ ಇಲಾಖೆಗೆ ಬಂದು ತೊಡಕು ನಿವಾರಣೆ ಮಾಡಿಕೊಡುತ್ತೇನೆ. ಆದರೂ ಯಾವೊಬ್ಬ ಅಧಿ ಕಾರಿಯೂ ಸಮಸ್ಯೆಗಳ ಬಗ್ಗೆ ತಿಳಿಸಿಲ್ಲ. ಮೊದಲು ಜವಾಬ್ದಾರಿಯಿಂದ ಕೆಲಸ ಮಾಡಿ ಎಂದು ತಾಕೀತು ಮಾಡಿದರು. 

ಲ್ಯಾಂಡ್‌ ಆರ್ಮಿ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದೆ. ಎಲ್ಲ ಕಾಮಗಾರಿಗಳಿಗೂ ತುರ್ತಾಗಿ ಚಾಲನೆ ನೀಡಬೇಕು. ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಸಂಬಂಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರತಿ ತಿಂಗಳು ಯಾವ ಹಂತದಲ್ಲಿದೆ ಎನ್ನುವ ವರದಿಯನ್ನು ನೀಡಬೇಕು ಎಂದು ಜಿಲ್ಲಾಧಿಕಾರಿಗೆ ತಿಳಿಸಿದರು.

ಸಮಾಜಕಲ್ಯಾಣ ಇಲಾಖೆ ನೀಡುವ ಅನುದಾನಕ್ಕೆ ಸರಿಯಾಗಿ ಅಂದಾಜು ಪಟ್ಟಿ ತಯಾರಿಸಿ ಅನುಮೋದನೆ ಪಡೆದು ಕಾಮಗಾರಿ ಆರಂಭಿಸಬೇಕು. ವಿಳಂಬ ಮಾಡದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡುತ್ತಿರಬೇಕೆಂದು ಸೂಚಿಸಿದರು. ಕುಂಚಿಗನಾಳ ಸಮೀಪದ ಗುಡ್ಡದಲ್ಲಿ ಜಿಲ್ಲಾಡಳಿತದ ವಿವಿಧ ಆಡಳಿತ ಕಚೇರಿಗಳಿಗೆ ಜಾಗ ಗುರುತಿಸಲಾಗಿತ್ತು. ಆ ಜಾಗ ಮತ್ತು ಹಾಲಿ ಇರುವ ಜಿಲ್ಲಾಡಳಿತ ಸುತ್ತಮುತ್ತಲಿನ ಪ್ರದೇಶ ಬಳಸಿಕೊಂಡು ಜಿಲ್ಲಾಧಿಕಾರಿ ಕಚೇರಿ ನಿರ್ಮಾಣ ಮಾಡುವ ಬಗ್ಗೆ ಸಾಧಕ ಬಾಧಕಗಳ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗೆ ತಿಳಿಸಿದರು.

ಚಿತ್ರದುರ್ಗ ನಗರಕ್ಕೆ 25 ಕೋಟಿ ರೂ.ಗಳ ವಿಶೇಷ ಅನುದಾನ ನೀಡಲಾಗಿದೆ. ಈ ಅನುದಾನದಲ್ಲಿ ಚಳ್ಳಕೆರೆ ಟೋಲ್‌ಗೇಟ್‌ನಿಂದ ಪ್ರವಾಸಿಮಂದಿರ ತನಕ ರಸ್ತೆ ಅಗಲೀಕರಣ ಮಾಡಬೇಕು. ಅಲ್ಲದೆ ಅನುದಾನದ ಉಳಿಕೆ ನೋಡಿಕೊಂಡು ಪ್ರವಾಸಿ ಮಂದಿರದಿಂದ ಗಾಂಧಿ  ವೃತ್ತದವರೆಗೆ ರಸ್ತೆ ಅಗಲೀಕರಣ ಮಾಡಬೇಕು. ರಸ್ತೆ ಅಗಲೀಕರಣಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೂಕ್ತ ಕ್ರಮ ಕೈಗೊಂಡು ತುರ್ತಾಗಿ ರಸ್ತೆ ಅಗಲೀಕರಣ ಮಾಡಬೇಕೆಂದರು. 36 ಕೋಟಿ ರೂ.ಗಳಲ್ಲಿ ನಗರೋತ್ಥಾನದಲ್ಲಿ ರಸ್ತೆ ಅಭಿವೃದ್ಧಿ, 25 ಕೋಟಿ ರೂ. ವಿಶೇಷ ಅನುದಾನ ಒಂದೇ ಪ್ಯಾಕೇಜ್‌ ಮಾಡಿ ಕಾಲಹರಣ ಮಾಡಬೇಡಿ. ಸಿಂಗಲ್‌ ಪ್ಯಾಕೇಜ್‌ ಮಾಡಿದರೆ ಟೆಂಡರ್‌ ಪ್ರಕ್ರಿಯೆ, ಕಾಮಗಾರಿ ಹಂತ ಎಂದು ವಿಳಂಬವಾಗುತ್ತದೆ.
ಆದ್ದರಿಂದ ಗಮನವಿಟ್ಟು ಕೆಲಸ ಮಾಡಬೇಕು ಎಂದು ಹೇಳಿದರು.

Advertisement

ಸಭೆಯಲ್ಲಿ ಜಿಲ್ಲಾಧಿಕಾರಿ ವಸಿರೆಡ್ಡಿ ವಿಜಯ ಜೋತ್ಸಾ°, ಜಿಪಂ ಸಿಇಒ ಪಿ.ಎನ್‌. ರವೀಂದ್ರ, ಅಪರ ಜಿಲ್ಲಾಧಿ ಕಾರಿ ಟಿ. ರಾಘವೇಂದ್ರ, ಎಸ್ಪಿ ಶ್ರೀನಾಥ್‌ ಮಹದೇವ ಜೋಶಿ ಮತ್ತಿತರ ಅಧಿಕಾರಿಗಳು ಇದ್ದರು.

ವೈದ್ಯಕೀಯ ಕಾಲೇಜಿಗೆ ಶೀಘ್ರ ಆಡಳಿತಾಧಿಕಾರಿ ನೇಮಕ ಸರ್ಕಾರಿ ಕಲಾ ಕಾಲೇಜು ಹೈಟೆಕ್‌ ಕಟ್ಟಡ ನಿರ್ಮಾಣಕ್ಕೆ 10 ಕೋಟಿ ರೂ.ಗಳ ಟೆಂಡರ್‌ ಕರೆಯಲಾಗಿದೆ. ಸರ್ಕಾರಿ ವಿಜ್ಞಾನ ಕಾಲೇಜಿನ ಹೈಟೆಕ್‌ ಕಟ್ಟಡ ನಿರ್ಮಾಣ ಮಾಡಲು ಈಗಾಗಲೇ ಶಿಕ್ಷಣ ಇಲಾಖೆ ಅನುಮತಿ ನೀಡಿದ್ದು, ಅಂದಾಜು ಪಟ್ಟಿ ತಯಾರಿಕೆ ಹಂತದಲ್ಲಿದೆ ಎಂದು ಸಚಿವ ಎಚ್‌. ಆಂಜನೇಯ ತಿಳಿಸಿದರು. ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣಕ್ಕೆ 191 ಕೋಟಿ ರೂ.ಗಳ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.

ಯಾವುದೇ ಹಂತದ ಕೆಲಸ ಕಾರ್ಯ ಆಗಬೇಕಿದ್ದಲ್ಲಿ ಖುದ್ದಾಗಿ ನನ್ನನ್ನು ಭೇಟಿ ಮಾಡಬೇಕು. ವೈದ್ಯಕೀಯ ಕಾಲೇಜಿಗೆ ಆಡಳಿತಾ ಧಿಕಾರಿಯನ್ನು ಶೀಘ್ರದಲ್ಲೇ ನೇಮಕ ಮಾಡಲಾಗುತ್ತದೆ. ಮುಂದಿನ ಸಂಪುಟ ಸಭೆಯಲ್ಲಿ ಈ ವಿಷಯ ಬರುವ ಸಾಧ್ಯತೆ ಇದ್ದು, ಅಂದು ತೀರ್ಮಾನವಾಗಲಿದೆ ಎಂದರು.

ಜಿಲ್ಲೆಯಲ್ಲಿ ತೀವ್ರ ಬರ ಇದೆ. ಹಾಗಾಗಿ ಯಾವುದೇ ಕಾರಣಕ್ಕೂ ಯಾವೊಬ್ಬ ಅಧಿಕಾರಿಯೂ ಕೇಂದ್ರ ಸ್ಥಾನ ಬಿಟ್ಟು ತೆರಳುವಂತಿಲ್ಲ. ನೀರು, ಜಾನುವಾರುಗಳಿಗೆ ಮೇವು, ಸ್ಥಳದಲ್ಲೇ ಕೂಲಿ ನೀಡುವ ಕಾರ್ಯ ಮಾಡಬೇಕು. 
ಎಚ್‌. ಆಂಜನೇಯ ಜಿಲ್ಲಾ ಉಸ್ತುವಾರಿ ಸಚಿವರು.

Advertisement

Udayavani is now on Telegram. Click here to join our channel and stay updated with the latest news.

Next