Advertisement
ಕೊನೆಯವಳಾದ ನನಗೆ ನನ್ನಪ್ಪ ಅಪ್ಪನೆನಿಸುವಾಗ ಅವನಿಗೆ ಐವತ್ತು ದಾಟಿದೆ. ಸಾಯುವಾಗ ತೊಂಬತ್ತರ ಆ ಇಳಿವಯಸ್ಸಿನಲ್ಲೂ ಅಪ್ಪನ ಮುಖದಲ್ಲಿ ಬಸವಳಿಕೆ ಕಂಡದ್ದಿಲ್ಲ. ಬಹುಶಃ ಬುದ್ಧಿ ಬೆಳೆದಂತೆ ತನ್ನ ಮಕ್ಕಳೂ ಆತನಿಗೆ ಹೆಗಲು ಕೊಡ್ತಾ ಇದ್ದಿದ್ರಿಂದ್ಲೋ ಏನೋ. ಆದರೆ, ನಿನ್ನಪ್ಪನಿಗೆ ಇಬ್ಬರೇ ಮಕ್ಕಳು. ನೀನೊಬ್ಬನೇ ಮಗ. ನಿನ್ನಪ್ಪ ಮೂವತ್ತರಲ್ಲೇ ಅಪ್ಪನಾಗಿದ್ದರೂ ಐವತ್ತರಲ್ಲೇ ಎಪ್ಪತ್ತೈದು ಆದಂತೆ ಕಂಗಾಲಾಗಿದ್ದಾನೆ. ಕಾರಣ ಇಲ್ಲದಿಲ್ಲ. ವಿಪರೀತ ಒತ್ತಡದ ಈ ಆಧುನಿಕ ಬದುಕಿನಲ್ಲಿ ನೀನು ಹುಟ್ಟುವ ಮೊದಲೇ ಆತನ ಬೆನ್ನಿಗಂಟಿಕೊಂಡ ಅನಿವಾರ್ಯವೆನಿಸುವ ಹೊಣೆಗಾರಿಕೆಗಳು. ಒಳ್ಳೆಯ ಶಾಲೆಗಾಗಿ ಹುಡುಕಾಟ, ಅದರ ಅಡ್ಮಿಶನ್, ಬೆರಗಾಗಿಸುವ ಫೀಸು, ಅದನ್ನು ಹೊಂದಿಸುವ ಭರಾಟೆ, ಮುಂದೆ ಟ್ಯೂಶನ್, ಸ್ಪೆಷಲ್ ಕ್ಲಾಸ್, ಸ್ಪೆಷಲ್ ಕೋರ್ಸ್‌ಗಳ ಹಿಂದಿನ ಓಡಾಟ, ಮುಂದೆ ಕಾಲೇಜು ಮುಟ್ಟಿದಾಗ ವಿಷಯಗಳ ಆಯ್ಕೆ, ವೃತ್ತಿಪರ ಕೋರ್ಸ್‌ಗಳ ಆಯ್ಕೆ… ಹೀಗೇ ತಲೆಕೆಡಿಸಿಕೊಂಡದ್ದು ಒಂದೋ ಎರಡೋ.
Related Articles
Advertisement
ಮುಂದೆ ನಿಂಗೆ ಜವಾಬ್ದಾರಿ ಇಲ್ಲ ಅಂತ ಹೇಳಲ್ಲ. ಬದಲಾಗುವ ಕಾಲದಲ್ಲಿ ನಿನಗಿನ್ನೂ ಹೊಸಹೊಸ ಎಷ್ಟೊಂದು ಜವಾಬ್ದಾರಿಗಳಿವೆಯೋ ಏನೋ! ಅದಕ್ಕೆ ನೀನೀಗಲೇ ಸಜ್ಜಾಗಬೇಕು. ಕೂಸು ಹುಟ್ಟುವುದಕ್ಕೆ ಮುಂಚೆ ಕುಲಾವಿ ಹೊಲಿಸುವ ಕಾಲ ಇದು. ಮುಂದೆ ಹುಟ್ಟಲಿರುವ ನಿನ್ನ ಮಗುವಿಗೆ ಉತ್ತಮ ಶಾಲೆಯಲ್ಲಿ ಈಗಲೇ ಸೀಟು ಕಾಯ್ದಿರಿಸಬೇಕು, ಸಂದರ್ಶನ ಎದುರಿಸಲು ತಯಾರಿ ನಡೆಸಬೇಕು, ಜೊತೆಗೆ ರೇಶನ್‌ಕಾರ್ಡ್, ಬ್ಯಾಂಕ್‌ಅಕೌಂಟ್, ಡೆಬಿಟ್‌ಕಾರ್ಡ್, ಕ್ರೆಡಿಟ್‌ಕಾರ್ಡ್, ಎಟಿಎಂ, ಡ್ರೈವಿಂಗ್ ಲೈಸೆನ್ಸ್ , ಪಾಸ್‌ಪೋರ್ಟ್, ಪಾನ್‌ಕಾರ್ಡ್, ಆಧಾರ್‌ಕಾರ್ಡ್… ಹೀಗೆ ಇನ್ನೂ ಏನೇನು ಹೊಸದಾಗಿ ಹುಟ್ಟಿಕೊಳ್ತದೋ ಯಾರಿಗೆ ಗೊತ್ತು !
ಮಕ್ಕಳ ವಿಚಾರ ಬಿಡು, ಮನೆವಾರ್ತೆಯಲ್ಲೂ ನೀನಿನ್ನು ಪಳಗಬೇಕು ಮಗನೇ. ನಿಂಗಂತೂ ಗ್ಯಾಸ್ ಹಚ್ಚೋಕೂ ಗೊತ್ತಿಲ್ಲ. ಅಡುಗೆ ಮನೆಗೆ ಬಂದಿದ್ರೆ ತಾನೆ ಗೊತ್ತಾಗೋದಿಕ್ಕೆ. ಅದು ನಿನ್ನ ತಪ್ಪಲ್ಲ ಬಿಡು. ನಿನ್ನಲ್ಲಿ ಕೆಲ್ಸ ಮಾಡೊದಿಕ್ಕೆ ನಾನು ಬಿಟ್ಟಿದ್ರೆ ತಾನೆ! ನನ್ನ ಹಿಂದಿನ ಮನೋಧರ್ಮದಂತೆ ನೀನು ಗಂಡು ಮಗ ಎನ್ನುವ ಕಾರಣವಿರಲೂಬಹುದು. ಹಾಗಂತ, ನೀನಿನ್ನು ಸುಮ್ಮನಿದ್ದರೆ ಸಾಧ್ಯವಿಲ್ಲ. ಎಲ್ಲವನ್ನೂ ಆದಷ್ಟು ಬೇಗ ಕಲ್ತುಕೋಬೇಕು. ನಿನ್ನಪ್ಪನಲ್ಲಿ ನಾನು ಕೆಲಸ ಮಾಡಿಸಲಿಲ್ಲವೆಂದು ನಿನಗೆ ಬರುವ ಸಂಗಾತಿ ನಿನ್ನನ್ನು ಮಾಡಿಸದೇ ಬಿಡುವುದಿಲ್ಲ. ನಿನಗೆ ತಿಳಿಯದಿದ್ದರೆ ಆಕೆಯೇ ನೀನು ಕಲಿಯುವುದಕ್ಕೆ ಪ್ರೇರಕಳಾಗುತ್ತಾಳೆ. ಈಗಿನ ಪರಿಸ್ಥಿತಿಯಲ್ಲಿ ನೀನು ಮಾಡದೇ ಇರುವುದೂ ಸರಿಯಲ್ಲ. ಈಗ ಕಾಲ ಹಿಂದಿನಂತಲ್ಲ. ನಿನ್ನಂತೆಯೇ ಆಕೆಯೂ ದುಡಿದು ಬರುವಾಗ ಇಬ್ಬರಿಗೂ ದಣಿವು ಒಂದೇ ರೀತಿಯಲ್ವಾ… ಪರಸ್ಪರ ಇಬ್ಬರೂ ಒಬ್ಬರನ್ನೊಬ್ಬರು ಅರ್ಥಮಾಡ್ಕೊಂಡು ಕೆಲಸ ಹಂಚೊಡು ಮಾಡಿದ್ರೇನೇ ಬದುಕು ನೆಮ್ಮದಿಯಿಂದ ಸಾಗೋದು. ಅದು ಮುಂದಿನ ವಿಷಯ. ಬಿಡು. ಈಗ ಕೇಳು, ನಿನ್ನನ್ನೂ, ನಿನ್ನ ಜವಾಬ್ದಾರಿಗಳನ್ನೂ ಹೊತ್ತು ಹೊತ್ತು ನಿನ್ನಪ್ಪನ ಹೆಗಲು ಸವೆದಿದೆ ಕಣೊ. ಹೊರೆ ಭಾರದಿಂದ ನಿನ್ನಪ್ಪನ ಆತ್ಮವಿಶ್ವಾಸ ಕುಗ್ಗಿದೆ. ಅನ್ನದ ಹುಡುಕಾಟಕ್ಕಾಗಿ ಮಣ್ಣಿನಾಳಗಳಲ್ಲಿ ಕಣ್ಣನೂರಿದ ಜೀವ ಅದು. ನಿನ್ನಮ್ಮನಂತೆ ತನ್ನ ಬೇಜಾರು, ಅಸಹನೆ, ಆಯಾಸವನ್ನು ಹೇಳಿಕೊಂಡು ತಿರುಗುವ, ಆಯಾಯ ಕ್ಷಣಕ್ಕೇ ಹೊರಹಾಕಿಬಿಡುವ ಸ್ವಭಾವವೂ ಅಪ್ಪನದ್ದಲ್ಲ. ಅದಕ್ಕಾಗಿಯೇ ಹೇಳ್ತಾ ಇದ್ದೀನಿ ಮಗನೇ, ಇನ್ನು ಮುಂದೆ ಪ್ರತಿಯೊಂದಕ್ಕೂ ಅಪ್ಪನನ್ನೇ ಅವಲಂಬಿಸುವುದನ್ನು ಬಿಟ್ಟು, ಅಪ್ಪನ ಜವಾಬ್ದಾರಿಯ ಹೊರೆಯನ್ನು ಈಗಿಂದೀಗಲೇ ನಿನ್ನ ಹೆಗಲಿಗೇರಿಸಿಕೋ. ಅಪ್ಪನ ಎದೆಭಾರವನ್ನು ಇಳಿಸು. ಅಪ್ಪ ಒಮ್ಮೆ ಜೋರಾಗಿ ದೀರ್ಘಶ್ವಾಸವನ್ನು ಹೊರಬಿಟ್ಟು ನಿರಾಳವಾಗಲಿ. ಸರಿಯಾದ ವಯಸ್ಸಿಗೆ ಮದುವೆಯಾಗಿ ನೀನೂ ಒಮ್ಮೆ ಅಪ್ಪನಾಗಿ ಅಪ್ಪನಿಗೊಬ್ಬ ಅಪ್ಪನಾಗಿ ಬಿಡು. ಅಪ್ಪನ ಸಂಕಷ್ಟವನ್ನು ಅರಿತುಕೊಂಡು ಪ್ರೀತಿಯಿಂದ, ಕೊಂಡಾಟದಿಂದ ಯೋಗಕ್ಷೇಮವನ್ನು ವಿಚಾರಿಸಿಕೋ. ಆತನ ಮುಂದಿನ ಬದುಕಿಗೆ ಊರುಗೋಲಾಗು. ಹಾಂ! ಹಾಂ!… ಕೇವಲ ಅಪ್ಪನ ಜಾಗ ತುಂಬಿದರೆ ಮುಗಿಯಲಿಲ್ಲ. ಅಪ್ಪನ ಹೆಂಡತಿ-ಮಕ್ಕಳ ಮೇಲಿನ ಪ್ರೀತಿ, ಕುಟುಂಬ ಪ್ರೀತಿ, ಸಹೋದರ ವಾತ್ಸಲ್ಯ, ಪರಹಿತಕಾಳಜಿ, ನೌಕರಪ್ರೇಮ, ಮಾನವೀಯತೆ, ಉದಾರತೆ, ಹೃದಯ ಶ್ರೀಮಂತಿಕೆ, ಸಮಯಪ್ರಜ್ಞೆ , ದಕ್ಷತೆ, ಪ್ರಾಮಾಣಿಕತೆ, ಪಾರದರ್ಶಕತೆ, ನೇರ ನಡೆ-ನುಡಿ, ರಾಷ್ಟ್ರಭಕ್ತಿ ಎಲ್ಲವನ್ನೂ ಒಗ್ಗೂಡಿಸಿಕೊಂಡು ಅದರಂತೆಯೇ ನಡೆದುಕೊಳ್ಳುವುದನ್ನು ಕಲಿತುಕೋ. ಮಾತ್ರವಲ್ಲ , ನಿನ್ನ ಮಕ್ಕಳಿಗೂ ಅದನ್ನು ದಾಟಿಸುವ ಕೆಲಸವನ್ನು ಮಾಡಬೇಕು. ಹೆಣ್ಣಿಗೆ ಗೌರವ ಕೊಡುವುದನ್ನು ಮರೆಯಬೇಡ. ತನ್ನ ಕಾಲ ಮೇಲೆ ತಾನು ನಿಲ್ಲುವ, ಯಾರನ್ನೂ ಅವಲಂಬಿತನಾಗದಂತೆ ತನ್ನ ಅಗತ್ಯಕ್ಕೆ ತಾನೇ ಸಜ್ಜಾಗುವ ಪರಿಯನ್ನು ಕಾಯ್ದುಕೋ. ಒಟ್ಟಿನಲ್ಲಿ ನಿನ್ನಪ್ಪನ ಪ್ರತಿರೂಪವಾಗಬೇಕು ನೀನು. ಸಮಾಜಮುಖೀಯಾಗಿ ಬೆಳೆಯಬೇಕು. ನೀನು ಮುಂದೊಂದು ದಿನ ಅಪ್ಪನಾಗಿ, ನಿನ್ನಪ್ಪ ಅಜ್ಜನಾಗಿ, ತನ್ನ ಮಗ ತನ್ನಂತಹ ಅಪ್ಪನಾದ ಸಂತೃಪ್ತಿ ನಿನ್ನಪ್ಪನ ಮುಖದಲ್ಲಿ ಕಾಣುವುದನ್ನು ನೋಡಲು ನಿನ್ನಮ್ಮ ಕಡೆಗಣ್ಣಿನಿಂದ ಕಾಯುತ್ತಿದ್ದಾಳೆ. ಹೊರೆ ಇಳಿದ ಅಪ್ಪನ ಸಂತೋಷದ, ನೆಮ್ಮದಿಯ ಮುಖವನ್ನು, ನಿರಾತಂಕದ ನಿರಾಳ ಬದುಕನ್ನು ನೋಡಿ ಕಣ್ತುಂಬಿಸಿಕೊಳ್ಳುವ ಹಂಬಲ; ಅಂತೆಯೇ ಅಪ್ಪನಾದ ಬಳಿಕ ನಿನ್ನನ್ನೂ ! – ರೂಪಕಲಾ ಆಳ್ವ