ಶಿವಮೊಗ್ಗ: ‘ಶಿವಮೊಗ್ಗದಲ್ಲಿ ಈಗ ರೌಡಿಗಳು ಇಲ್ಲ.ಕೆಲವರು ಸತ್ತಿದ್ದಾರೆ, ಇನ್ನು ಕೆಲವರು ಜೈಲಿನಲ್ಲಿ ಇದ್ದಾರೆ. ರೌಡಿ ವರ್ತನೆ ಮಾಡುವ ಕಾಲ ಮುಗಿದಿದೆ. ಈಗ ಅದಕ್ಕೆ ಅವಕಾಶ ಕೊಡುವುದಿಲ್ಲ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಭಾನುವಾರ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ರೌಡಿ ನಿಗ್ರಹ ದಳ ರಚನೆ ವಿಚಾರಕ್ಕೆ ಸಂಬಂಧಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾನೂನಿನ ಬಗ್ಗೆ ಭಯ ಇಲ್ಲದಿರುವಂತಹ ಒಂದಷ್ಟು ಬೆರಳೆಣಿಕೆ ಶಕ್ತಿಗಳು ಇದ್ದಾವೆ, ಅವರುಗಳನ್ನು ಕಾನೊನು ವ್ಯಾಪ್ತಿಗೆ ತಂದು ದಮನ ಮಾಡುವ, ನಿರ್ಮೂಲನೆ ಮಾಡುವಂತಹ ಎಲ್ಲಾ ಪ್ರಯತ್ನ ಆಗುತ್ತಿದೆ. ಬಹಳ ಹಿಂದೆ ಶಿವಮೊಗ್ಗ ರೌಡಿಗಳ ಟ್ರೈನಿಂಗ್ ಸೆಂಟರ್ ಆಗಿತ್ತು. ಈಗ ಆ ಮಟ್ಟದಲ್ಲಿ ಇಲ್ಲ, ಕಡಿಮೆ ಆಗಿದೆ. ಎಲ್ಲಾ ರೀತಿಯಲ್ಲೂ ಮಟ್ಟ ಹಾಕಲು ಪೊಲೀಸರು ಕ್ರಮ ಕೈಗೊಳ್ಳುತ್ತಾರೆ’ ಎಂದರು.
‘ಒಂದೊಂದು ಸರಿ ಯಾವ ಮತ್ತಿನಲ್ಲಿ ಇರುತ್ತಾರೋ, ಏನು ತಿನ್ನುತ್ತಾರೋ ಗೊತ್ತಿಲ್ಲ.ಜಿಲ್ಲೆಯಲ್ಲಿ ಗಾಂಜಾ ಸಪ್ಲೈ ಆಗುತ್ತಿದೆ.ಅವರು ಏನು ತಿನ್ನುತ್ತಾರೋ ಗೊತ್ತಿಲ್ಲ.ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಟನ್ ಗಟ್ಟಲೆ ಮಾದಕ ವಸ್ತುಗಳನ್ನು ಹಿಡಿಯುತ್ತಿದ್ದಾರೆ. ಆದರೂ ಕೂಡ ಅಲ್ಲಿ ಇಲ್ಲಿ ಈ ರೀತಿಯ ಪ್ರಕರಣಗಳು ನಡೆಯುತ್ತಿವೆ.ಇದು ಬೇರೆ ಬೇರೆ ಕ್ರಿಮಿನಲ್ ನಡವಳಿಕೆಗಳಿಗೆ ಕಾರಣ ವಾಗುತ್ತದೆ.ಇದನ್ನು ಎಲ್ಲ ರೀತಿಯಲ್ಲೂ ಮಟ್ಟಹಾಕುವ ಕೆಲಸ ಆಗುತ್ತದೆ. ಪೊಲೀಸರು ಮಟ್ಟ ಹಾಕುತ್ತಿದ್ದಾರೆ.ಸಾರ್ವಜನಿಕರು ಸಹಕಾರ ಕೊಡಬೇಕು’ ಎಂದರು.
ಪತ್ರಕರ್ತರಿಗೆ ಗಿಫ್ಟ್ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ,ಈ ವಿಚಾರದ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಎಲ್ಲಾ ಹೇಳಿದ್ದಾರೆ. ಇದರ ಬಗ್ಗೆ ನನಗೆ ಮಾಹಿತಿ ಇಲ್ಲ, ಪ್ರತಿಕ್ರಿಯೆ ಕೊಡುವುದಿಲ್ಲ ಎಂದರು. ನನಗೆ ಗೊತ್ತಿರುವ ಹಾಗೆ ಸ್ವೀಟ್, ಅದು ಇದು ಗಿಫ್ಟ್ ಗಳನ್ನು ಎಲ್ಲಾ ಸರಕಾರದಲ್ಲೂ ಕೊಡುತ್ತಾರೆ. ಯಾವುದಾದರೂ ವಿಶೇಷ ಸಂದರ್ಭದಲ್ಲಿ ಕೊಡುತ್ತಾರೆ. ಹಣ ಕೊಟ್ಟಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.
ಇತ್ತೀಚಿಗೆ ಸರ್ಕಲ್ ಇನ್ಸ್ ಪೆಕ್ಟರ್ ವೃತ್ತಿಯಿಂದ ಅಮಾನತುಗೊಂಡಿದ್ದ ವೈಟ್ ಫೀಲ್ಡ್ ವಿಭಾಗದ ಕೆ.ಆರ್.ಪುರ ಇನ್ಸ್ ಪೆಕ್ಟರ್ ನಂದೀಶ್ ಸಾವಿನ ಪ್ರಕರಣಕ್ಕೆ ಪ್ರತಿಕ್ರಿಯಿಸಿ ‘ಸಿಪಿಐ ಅನಾರೋಗ್ಯದಿಂದ ತೀರಿ ಹೋಗಿದ್ದಾರೆ. ನನಗೆ ಇರುವ ಮಾಹಿತಿ ಪ್ರಕಾರ ಅವರ ಆರೋಗ್ಯ ಸರಿ ಇರಲಿಲ್ಲ’ಎಂದರು.
‘ಆಡಿಯೋ ಬಗ್ಗೆ ಎಂಟಿಬಿ ನಾಗರಾಜ್ ಅವರಿಗೆ ಕೇಳಬೇಕು, ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಿರ್ದಿಷ್ಟವಾಗಿ ಯಾರಾದರೂ ಕಂಪ್ಲೇಂಟ್ ಮಾಡಿದರೆ ನಮ್ಮ ಪೊಲೀಸರಿಂದ ತನಿಖೆ ಮಾಡಿಸಬಹುದು’ ಎಂದರು.
ಹೋರಿ ಬೆದರಿಸುವ ಹಬ್ಬದಲ್ಲಿ ಸಾವು ವಿಚಾರ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ ‘ಪೊಲೀಸರ ಕಡೆಯಿಂದ ಏನು ಕ್ರಮ ಆಗಬೇಕು ಅದು ಆಗುತ್ತದೆ. ಹೋರಿ ಬೆದರಿಸುವುದು ಒಂದು ಜಾನಪದ ಕಲೆ. ಸಾವು ಆಗುವ ಪರಿಸ್ಥಿತಿ ಇದೆ ಎಂದರೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.ನಾನು ಇದರ ಬಗ್ಗೆ ಪೊಲೀಸರಿಂದ ಮಾಹಿತಿಯನ್ನು ತೆಗೆದುಕೊಳ್ಳುತ್ತೇನೆ. ಈ ತರಹದ ಸಾವು ಆಗಿದ್ದರೆ ಪೊಲೀಸರು ಖಂಡಿತ ಕ್ರಮ ಕೈಗೊಳ್ಳುತ್ತಾರೆ’ ಎಂದರು.