ಚೆನ್ನೈ: ಮುಂದಿನ ಪ್ರಧಾನಿ ಯಾವ ಪಕ್ಷದಿಂದ ಆಗಬೇಕು ಎಂಬುದು ಒಂದು ವಿಚಾರವೇ ಅಲ್ಲ. ಮೊದಲಿಗೆ ನಾವೆಲ್ಲರೂ ಸೇರಿ ಒಟ್ಟಾಗಿ ನಿಂತು ಬಿಜೆಪಿ ಸೋಲಿಸೋಣ, ಬಳಿಕ ಈ ಬಗ್ಗೆ ಮಾತನಾಡೋಣ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.
ಚೆನ್ನೈಯಲ್ಲಿ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರ 70ನೇ ಹುಟ್ಟುಹಬ್ಬ ನಿಮಿತ್ತ ಬಹುತೇಕ ವಿಪಕ್ಷ ನಾಯಕರೆಲ್ಲರೂ ಒಟ್ಟಾಗಿ ಭಾಗಿಯಾಗಿದ್ದರು. ಅಲ್ಲದೆ, ಈ ಸಮಾರಂಭವನ್ನೂ ಬಿಜೆಪಿ ವಿರುದ್ಧ ಕೂಟವಾಗಿ ಸ್ಪರ್ಧಿಸಬೇಕು ಎಂಬ ಬಗ್ಗೆ ಸ್ವತಃ ಖರ್ಗೆ ಅವರೇ ಒತ್ತಿ ಹೇಳಿದರು.
ಈಗಾಗಲೇ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಮೂಲಕ ಹೊಸ ಹುಮ್ಮಸ್ಸಿನಲ್ಲಿದೆ. ಜತೆಗೆ, 2024ರಲ್ಲಿ ಒಟ್ಟಾಗಿ ಹೋದರೆ ಬಿಜೆಪಿ ವಿರುದ್ಧ ಯಶಸ್ಸು ಸಾಧಿಸಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ನದ್ದು. ಹೀಗಾಗಿಯೇ ಖರ್ಗೆ ಅವರು, ಎಲ್ಲಾ ಸಮಾನ ಮನಸ್ಕ ಪಕ್ಷಗಳು ಒಂದಾಗಬೇಕು. ಈ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕತ್ವ ಸ್ಥಾನ ವಹಿಸಿಕೊಳ್ಳಬೇಕು, ಕಾಂಗ್ರೆಸ್‌ನವರೇ ಪ್ರಧಾನಿಯಾಗಬೇಕು ಎಂದು ನಾನು ಹೇಳಲ್ಲ. ಆದರೆ, ಬಿಜೆಪಿಯ ಒಡೆದು ಆಳುವ ನೀತಿಯನ್ನು ಕೊನೆಗಾಣಿಸಿಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಎಸ್‌ಪಿಯ ಅಖೀಲೇಶ್ ಯಾದವ್, ಎಸ್‌ಸಿಯ ಫಾರೂಕ್ ಅಬ್ದುಲ್ಲಾ, ಆರ್‌ಜೆಡಿಯ ತೇಜಸ್ವಿ ಯಾದವ್ ಸಹಿತ ವಿವಿಧ ನಾಯಕರು ಭಾಗಿಯಾಗಿದ್ದರು.