Advertisement

ಈಗ ಮಂಗಳೂರಿನ ಗಾಳಿಯೂ ಕಲುಷಿತ! ಬೆಂಗಳೂರು, ಮೈಸೂರಿನಲ್ಲೂ ಮಾಲಿನ್ಯ ಅಪಾಯಕಾರಿ ಮಟ್ಟದಲ್ಲಿ

01:11 AM Sep 07, 2024 | Team Udayavani |

ಮಂಗಳೂರು: ಹಚ್ಚ ಹಸುರಿನ ನಗರ ಎಂದೇ ಹೆಸರಾಗಿರುವ ಮಂಗಳೂರಿನಲ್ಲೂ ಉಸಿರಾಡುವ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದೆ ಎನ್ನುವ ಎಚ್ಚರಿಕೆ ಸಂದೇಶವನ್ನು ಗ್ರೀನ್‌ ಪೀಸ್‌ ಸಂಶೋಧನ ವರದಿ ರವಾನಿಸಿದೆ.

Advertisement

ಕರ್ನಾಟಕದ ಮೂರು ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು ಹಾಗು ಮಂಗಳೂರಿನಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದ್ದು, ಮಾಲಿನ್ಯದ ಪ್ರಮಾಣ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ಈ ಕೂಡಲೇ ವಾಯು ಮಾಲಿನ್ಯವನ್ನು ತಗ್ಗಿಸಲು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ನಮ್ಮ ಆರೋಗ್ಯದ ಮೇಲೆ ಅದು ತೀವ್ರ ದುಷ್ಪರಿಣಾಮ ಬೀರಬಲ್ಲದು ಎಂದು ವರದಿ ಎಚ್ಚರಿಸಿದೆ.

ದಕ್ಷಿಣ ಭಾರತದ 10 ಪ್ರಮುಖ ನಗರಗಳ ಗಾಳಿಯಲ್ಲಿ ಮಾಲಿನ್ಯಕಾರಕ ಕಣಗಳಾದ ಪಿಎಂ 2.5 (ಅತಿಸೂಕ್ಷ್ಮ) ಮತ್ತು ಪಿಎಂ 10 (ಸೂಕ್ಷ್ಮ)ಗಳ ಪ್ರಮಾಣವು ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ನಿಗದಿಪಡಿಸಿದ ಸರಾಸರಿ ಮಟ್ಟಗಳನ್ನು ಮೀರಿದ್ದು, ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಗ್ರೀನ್‌ಪೀಸ್‌ ಇಂಡಿಯಾದ “ಸ್ಪೇರ್‌ ದಿ ಏರ್‌-2′ ವರದಿಯು ಎಚ್ಚರಿಸಿದೆ.

ಡಬ್ಲ್ಯುಎಚ್‌ಒ ಮಾರ್ಗ ಸೂಚಿಗಳೊಂದಿಗೆ ಹೋಲಿಸಿದಾಗ, ಗಾಳಿಯಲ್ಲಿ ಪಿಎಂ 2.5 ಕಣಗಳ ಮಟ್ಟವು ಮಂಗಳೂರು ಸಹಿತ ಐದು ನಗರಗಳಲ್ಲಿ 6ರಿಂದ 7 ಪಟ್ಟು ಹೆಚ್ಚಾಗಿದೆ. ಅದೇ ರೀತಿ ಪಿಎಂ 10 ಕಣಗಳ ಮಟ್ಟವು ಬೆಂಗಳೂರು, ಮೈಸೂರು ಮತ್ತು ಪುದುಚೇರಿ ನಗರಗಳಲ್ಲಿ 4ರಿಂದ 5 ಪಟ್ಟು ಹೆಚ್ಚಾಗಿದೆ ಎಂಬುದನ್ನು ವರದಿಯು ದೃಢಪಡಿಸಿದೆ ಎಂದು ಗ್ರೀನ್‌ ಪೀಸ್‌ ಪ್ರಕಟನೆ ತಿಳಿಸಿದೆ.

ಗ್ರೀನ್‌ಪೀಸ್‌ ಇಂಡಿಯಾದ ಪ್ರಚಾರಕಿ ಸೆಲೋಮಿ ಗಾರ್ನಾಯಕ್‌ ಅವರು, ದಕ್ಷಿಣ ಭಾರತದ ಪ್ರಮುಖ ಹತ್ತು ನಗರಗಳಲ್ಲಿ ಮಾಲಿನ್ಯಕಾರಕಗಳಾದ ಪಿಎಂ 2.5 ಮತ್ತು ಪಿಎಂ 10 ಕಣಗಳ ಮಿತಿ ಮೀರುವಿಕೆಯ ಪ್ರಮಾಣವು ನಮ್ಮ ನಗರಗಳಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟದ ಕಟು ವಾಸ್ತವತೆಯನ್ನು ನಮ್ಮ ಮುಂದೆ ತೆರೆದಿಡುತ್ತಿದೆ ಎಂದು ತಿಳಿಸುತ್ತಾರೆ.
ಗ್ರೀನ್‌ಪೀಸ್‌ ಇಂಡಿಯಾ ಒಂದು ಲಾಭರಹಿತ ಮತ್ತು ಪರಿಸರ ಪರ ಅಭಿಯಾನಗಳನ್ನು ಹಮ್ಮಿಕೊಳ್ಳುವ ಸಂಸ್ಥೆಯಾಗಿದೆ. ಇದು ಹವಾಮಾನ ಬದಲಾವಣೆಗೆ ಸಂಬಂಧಿಸಿ ಏರುತ್ತಿರುವ ಭೂಮಿಯ ತಾಪವನ್ನು ತಗ್ಗಿಸುವಿಕೆ, ಈ ಸಂಬಂಧ ಹೊಸ ಮಾರ್ಗೊàಪಾಯಗಳ ಅಳವಡಿಸಿಕೊಳ್ಳುವಿಕೆ ಮತ್ತು ಈ ನಿಟ್ಟಿನಲ್ಲಿ ಅಗತ್ಯವಿರುವ ಮಾರ್ಪಾಡುಗಳಿಗೆ ಉತ್ತೇಜನ ನೀಡಲು ಮೀಸಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next