Advertisement

ಈಗ ಹೊಸ ರೂಪದಲ್ಲಿ ‘ರಾಜನ್‌ ನಾಗೇಂದ್ರ’ ಸಂಗೀತ

02:11 PM May 29, 2023 | Team Udayavani |

ಕನ್ನಡ ಚಿತ್ರರಂಗದ ಹಿರಿಯ ಜನಪ್ರಿಯ ಸಂಗೀತ ನಿರ್ದೇಶಕ ರಾಜನ್‌ (ರಾಜನ್‌ ನಾಗೇಂದ್ರ) ಸಂಗೀತ ಕ್ಷೇತ್ರದಲ್ಲಿ ಹೊಸ ಪ್ರತಿಭೆಗಳಿಗೆ ತರಬೇತಿ ನೀಡಿ ಸಂಗೀತಗಾರರನ್ನಾಗಿ ಪರಿಚಯಿಸುವ ನಿಟ್ಟಿನಲ್ಲಿ “ಸಪ್ತ ಸ್ವರಾಂಜಲಿ ಇನ್ಸ್ಟಿಟ್ಯೂಟ್‌ ಆಫ್ ಮ್ಯೂಸಿಕ್‌’ ಎಂಬ ಸಂಸ್ಥೆಯನ್ನು ಆರಂಭಿಸಿದ್ದರು. ಈ ಸಂಸ್ಥೆಯಲ್ಲಿ ತರಬೇತಿ ಪಡೆದ ಅನೇಕರು ಇಂದು ಸಂಗೀತ ಕ್ಷೇತ್ರದಲ್ಲಿ ಕಲಾವಿದರಾಗಿ ಗುರುತಿಸಿಕೊಂಡು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗ ರಾಜನ್‌ ಅವರ ಪುತ್ರ ಅನಂತ ರಾಜನ್‌, “ರಾಜನ್‌ ನಾಗೇಂದ್ರ ಟ್ರಸ್ಟ್‌’ ವತಿಯಿಂದ ರಾಜನ್‌ ನಾಗೇಂದ್ರ ಅವರ ಗೀತೆಗಳಿಗೆ ಹೊಸರೂಪ ನೀಡಿ ಕೇಳುಗರ ಮುಂದೆ ತರುವ ಪ್ರಯತ್ನದಲ್ಲಿದ್ದಾರೆ.

Advertisement

ಅಂದಹಾಗೆ, ರಾಜನ್‌ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರ ಪುತ್ರ ಅನಂತ ರಾಜನ್‌, “ರಾಜನ್‌ ನಾಗೇಂದ್ರ ಗಾನಯಾನ’ ಎಂಬ ಹೆಸರಿನಲ್ಲಿ ತಮ್ಮ ಯೋಜನೆಯನ್ನು ಘೋಷಿಸಿದ್ದಾರೆ. ಇದೇ ವೇಳೆ ಮಾತನಾಡಿದ ಅನಂತ ರಾಜನ್‌, “ಕನ್ನಡದಿಂದ ಸಂಗೀತ ಲೋಕಕ್ಕೆ ಹೊಸ ಪ್ರತಿಭೆಗಳು ಬರಬೇಕು ಎಂಬ ಆಶಯದಿಂದ ನಮ್ಮ ತಂದೆ ರಾಜನ್‌ ಬದುಕಿರುವಾಗಲೇ “ಸಪ್ತ ಸ್ವರಾಂಜಲಿ’ ಎಂಬ ಸಂಗೀತ ಸಂಸ್ಥೆಯನ್ನು ಸ್ಥಾಪಿಸಿದ್ದರು. ಈ ಸಂಸ್ಥೆಯಿಂದ ಈಗಾಗಲೇ ಅನೇಕ ಪ್ರತಿಭೆಗಳು ಕಲಾವಿದರಾಗಿ ಸಂಗೀತ ಲೋಕಕ್ಕೆ ಪರಿಚಯವಾಗಿದ್ದಾರೆ. ಇನ್ನು ಕನ್ನಡ ಸಿನಿಮಾ ಸಂಗೀತದಲ್ಲಿ ರಾಜನ್‌ ನಾಗೇಂದ್ರ ಅವರ ಹಾಡುಗಳು ಗೋಲ್ಡ್‌ ಇದ್ದಂತೆ. ಹಳೆಯದಾದರೂ ಗೋಲ್ಡ್‌ಗೆ ಇರುವ ಬೆಲೆ ಇದ್ದೇ ಇರುತ್ತದೆ. ಹಳೆಯ ಗೋಲ್ಡನ್ನು ಪಾಲಿಶ್‌ ಮಾಡಿ ಮತ್ತೆ ಬಳಸುವಂತೆ, ರಾಜನ್‌ ನಾಗೇಂದ್ರ ಅವರ ಈ ಗೋಲ್ಡನ್‌ ಹಾಡುಗಳನ್ನು ಇಂದಿನ ಕೇಳುಗರಿಗೆ ಇಷ್ಟವಾಗುವಂತೆ, ಹೊಸ ರೂಪದಲ್ಲಿ ಮತ್ತೆ ತರುತ್ತಿದ್ದೇವೆ’ ಎಂದರು.

ರಾಜನ್‌ ನಾಗೇಂದ್ರ ಹಾಡುಗಳ ದಿನಗಳನ್ನು ಮೆಲುಕು ಹಾಕಿದ ಅನಂತ ರಾಜನ್‌, “ನಾನು ನನ್ನ ಶಾಲಾ ದಿನಗಳಿಂದಲೇ ತಂದೆ (ರಾಜನ್‌) ಅವರ ಬಹುತೇಕ ಎಲ್ಲ ಮ್ಯೂಸಿಕ್‌ ರೆಕಾರ್ಡಿಂಗ್‌ಗಳನ್ನು ಹತ್ತಿರದಿಂದ ನೋಡಿದ್ದೆ. ಶಾಲೆ ಮುಗಿಸಿಕೊಂಡು ನೇರವಾಗಿ ರೆಕಾರ್ಡಿಂಗ್‌ ಸ್ಟುಡಿಯೋಕ್ಕೆ ಹೋಗುತ್ತಿದ್ದೆ. ಹಾಗಾಗಿ ಅವರು ಮಾಡಿರುವ ಬಹುತೇಕ ಹಾಡುಗಳ ರೆಕಾರ್ಡಿಂಗ್‌ ಬಗ್ಗೆ ನನಗೆ ಅರಿವಿದೆ. ತುಂಬ ವೃತ್ತಿಪರವಾಗಿ ರೆಕಾರ್ಡಿಂಗ್‌ ಕೆಲಸ ಮಾಡುತ್ತಿದ್ದರು’ ಎಂದರು.

“ತಂದೆ (ರಾಜನ್‌)ಅವರ ನಿಧನದ ನಂತರ ಅವರ ಕೆಲಸವನ್ನು ಟ್ರಸ್ಟ್‌ ಮೂಲಕ ನಾವು ಮಾಡಲು ಮುಂದಾದೆವು. ಈಗಾಗಲೇ ರಾಜನ್‌ ನಾಗೇಂದ್ರ ಅವರ ಒಂದಷ್ಟು ಹಳೆಯ ಹಾಡುಗಳಿಗೆ ಹೊಸರೂಪ ಕೊಟ್ಟಿದ್ದೇವೆ. ರಾಜನ್‌ ಬದುಕಿದ್ದಾಗ ತಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದ ಪ್ರತಿಭೆಗಳಿಗೆ ವರ್ಷಕ್ಕೆ ಮೂರು ನಾಲ್ಕು ಕಾರ್ಯಕ್ರಮಗಳ ಮೂಲಕ ಅವರನ್ನು ಸಂಗೀತ ಲೋಕಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದ್ದರು. ಅದನ್ನು ಈಗ ಮುಂದುವೆಸುವ ಕೆಲಸ ಟ್ರಸ್ಟ್‌ ಮೂಲಕ ನಾವು ಮಾಡುತ್ತಿದ್ದೇವೆ’ ಎಂಬುದು ಅನಂತ ರಾಜನ್‌ ಮಾತು.

ಇದೇ ವೇಳೆ ಹಾಜರಿದ್ದ ಹಿರಿಯ ಚಿತ್ರ ನಿರ್ದೇಶಕ ಭಾರ್ಗವ, “ರಾಜನ್‌ ನಾಗೇಂದ್ರ ನನ್ನ ನಿರ್ದೇಶನದ 26 ಸಿನಿಮಾಗಳಿಗೆ ಸಂಗೀತ ನೀಡಿದ್ದರು. ಸುಮಾರು 38 ಸಿನಿಮಾಗಳಿಗೆ ಅವರೊಂದಿಗೆ ಕೆಲಸ ಮಾಡಿದ್ದೇನೆ. ಕನ್ನಡ ಚಿತ್ರರಂಗದ ತುಂಬ ಅಪರೂಪದ ಸದಭಿರುಚಿ ಸಂಗೀತ ನಿರ್ದೇಶಕರಲ್ಲಿ ರಾಜನ್‌ ನಾಗೇಂದ್ರ ಜೋಡಿ ಕೂಡ ಒಂದು. ಯಾವುದೇ ಹಮ್ಮುಬಿಮ್ಮು ಇಲ್ಲದೆ ತಮ್ಮ ಕೆಲಸದಲ್ಲಿ ದೊಡ್ಡ ಮಟ್ಟಕ್ಕೆ ಏರಿದವರು ರಾಜನ್‌. ಇಂದಿಗೂ ಪ್ರತಿದಿನ ಅವರ ಹಾಡುಗಳನ್ನು ಕೇಳುಗರು ಗುನುಗುತ್ತಿರುವುದೇ ಅವರ ಹಾಡುಗಳ ಜನಪ್ರಿಯತೆಗೆ ದೊಡ್ಡ ಸಾಕ್ಷಿ’ ಎಂದರು. ಕಾರ್ಯಕ್ರಮದಲ್ಲಿ ಹಾಜರಿದ್ದ ನಿರ್ದೇಶಕ ಗುರುದತ್‌, ಲಹರಿ ವೇಲು ಮೊದಲಾದವರು ರಾಜನ್‌ ನಾಗೇಂದ್ರ ಹಾಡುಗಳ ಬಗ್ಗೆ ಮಾತನಾಡಿದರು.

Advertisement

ಕಾರ್ಯಕ್ರಮದಲ್ಲಿ ಗಾಯಕಿ ಸಿಂಚನಾ, ಭೂಮಿಕಾ, ಸ್ಮಿತಾ, ಕೀರ್ತನಾ, ವಿಷ್ಣು ಮೊದಲಾದ ಕಲಾವಿದರು ರಾಜನ್‌ ನಾಗೇಂದ್ರ ಅವರ ಕೆಲ ಹಾಡುಗಳನ್ನು ಹೊಸ ರೂಪದಲ್ಲಿ ಪ್ರಸ್ತುತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next