Advertisement

ಈಗ ಸ್ಮಿತ್‌ ವಿರುದ್ಧ ಬಿಸಿಸಿಐನಿಂದಲೇ ದೂರು

06:32 AM Mar 10, 2017 | Team Udayavani |

ಹೊಸದಿಲ್ಲಿ: ಭಾರತ-ಆಸ್ಟ್ರೇಲಿಯ ನಡುವಿನ 2ನೇ ಟೆಸ್ಟ್‌ ವೇಳೆ ಡಿಆರ್‌ಎಸ್‌ ಮನವಿ ಸಲ್ಲಿಸುವ ವೇಳೆ ಸ್ಟೀವ್‌ ಸ್ಮಿತ್‌ ಮಾಡಿದ ಎಡವಟ್ಟು ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಬುಧವಾರ ಭಾರತ ಕ್ರಿಕೆಟ್‌ ತಂಡ ಸ್ಮಿತ್‌ ವಿರುದ್ಧ ಮ್ಯಾಚ್‌ ರೆಫ್ರಿಗೆ ದೂರು ಸಲ್ಲಿಸಿದ್ದರೆ, ಗುರುವಾರ ಸ್ವತಃ ಬಿಸಿಸಿಐ, ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ)ಗೇ ದೂರು ಸಲ್ಲಿಸಿದೆ. 

Advertisement

ಇದಕ್ಕೂ ಮುನ್ನ ಐಸಿಸಿ, ಸ್ಮಿತ್‌ ಮತ್ತು ಕೊಹ್ಲಿ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲವೆಂದು ಸ್ಪಷ್ಟಪಡಿಸಿದ್ದರೂ ಬಿಸಿಸಿಐ ದೂರು ನೀಡಿರುವುದು ಕುತೂಹಲ ಮೂಡಿಸಿದೆ. ಇದು ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯ ಕ್ರಿಕೆಟ್‌ ಮಂಡಳಿ, ಬಿಸಿಸಿಐ ಮತ್ತು ಐಸಿಸಿ ನಡುವೆ ಬಿಕ್ಕಟ್ಟಿಗೆ ಕಾರಣವಾಗುವ ಸಾಧ್ಯತೆಯೂ ಇದೆ.

ಪಂದ್ಯ ನಡೆಯುವಾಗ ಆಸೀಸ್‌ ನಾಯಕ ಸ್ಟೀವ್‌ ಸ್ಮಿತ್‌ ಮತ್ತು ಸಹ ಬ್ಯಾಟ್ಸ್‌ಮನ್‌ ಪೀಟರ್‌ ಹ್ಯಾಂಡ್ಸ್‌ಕಾಂಬ್‌ ಡಿಆರ್‌ಎಸ್‌ಗೆ ಮನವಿ ಸಲ್ಲಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ನಿಯಮ ಮೀರಿ ಡ್ರೆಸ್ಸಿಂಗ್‌ ಕೊಠಡಿಯತ್ತ ಸಂಕೇತ ರವಾನಿಸಿ ಮಾಹಿತಿ ಕೇಳಿದ್ದರು. ಇದು ಐಸಿಸಿ ನೀತಿಸಂಹಿತೆ ಹಂತ 2ರ ಉಲ್ಲಂಘನೆ, ಈ ಮೂಲಕ ಸ್ಮಿತ್‌ ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ, ಜೊತೆಗೆ ಕ್ರಿಕೆಟ್‌ನ ಘನತೆಗೆ ಧಕ್ಕೆ ತಂದಿದ್ದಾರೆಂದು ಬಿಸಿಸಿಐ ತನ್ನ ದೂರಿನಲ್ಲಿ ತಿಳಿಸಿದೆ.

ಬಿಸಿಸಿಐ ದೂರು ನೀಡಿರುವುದನ್ನು ಐಸಿಸಿ ಕೂಡ ಖಚಿತಪಡಿಸಿದೆ. ನಿಯಮಗಳ ಪ್ರಕಾರ ಪಂದ್ಯ ಮುಗಿದ 48 ಗಂಟೆಗಳ ಒಳಗೆ ಯಾವುದೇ ರಾಷ್ಟ್ರ ದೂರು ಸಲ್ಲಿಸಬಹುದು. ಆ ಪ್ರಕಾರ ಬಿಸಿಸಿಐ ದೂರು ಸಲ್ಲಿಸಿರುವುದರಿಂದ ಐಸಿಸಿ ಸ್ಮಿತ್‌ರನ್ನು ವಿಚಾರಣೆ ನಡೆಸಲೇಬೇಕಾದ ಅನಿವಾರ್ಯತೆ ಎದುರಿಸಿದೆ.

ಅಂಪಾಯರ್‌ಗಳೇ ದೂರು ಸಲ್ಲಿಸಿಲ್ಲ
ಬಿಸಿಸಿಐ ದೂರು ನೀಡಿದ ತತ್‌ಕ್ಷಣ ಕ್ರಮ ಕೈಗೊಳ್ಳುವ ಸ್ಥಿತಿಯಲ್ಲಿ ಐಸಿಸಿಯಿಲ್ಲ. ಏಕೆಂದರೆ ಪಂದ್ಯದ ಅಂಪಾಯರ್‌ಗಳು ಇದುವರೆಗೆ ಯಾವುದೇ ಅಧಿಕೃತ ದೂರನ್ನು ಸಲ್ಲಿಸಿಲ್ಲ. ಈ ಬಗ್ಗೆ ಇನ್ನಷ್ಟೇ ಐಸಿಸಿ ಹೊಸತಾಗಿ ಕ್ರಮ ಕೈಗೊಳ್ಳಬೇಕಿದೆ. ಅಲ್ಲದೇ ರೆಫ್ರಿ ಕ್ರಿಸ್‌ ಬ್ರಾಡ್‌ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ.

Advertisement

ರೆಫ್ರಿ ಬ್ರಾಡ್‌ರಿಂದ ನಿಯಮ ಉಲ್ಲಂಘನೆ
ಆಸೀಸ್‌ ನಾಯಕ ಸ್ಮಿತ್‌ ತಪ್ಪು ಮಾಡಿದ್ದಾರೆಂದು ಆರೋಪಿಸ ಲಾಗಿದ್ದರೂ ಇಂತಹ ದೂರನ್ನು ವಿಚಾರಣೆ ನಡೆಸಬೇಕಿರುವ ಪಂದ್ಯದ ರೆಫ್ರಿ ಕ್ರಿಸ್‌ ಬ್ರಾಡ್‌ ಕೂಡ ನಿಯಮ ಉಲ್ಲಂ ಸಿದ್ದಾರೆನ್ನಲಾಗಿದೆ. ಕ್ರಿಸ್‌ ಬ್ರಾಡ್‌ ಪಂದ್ಯ ಮುಗಿದ ಅನಂತರ ಆಸ್ಟ್ರೇಲಿಯ ಮಾಧ್ಯಮ ವೊಂದಕ್ಕೆ ಸಂದರ್ಶನ ನೀಡಿ, ಸ್ಮಿತ್‌ ಪ್ರಕರಣ ಕುರಿತು ಮಾಹಿತಿ ನೀಡಿದ್ದರು. ರೆಫ್ರಿಗಳು ಇಂತಹ ಪ್ರಕರಣಗಳಲ್ಲಿ ಮಾಧ್ಯಮಗಳಿಗೆ ಸಂದರ್ಶನ ನೀಡುವಂತಿಲ್ಲ. ಇದು ಬಿಸಿಸಿಐ ಗಮನಕ್ಕೆ ಬಂದಿದ್ದು ಅದನ್ನೂ ಗಂಭೀರವಾಗಿ ಪರಿಗಣಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next