ಉಡುಪಿ:ಮರಳುಗಾರಿಕೆಗೆ ಪೂರ್ಣ ಪ್ರಮಾಣದಲ್ಲಿ ಅವಕಾಶ ಕೊಡುವವರೆಗೂ ಈ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಮುಂದುವರಿಯಲಿದೆ. ಮರಳುಗಾರಿಕೆಗೆ ಪರವಾನಿಗೆ ಕೊಡುವ ವಿಚಾರದಲ್ಲಿ ನಮಗೆ ರಾಜ್ಯ ಸರ್ಕಾರ, ಜಿಲ್ಲಾಡಳಿತದಿಂದ ನ್ಯಾಯ ಸಿಕ್ಕಿಲ್ಲ ಈ ಹಿನ್ನೆಲೆಯಲ್ಲಿ ನವೆಂಬರ್ 10ರಂದು ಉಡುಪಿ ಜಿಲ್ಲೆ ಬಂದ್ ನಡೆಸಲು ಸರ್ವ ಸಂಘಟನೆ ನಿರ್ಧಾರ ತೆಗೆದುಕೊಂಡಿರುವುದಾಗಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಬುಧವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಿರತ ಮರಳು ಹೋರಾಟ ಸಮಿತಿಯ ಸರ್ವ ಸಂಘಟನೆ ಜೊತೆ ಸಭೆ ನಡೆಸಿದ ನಂತರ ಸಭೆಯಲ್ಲಿ ಕೈಗೊಂಡ ನಿರ್ಧಾರವನ್ನು ಶಾಸಕ ರಘುಪತಿ ಅವರು ಸುದ್ದಿಗಾರರಿಗೆ ತಿಳಿಸಿದರು.
ಮರಳುಗಾರಿಕೆಗೆ ಪರವಾನಿಗೆ ನೀಡುವಲ್ಲಿ ಜಿಲ್ಲಾಡಳಿತ ತೆಗೆದುಕೊಂಡ ನಿರ್ಧಾರದ ಬಗ್ಗೆ ಸಭೆಯಲ್ಲಿ 3 ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಲಾಯಿತು ಎಂದರು. ಮರಳುಗಾರಿಕೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗುವವರೆಗೆ ಅನಿರ್ದಿಷ್ಟಾವಧಿ ಧರಣಿ ಮುಂದುವರಿಯಲಿದೆ ಎಂದು ಹೇಳಿದರು.
ರಾಜ್ಯ, ಕೇಂದ್ರ ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳುವ ನಿಟ್ಟಿನಲ್ಲಿ ನವೆಂಬರ್ 10ರಂದು ಉಡುಪಿ ಜಿಲ್ಲಾ ಬಂದ್ ನಡೆಸಲು ಸರ್ವಾನುಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ. ನ.10ರ ನಂತರ ಕಟ್ಟಡ ಗುತ್ತಿಗೆದಾರರು, ಇಂಜಿನಿಯರ್ ಗಳು, ಕಟ್ಟಡ ನಿರ್ಮಾಣ ಸಾಮಾಗ್ರಿ ಮಾರಾಟ ಮಾಡುವ ಅಂಗಡಿ, ಮುಂಗಟ್ಟನ್ನು ಸ್ವಯಂ ಆಗಿ ಬಂದ್ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಒಂದು ವೇಳೆ ನವೆಂಬರ್ 10ರೊಳಗೆ ನಮ್ಮ ಸಮಸ್ಯೆ ಇತ್ಯರ್ಥಗೊಂಡರೆ ಧರಣಿ ಮುಂದುವರಿಸುವುದಿಲ್ಲ, ಬಂದ್ ನಡೆಸುವ ಅವಶ್ಯಕತೆಯೂ ಇಲ್ಲ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.
ಈ ಹಿಂದೆ ಎನ್ ಜಿಟಿಗೆ ಸಲ್ಲಿಸಲಾದ ಪಟ್ಟಿಯಂತೆ 171 ಮಂದಿಗೂ ಮರಳುಗಾರಿಕೆಗೆ ಅವಕಾಶ ನೀಡಬೇಕು. ಅದರಲ್ಲಿ 22 ಮಂದಿ ಎಸ್ ಸಿ/ಎಸ್ ಟಿಯವರು ಇದ್ದಾರೆ. ಆದರೆ ಜಿಲ್ಲಾಧಿಕಾರಿ 2011ರ ಹಿಂದೆ ಪರವಾನಿಗೆ ಹೊಂದಿದ್ದ 92 ಮಂದಿಗೆ ಮಾತ್ರ ಪರವಾನಿಗೆ ನೀಡಲು ರಾಜ್ಯ ಸರ್ಕಾರ ಆದೇಶ ನೀಡಿದೆ ಎಂದು ತಿಳಿಸಿದ್ದಾರೆ. ಹೀಗೆ ಮಾಡಿದರೆ ಎಸ್ ಸಿ/ಎಸ್ ಟಿಯವರಿಗೆ ಅನ್ಯಾಯವಾಗುತ್ತದೆ. ಕಳೆದ ವರ್ಷ 171 ಮಂದಿಗೂ ಅವಕಾಶ ನೀಡಿದ್ದರೂ. ಈ ಹಿನ್ನೆಲೆಯಲ್ಲಿ ರಾಜ್ಯ ಸೇರಿದಂತೆ ಕೇಂದ್ರ ಸರ್ಕಾರ ಕೂಡಾ ಕೂಡಲೇ ನಮ್ಮ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು. ಇಲ್ಲದಿದ್ದರೆ ಪಕ್ಷಾತೀತವಾಗಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಭಟ್ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಲಾಲಾಜಿ ಮೆಂಡನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.