ಮಣಿಪಾಲ: ಮಣಿಪಾಲದಲ್ಲಿ ಅರಳಿ ವಿವಿಧೆಡೆ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿದ ಹಿರಿಯ ಆರು ಮಂದಿಯ ಜನ್ಮಶತಮಾನೋತ್ತರ ಸಂಸ್ಮರಣೆ ಕಾರ್ಯಕ್ರಮವನ್ನು “ಉದಯವಾಣಿ’ಯು ಎಂಜಿಎಂ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನ. 7ರಂದು ಆಯೋಜಿಸಿದ್ದು ಮಧ್ಯಾಹ್ನ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಲಿದ್ದಾರೆ.
ಬೆಳಗ್ಗೆ 10 ಗಂಟೆಗೆ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದ್ದು ಜಿಲ್ಲಾಧಿಕಾರಿ ಕೂರ್ಮಾ ರಾವ್, ಜಿ.ಪಂ. ಸಿಇಒ ಪ್ರಸನ್ನ ಎಚ್. ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಗಣಕ ಲಿಪಿ ತಜ್ಞ ಪ್ರೊ| ಕೆ.ಪಿ.ರಾವ್ ಅಧ್ಯಕ್ಷತೆ ವಹಿಸುವರು.
ವಿಮರ್ಶಕ, ನಿವೃತ್ತ ಪ್ರಾಧ್ಯಾಪಕ ಪ್ರೊ| ಮುರಳೀಧರ ಉಪಾಧ್ಯ ಅವರು ಎಸ್.ಯು. ಪಣಿಯಾಡಿಯವರ ಕುರಿತು, ಸಂಶೋಧಕ, ನಿವೃತ್ತ ಪ್ರಾಂಶುಪಾಲ ಡಾ| ಅನಿಲ್ ಕುಮಾರ್ ಶೆಟ್ಟಿಯವರು ಎಂ.ವಿ. ಹೆಗ್ಡೆಯವರ ಕುರಿತು, ಪಾ.ವೆಂ. ಆಚಾರ್ಯ ಟ್ರಸ್ಟ್‌ನ ನಿರ್ವಾಹಕ ವಿಶ್ವಸ್ತೆ ಛಾಯಾ ಉಪಾಧ್ಯರು ಪಾ.ವೆಂ. ಆಚಾರ್ಯರ ಕುರಿತು, ಪ್ರೊ| ಕೆ.ಪಿ. ರಾವ್ ಅವರು ಕಮಾಲ್ ಹೈದರ್ ಕುರಿತು, ಲೇಖಕ, ನಿವೃತ್ತ ಪ್ರಾಧ್ಯಾಪಕ ಡಾ| ಶ್ರೀಕಾಂತ ಸಿದ್ಧಾಪುರ ಅವರು ಬನ್ನಂಜೆ ರಾಮಾಚಾರ್ಯರ ಕುರಿತು, ಸಾಹಿತಿ, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಬೆಳಗೋಡು ರಮೇಶ್ ಭಟ್ ಅವರು ಬೈಕಾಡಿ ಕೃಷ್ಣಯ್ಯನವರ ಕುರಿತು ಮಾತನಾಡುವರು.
ಮಧ್ಯಾಹ್ನ 1 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸಚಿವರಾದ ಎಸ್. ಅಂಗಾರ, ವಿ. ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕೆ. ರಘುಪತಿ ಭಟ್ ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು “ತರಂಗ’ದ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್. ಪೈ ವಹಿಸುವರು. ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ. ಕಾರ್ಯನಿರ್ವಾಹಕ ಅಧ್ಯಕ್ಷ, ಎಂಜಿಎಂ ಕಾಲೇಜು ಟ್ರಸ್ಟ್ ಅಧ್ಯಕ್ಷ ಟಿ. ಸತೀಶ್ ಯು. ಪೈ, ಮಣಿಪಾಲ್ ಟೆಕ್ನಾಲಜೀಸ್ ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಗೌತಮ್ ಪೈ ಭಾಗವಹಿಸಲಿದ್ದಾರೆ.
Related Articles
ಸಾಧಕ ಶ್ರೇಷ್ಠರು
1937ರಲ್ಲಿ ಮಣಿಪಾಲದಲ್ಲಿ ಎಸ್.ಯು. ಪಣಿಯಾಡಿಯವರು ಪ್ರಸ್ ಸ್ಥಾಪಿಸಿ “ಅಂತರಂಗ’ ವಾರಪತ್ರಿಕೆಯನ್ನು ಆರಂಭಿಸಿದಾಗ ಪಣಿಯಾಡಿಯವರು ಪ್ರಧಾನ ಸಂಪಾದಕರಾಗಿದ್ದರು. ಕಮಾಲ್ ಹೈದರ್ ವ್ಯವಸ್ಥಾಪಕ ಸಂಪಾದಕರಾಗಿ, ಮಟ್ಟಾರು ವಿಟಲ್ ಹೆಗ್ಡೆ (ಎಂ.ವಿ. ಹೆಗ್ಡೆ), ಪಾಡಿಗಾರು ವೆಂಕಟರಮಣ ಆಚಾರ್ಯ (ಪಾ.ವೆಂ. ಆಚಾರ್ಯ), ಬನ್ನಂಜೆ ರಾಮಾಚಾರ್ಯರು ಉಪಸಂಪಾದಕರಾಗಿ, ಬೈಕಾಡಿ ಕೃಷ್ಣಯ್ಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದರು. ಬಳಿಕ ಪಣಿಯಾಡಿಯವರು ಚೆನ್ನೈಗೆ ಹೋದರೆ, ಕಮಾಲ್ ಹೈದರ್ ಕೋಲ್ಕತ್ತದಲ್ಲಿ ಕೆಲಕಾಲ ಪತ್ರಕರ್ತರಾಗಿ ದುಡಿದು ದೇಶ ವಿಭಜನೆಗೆ ಮುನ್ನ (1946) ಲಾಹೋರ್‌ಗೆ ಹೋಗಿ ಅಲ್ಲಿ ನೆಲೆ ನಿಂತರು. ಎಂ.ವಿ. ಹೆಗ್ಡೆಯವರು ಮಂಗಳೂರಿನ ನವಭಾರತಕ್ಕೆ ಸೇರಿ ಸಂಪಾದಕರಾದರು.
ಪಾ.ವೆಂ. ಆಚಾರ್ಯರು ಹುಬ್ಬಳ್ಳಿಯಲ್ಲಿ ಕಸ್ತೂರಿ ಮಾಸಪತ್ರಿಕೆಯನ್ನು ಕಟ್ಟಿ ಬೆಳೆಸಿದರು. ಬನ್ನಂಜೆ ರಾಮಾಚಾರ್ಯರು 1970ರಲ್ಲಿ ಉದಯವಾಣಿ ಆರಂಭವಾದಾಗ ಸಂಪಾದಕೀಯ ವಿಭಾಗದ ಮುಖ್ಯಸ್ಥರಾದರು. ಕೃಷ್ಣಯ್ಯನವರು ಅಂದಿನಿಂದ ಕೊನೆಯವರೆಗೂ ಮಣಿಪಾಲ ಪ್ರಸ್ ವ್ಯವಸ್ಥಾಪಕರಾಗಿ ಪತ್ರಿಕೆಯನ್ನು ರೂಪಿಸುವಲ್ಲಿ ಸೇವೆ ಸಲ್ಲಿಸಿದರು. ಇವರೆಲ್ಲರೂ ಜನಿಸಿ ಒಂದು ಶತಮಾನ ಕಳೆದಿದೆ. ಇವರ ಶತಮಾನೋತ್ತರ ಸಂಸ್ಮರಣೆಯಲ್ಲಿ ಅವರ ಕೊಡುಗೆಗಳನ್ನು ಸ್ಮರಿಸಿ ನುಡಿನಮನ ಸಲ್ಲಿಸಲಾಗುತ್ತದೆ.