Advertisement

Nov. 24: ಸಿಎಂರಿಂದ ಉದ್ಘಾಟನೆ: ಎಮ್ಮೆಕೆರೆಯಲ್ಲಿ ಅಂತಾರಾಷ್ಟ್ರೀಯ ಈಜುಕೊಳ

12:08 AM Nov 02, 2023 | Team Udayavani |

ಮಂಗಳೂರು: ಎಮ್ಮೆಕೆರೆಯಲ್ಲಿ 24 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್‌ಸಿಟಿ ವತಿಯಿಂದ ನಿರ್ಮಿಸಲಾದ ಅಂತಾರಾಷ್ಟ್ರೀಯ ಈಜು ಕೊಳವನ್ನು ನ. 24ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಇದೇ ವೇಳೆ 19ನೇ ರಾಷ್ಟ್ರೀಯ ಮಾಸ್ಟರ್ ಈಜು ಪಂದ್ಯಾವಳಿ ಕೂಡ ನಡೆಯಲಿದೆ. ಈ ಹಿನ್ನೆಲೆ ಯಲ್ಲಿ ಸೂಕ್ತ ಸಿದ್ಧತೆಗಳನ್ನು ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಅವರು ಈ ಕುರಿತ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನ. 24ರಿಂದ 26ರ ವರೆಗೆ ಈಜುಕೊಳದಲ್ಲಿ ಪಂದ್ಯ ನಡೆಯಲಿದೆ ಎಂದರು.

ಸ್ಥಳೀಯರ ಆಟದ ಮೈದಾನವಾಗಿದ್ದ ಅಲ್ಲಿ ಈಜುಕೊಳ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಬಳಿಕ ಊರವರನ್ನು ವಿಶ್ವಾಸಕ್ಕೆ ಪಡೆದು ಈಜುಕೊಳ ನಿರ್ಮಾಣವಾಗಿದೆ. ಹಾಗಾಗಿ ಮುಖ್ಯ ಮಂತ್ರಿಯವರು ಉದ್ಘಾಟನೆ ಮಾಡುವ
ಮೊದಲು ಸ್ಥಳೀಯರ ಬೇಡಿಕೆಯನ್ನು ಪರಿಗಣಿಸಬೇಕಾಗಿದೆ ಎಂದು ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಹಾಗೂ ಮಾಜಿ ಮೇಯರ್‌ ಪ್ರೇಮಾನಂದ ಶೆಟ್ಟಿ ಸಚಿವರ ಗಮನಕ್ಕೆ ತಂದರು.

ಈ ಬಗ್ಗೆ ಸಚಿವರು ಪ್ರತಿಕ್ರಿಯಿಸಿ, ನ. 4ರಂದು ನಾವು ಜನರನ್ನು ಭೇಟಿಯಾಗಿ ಮಾತನಾಡೋಣ. ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆಯುವುದು ಅತೀ ಮುಖ್ಯ ಎಂದರು.

ಈಜುಕೊಳದ ನೀರಿನ ಗುಣಮಟ್ಟ ಸೇರಿದಂತೆ 3 ವರ್ಷಗಳ ಕಾಲ ಈಜುಕೊಳವನ್ನು ನಿರ್ಮಾಣ ಮಾಡಿದ ಗುತ್ತಿಗೆದಾರರೇ ನಿರ್ವಹಣೆ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಮುಲ್ಲೆ„ ಮುಗಿಲನ್‌ ತಿಳಿಸಿದರು. ಈಜುಕೊಳದ ಕುರಿತಂತೆ ಸ್ಮಾರ್ಟ್‌ ಸಿಟಿ ಮಹಾಪ್ರಬಂಧಕ ಅರುಣ್‌ ಪ್ರಭ, ಈಜುಕೊಳ ಸಮಿತಿಯ ಸಂಚಾಲಕ ತೇಜೋಮಯ ಮಾಹಿತಿ ನೀಡಿದರು.

Advertisement

ನ. 24ರಂದು ಮುಖ್ಯಮಂತ್ರಿ ಭೇಟಿ ಸಂದರ್ಭ ಈಗಾಗಲೇ ನಿರ್ಮಾಣಗೊಂಡಿರುವ ಕದ್ರಿ ಮಾರುಕಟ್ಟೆ ಸೇರಿದಂತೆ ಇತರ ಯೋಜನೆಗಳ ಉದ್ಘಾಟನೆ ಅಥವಾ ಗುದ್ದಲಿ ಪೂಜೆ ಇದ್ದರೆ ಕ್ರೋಡೀ ಕರಿಸಿ ಕೊಳ್ಳುವಂತೆ ಯೂ ಸಚಿವರು ಸೂಚಿಸಿದರು.

ಕಾರ್ಪೊರೇಟರ್‌ಗಳಾದ ಶಶಿಧರ ಹೆಗ್ಡೆ, ನವೀನ್‌ ಡಿ’ಸೋಜಾ, ಪ್ರವಾಸೋದ್ಯಮ ತಜ್ಞ ಯತೀಶ್‌ ಬೈಕಂಪಾಡಿ ಸಲಹೆ ನೀಡಿದರು.ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌, ಜಿ.ಪಂ ಸಿಇಒ ಡಾ| ಆನಂದ್‌, ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌, ಎಡಿಸಿ ಡಾ| ಸಂತೋಷ್‌ ಕುಮಾರ್‌, ಮನಪಾ ಆಯುಕ್ತ ಆನಂದ್‌ ಉಪಸ್ಥಿತರಿದ್ದರು.

21ರಿಂದ 10 ದಿನ ಕರಾವಳಿ ಉತ್ಸವ
ಕೊರೋನಾ ಹಿನ್ನೆಲೆಯಲ್ಲಿ 2019ರಿಂದ ನಡೆಯದಿರುವ ಕರಾವಳಿ ಉತ್ಸವವನ್ನು ಈ ಬಾರಿ ಮತ್ತೆ ನಡೆಸಲು ನಿರ್ಧರಿಸಲಾಗಿದ್ದು, ಉತ್ಸವಕ್ಕೆ ತಗಲುವ ಅಂದಾಜು ವೆಚ್ಚ ಸೇರಿದಂತೆ ಪ್ರಸ್ತಾವನೆಯನ್ನು ಕೂಡಲೇ ಸರಕಾರಕ್ಕೆ ಸಲ್ಲಿಸಿ, ಆ ಬಗ್ಗೆ ಮಾತನಾಡುತ್ತೇನೆ ಎಂದು ಸಚಿವರು ಜಿಲ್ಲಾಧಿಕಾರಿಗೆ ತಿಳಿಸಿದರು.

ಡಿ. 21ರಿಂದ 31ರ ವರೆಗೆ ವಿಭಿನ್ನ ಕಾರ್ಯಕ್ರಮಗಳೊಂದಿಗೆ ಕರಾವಳಿ ಉತ್ಸವ ನಡೆಸಲು ಈಗಾಗಲೇ ನಡೆದಿರುವ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next