ಅಫಜಲಪುರ: ಅಕ್ರಮ ಮಧ್ಯ ಮಾರಾಟ, ಗಾಂಜಾ ಸೇವನೆ, ಮಾರಾಟ, ಮಟ್ಕಾ, ಕ್ರಿಕೆಟ್ ಬೆಟ್ಟಿಂಗ್ ಸೇರಿದಂತೆ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆ ಮಾಹಿತಿ ನೀಡಿ. ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಕಡಿವಾಣ ಹಾಕಲಾಗವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ತಿಳಿಸಿದರು.
ತಾಲೂಕಿನ ಕರಜಗಿ ಗ್ರಾಮದಲ್ಲಿ ನಡೆದ “ನಿಮ್ಮ ಮನೆ ಬಾಗಿಲಿಗೆ’ ಪೊಲೀಸ್ ಗ್ರಾಮ ಸಭೆ ಉದ್ದೇಶಿಸಿ ಮಾತನಾಡಿದ ಅವರು ಪೊಲೀಸರೆಂದರೆ ಭಯ ಬೇಡ. ನಾನು ಸಹ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ. ಅಲ್ಲಿ ಪೊಲೀಸರೆಂದರೆ ನಮ್ಮ ರಕ್ಷಕರು ಎನ್ನುವ ಭಾವನೆಯಿದೆ. ಅವರು ನಿರ್ಭಯವಾಗಿ ಪೊಲೀಸ್ ಠಾಣೆಗೆ ಬರುತ್ತಾರೆ. ಅದೇ ರೀತಿ ನಮ್ಮಲ್ಲಿಯೂ ನೊಂದವರು ಯಾವುದೇ ಭಯವಿಲ್ಲದೇ ನಿರ್ಭಯವಾಗಿ ಠಾಣೆಗೆ ಬಂದು ಸಮಸ್ಯೆಗಳನ್ನು ಹೇಳಬೇಕು ಎಂದರು.
ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ನಾವು ಸಿದ್ಧರಿದ್ದೇವೆ. ನಾವು ನಿಮ್ಮಂತೆ ಸಾಮಾನ್ಯ ವ್ಯಕ್ತಿಗಳು, ನಿಮ್ಮ ರಕ್ಷಣೆಗೆ ಇರುವ ಸೇವಕರು. ನೀವು ಕಾನೂನು ಗೌರವಿಸುವುದರ ಜತೆಗೆ ಅವುಗಳನ್ನು ಪಾಲಿಸಿದರೆ ಹೆದರುವ ಅಗತ್ಯವೇ ಇಲ್ಲ. ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದರೆ ಘನತೆ, ಗೌರವ, ಮರ್ಯಾದೆ ಹಾಳಾಗುತ್ತದೆ ಎನ್ನುವ ಕೀಳರಿಮೆ ಬಿಡಿ.
ನೊಂದವರು, ಸಂಕಷ್ಟದಲ್ಲಿರುವ ಜನರಿಗೆ ನ್ಯಾಯ ಒದಗಿಸಲು ಪೊಲೀಸ್ ಇಲಾಖೆ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತದೆ. ಯುವಕರು ಹೆಚ್ಚಿನ ಮಟ್ಟದಲ್ಲಿ ಕಾನೂನು ಬಗ್ಗೆ ತಿಳಿದುಕೊಳ್ಳಬೇಕು. ವಾಹನ ಚಾಲಕರು ಹೆಲ್ಮೆಟ್, ಇನ್ಸೂರೆನ್ಸ್, ಲೈಸೆನ್ಸ್ ಸೇರಿದಂತೆ ಇತ್ಯಾದಿ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಪಾಲಕರು 18 ವರ್ಷದೊಳಗಿನ ಮಕ್ಕಳಿಗೆ ವಾಹನ ಚಲಾವಣೆ ಮಾಡಲು ನೀಡಬಾರದು ಎಂದು ಹೇಳಿದರು.
ಇತ್ತೀಚೆಯ ದಿನಗಳಲ್ಲಿ ಬಾಲ್ಯವಿವಾಹಗಳು ಹೆಚ್ಚಿನ ಮಟ್ಟದಲ್ಲಿ ಹಳ್ಳಿಗಳಲ್ಲಿ ನಡೆಯುತ್ತಿದ್ದು ಅವುಗಳನ್ನು ತಡೆಗಟ್ಟಲು 112 ಅಥವಾ 1098 ಸಂಖ್ಯೆ ಕರೆ ಮಾಡಿ ಮಾಹಿತಿ ನೀಡಿದರೆ ಬಾಲ್ಯವಿವಾಹಗಳನ್ನು ತಡೆದು ಅವರಿಗೆ ಒಂದು ಒಳ್ಳೆಯ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಲಾಗುವುದು ಎಂದರು.
ಡಿವೈಎಸ್ಪಿ ರವೀಂದ್ರ ಶಿರೂರ, ಸಿಪಿಐ ಜಗದೇವಪ್ಪ ಪಾಳಾ, ಪಿಎಸ್‌ಐ ವಿಶ್ವನಾಥ ಮುದರೆಡ್ಡಿ ಮಾತನಾಡಿ ಪೊಲೀಸ್ ಇಲಾಖೆಯು ಜನಸ್ನೇಹಿಯಾಗಿ ಮತ್ತು ಸಮಾಜಮುಖೀಯಾಗಿ ಕೆಲಸ ಮಾಡಬೇಕಿದೆ ಎಂದರು. ಗ್ರಾ ಪಂ ಅಧ್ಯಕ್ಷ ವಿಠೊಬಾ ಹಿರೆಕುರುಬರ, ಮುಖಂಡರಾದ ರಾಜಶೇಖರ ಜಿಡ್ಡಗಿ, ರಾಮಣ್ಣಾ ನೈಯೊಡಿ, ಚಂದ್ರಕಾಂತ ಉಪ್ಪಿನ, ಪೀರಪ್ಟ ನಾಯ್ಕೋಡಿ, ಸಂತೋಷ ಹಳಗೊದಿ, ಸಿದ್ಧು ಕಲಕೇರಿ, ಶಿವಾನಂದ ಕೊನಳ್ಳಿ, ಸಿದ್ಧು ಹೊರ್ತಿ, ಅಂಬು ರಾಠೊಡ, ಮಲಕಣ್ಣಾ ಪರೀಟ, ಪ್ರಕಾಶ ಆಲೇಗಾಂವ, ಮಲ್ಲು ಕೀಣಗಿ ಇನ್ನಿತರರು ಇದ್ದರು.