Advertisement

ಅಧಿಕಾರಿಗಳ ಕಾರುಬಾರಿಗೆ ಮಿತವ್ಯಯ ಅನ್ವಯವಿಲ್ಲ ! ಆರ್ಥಿಕ ಮಿತವ್ಯಯದ ನಡುವೆಯೂ ದುಬಾರಿ ವೆಚ್ಚ

12:17 AM Aug 20, 2022 | Team Udayavani |

ಬೆಂಗಳೂರು: “ಆರ್ಥಿಕ ಮಿತ್ಯವ್ಯಯ”ದ ನಡುವೆಯೂ ಅಧಿಕಾರಿಗಳ “ಕಾರು” ಬಾರಿಗೆ ಭರ್ಜರಿ ಬಂಪರ್‌ ನೀಡಿರುವ ಸರ್ಕಾರ ಹೊಸ ವಾಹನ ಖರೀದಿಗೆ ಆರ್ಥಿಕ ಮಿತಿಯನ್ನು ದುಪ್ಪಟ್ಟು ಮಾಡಿದೆ.

Advertisement

ಸರ್ಕಾರದ ವಿವಿಧ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಇಲಾಖಾ ಮುಖ್ಯಸ್ಥರಿಗೆ ಹೊಸ ಕಾರು ಖರೀದಿಗೆ ಅನುಮತಿ ನೀಡಿರುವ ರಾಜ್ಯ ಸರ್ಕಾರ, ವಾಹನ ಖರೀದಿ ಮೊತ್ತವನ್ನು ದುಪ್ಪಟ್ಟು ಏರಿಕೆ ಮಾಡಿದೆ.

ಈ ಸಂಬಂಧ ಆರ್ಥಿಕ ಇಲಾಖೆಯ ಸಹಮತಿ ಬಳಿಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆ.18ರಂದು ಆದೇಶ ಹೊರಡಿಸಿದೆ. 2019ರಲ್ಲಿ ಹೊಸ ವಾಹನ ಖರೀದಿ ಮಿತಿಯನ್ನು ಹೆಚ್ಚಿಸಲಾಗಿತ್ತು. ಈಗ ಮತ್ತೆ ಹೆಚ್ಚಿಸಲಾಗಿದ್ದು, ಕಳೆದ ಬಾರಿಗಿಂತ ಎರಡು ಪಟ್ಟು ಹೆಚ್ಚಿಸಲಾಗಿದೆ.

ಹೊಸ ಆದೇಶದಂತೆ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಕಾರ್ಯದರ್ಶಿ ಶ್ರೇಣಿಯ ಇಲಾಖಾ ಮುಖ್ಯಸ್ಥರಿಗೆ ಈ ಹಿಂದೆ ನಿಗದಿಪಡಿಸಲಾಗಿದ್ದ ಆರ್ಥಿಕ ಮಿತಿ 14 ಲಕ್ಷಗಳಿಂದ 20 ಲಕ್ಷ ರೂ.ಗೆ, ಜಿಲ್ಲಾಧಿಕಾರಿ, ಜಿ.ಪಂ. ಸಿಇಒ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಗೆ 9 ಲಕ್ಷದಿಂದ 18 ಲಕ್ಷ ರೂ.ಗೆ, ಇತರೆ ಜಿಲ್ಲಾ ಹಂತದ ಅಧಿಕಾರಿಗಳು, ಉಪವಿಭಾಗಾಧಿಕಾರಿ, ಪೊಲೀಸ್‌ ಉಪಾಧೀಕ್ಷರಿಗೆ 6.50 ಲಕ್ಷದಿಂದ 12.50 ಲಕ್ಷ ರೂ. ಹಾಗೂ ಇತರೆ ಅರ್ಹ ತಾಲೂಕು ಮಟ್ಟದ ಅಧಿಕಾರಿಗಳಿಗೆ 9 ಲಕ್ಷ ರೂ. ಮಿತಿ ನಿಗದಿಪಡಿಸಲಾಗಿದೆ.

ಹೊಸ ವಾಹನ ಖರೀದಿಸುವ ಸಂದರ್ಭದಲ್ಲಿ ಇಂಧನ ಮಿತವ್ಯಯ ಹಾಗೂ ನಿರ್ವಹಣಾ ವೆಚ್ಚ ಕಡಿಮೆ ಹೊಂದಿರುವ ವಾಹನಗಳನ್ನು “ಸರಕು ಮತ್ತು ಸರಬರಾಜು ನಿರ್ದೇಶನಾಲಯ’ (ಡಿ.ಜಿ.ಎಸ್‌.ಡಿ) ದರಗಳಿಗೆ ಒಳಪಟ್ಟು ಖರೀದಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

Advertisement

2019ರಲ್ಲಿ ಆಗಿತ್ತು ಹೆಚ್ಚಳ
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಇಲಾಖಾ ಮುಖ್ಯಸ್ಥರು ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಗಳಾಗಿದ್ದಲ್ಲಿ ವಾಹನ ಖರೀದಿಗೆ ಅವರಿಗೆ ನಿಗದಿಪಡಿಸಲಾಗಿದ್ದ ಮಿತಿಯನ್ನು 9 ಲಕ್ಷದಿಂದ 2019ರಲ್ಲಿ 14 ಲಕ್ಷಕ್ಕೆ ನಿಗದಿಪಡಿಸಲಾಗಿತ್ತು.

ಜಿಲ್ಲಾ ಮಟ್ಟದಲ್ಲಿ ಇಲಾಖಾ ಮುಖ್ಯಸ್ಥರ ಪಾತ್ರ ನಿರ್ವಹಿಸುವ ಜಿಲ್ಲಾಧಿಕಾರಿ, ಜಿ.ಪಂ. ಸಿಇಒ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಗೆ 9 ಲಕ್ಷದೊಳಗೆ ವಾಹನ ಖರೀದಿಸಲು ಅನುಮತಿ ನೀಡಲಾಗಿತ್ತು. ಇಲಾಖಾ ಮುಖ್ಯಸ್ಥರ ಪಾತ್ರ ನಿರ್ವಹಿಸುವ ಇತರೆ ಅರ್ಹ ಜಿಲ್ಲಾ/ ತಾಲೂಕು ಮಟ್ಟದ ಅಧಿಕಾರಿಗಳಿಗೆ 6.50 ಲಕ್ಷ ಮಿತಿಯೊಳಗೆ ವಾಹನ ಖರೀದಿಸಲು ಅನುಮತಿ ಇತ್ತು.

Advertisement

Udayavani is now on Telegram. Click here to join our channel and stay updated with the latest news.

Next