Advertisement

ನಿರಂತರ ನೀರು ವರದಿ ಸಲ್ಲಿಕೆಗೆ ಸೂಚನೆ

10:29 AM Jul 05, 2018 | Team Udayavani |

ಕಲಬುರಗಿ: ನಗರಕ್ಕೆ 24×7ನಿರಂತರ ನೀರು ಸರಬರಾಜು ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ಪ್ರಾತ್ಯಕ್ಷಿಕೆ ವಲಯದಲ್ಲಿ 24 ತಾಸು ನಿರಂತರ ನೀರು ಸರಬರಾಜು ಆಗುತ್ತಿರುವ ಬಗ್ಗೆ ಸಮಗ್ರ ಅಧ್ಯಯನ ವರದಿ ಸಲ್ಲಿಸಿ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ಅಧಿಕಾರಿಗಳಿಗೆ
ಸೂಚಿಸಿದರು.

Advertisement

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ 24×7ನಿರಂತರ ನೀರು ಸರಬರಾಜು ಯೋಜನೆ ಅನುಷ್ಠಾನ ಮತ್ತು ಸಾಂಸ್ಥಿಕ ಸುಧಾರಣೆಗಳ ಮೇಲ್ವಿಚಾರಣೆಯ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತಾವಿತ ಯೋಜನೆಯಲ್ಲಿ ನಗರದ ಆಯ್ದ ವಾರ್ಡುಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಡೆಮೋ ವಲಯದಲ್ಲಿ ಪ್ರತಿ ದಿನ, ತಿಂಗಳುವಾರು ನೀರು ಸರಬರಾಜು ಮಾಡಲಾಗುತ್ತಿರುವ ಪ್ರಮಾಣ, ಇದರಲ್ಲಿ ಬಳಕೆ ಮತ್ತು ಸೋರಿಕೆಯಾಗುತ್ತಿರುವ ಪ್ರಮಾಣ, ಕರಪಾವತಿ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಜಲಮಂಡಳಿ ಮತ್ತು ಕೆ.ಯೂ.ಐ.ಎಫ್‌. ಡಿ.ಸಿ ಅಧಿಕಾರಿಗಳಿಗೆ ಸೂಚಿಸಿದರು.

ಮಹಾನಗರದ ಜನತೆಗೆ 24×7ನಿರಂತರ ನೀರು ಒದಗಿಸುವ 562 ಕೋಟಿ ರೂ. ಅಂದಾಜಿನ ವಿಶ್ವ ಬ್ಯಾಂಕ್‌ ನೆರವಿನ ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಆಪರೇಟರ್‌ ಆಯ್ಕೆಗಾಗಿ ಈಗಾಗಲೆ ಕರೆಯಲಾದ ಎರಡು ಟೆಂಡರ್‌ಗಳಿಗೆ ಯಾವುದೇ ಬಿಡ್‌ ಸ್ವೀಕೃತವಾಗಿಲ್ಲ ಎಂದು ಹೇಳಿದರು. 

ಮುಂದೆ ಕರೆಯುವ ಬಿಡ್‌ ಸಫಲಗೊಳ್ಳಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ ಅವರು ಯೋಜನೆ ಯಶಸ್ವಿ ಅನುಷ್ಠಾನಕ್ಕಾಗಿ ಟೆಂಡರ್‌ ಷರತ್ತುಗಳಲ್ಲಿ ಸರಳೀಕರಣ ಮಾಡಲು ಹಾಗೂ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೆಳ ಹಂತದಲ್ಲಿ ಆಗುತ್ತಿರುವ ತೊಂದರೆಗಳ ಕುರಿತು ಕೆ.ಯೂ.ಐ.ಎಫ್‌.ಡಿ.ಸಿ. ಹಿರಿಯ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದರು. 

Advertisement

ನೀರಿನ ಕರ ಪಾವತಿಯನ್ನು ಆನ್‌ಲೈನ್‌ ಮೂಲಕ ಮಾಡುವಂತೆ ಸಾಫ್ಟವೇರ್‌ ಅಭಿವೃದ್ಧಿಪಡಿಸಬೇಕು. ಬಿಲ್‌ ಕಲೆಕ್ಟರ್‌ಗಳಿಗೆ ಹ್ಯಾಂಡ್‌ ಡಿವೈಸ್‌ ನೀಡಲು ಕ್ರಮ ಕೈಗೊಳ್ಳುವಂತೆ ನೀರು ಸರಬರಾಜಿನ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ವಿಯೋಲಿಯಾ ಇಂಡಿಯಾ ಪ್ರೈ.ಲಿ.ನ ಜಿಲ್ಲಾ ಸಹಾಯಕ ವ್ಯವಸ್ಥಾಪಕ ಅಶೋಕ ಚೌಧರಿಗೆ ನಿರ್ದೇಶನ ನೀಡಿದರು.

ನಿರಂತರ ನೀರು ಸರಬರಾಜು ಯೋಜನೆ ಹೊರತುಪಡಿಸಿ ನಗರಕ್ಕೆ ನೀರು ಸರಬರಾಜಿನ ಮೂಲಗಳಾದ ಬೆಣ್ಣೆತೋರಾ, ಭೀಮಾ ಮತ್ತು ಕೆರೆ ಭೋಸಗಾಗಳಿಂದ ನೀರು ಸರಬರಾಜಿನಲ್ಲಿ ಪ್ರಸ್ತುತ ತೀವ್ರ ಅಗತ್ಯವಾದ ಕಾಮಗಾರಿ ಕೈಗೊಳ್ಳಿ . ಇದಕ್ಕೆ ಬೇಕಾದ ಅನುದಾನದ ಬೇಡಿಕೆ ಕೂಡಲೇ ಸಲ್ಲಿಸಿ. ಅಲ್ಲದೆ ಕೊಳವೆ ಬಾವಿ ಫ್ಲಶ್‌ ಮಾಡುವ, ಮೋಟಾರ್‌ ಅಳವಡಿಕೆ ಬಗ್ಗೆಯೂ ಗಮನಹರಿಸಿ ಎಂದರು. 

ಕಲಬುರಗಿ ನಗರದಲ್ಲಿ 24×7ನಿರಂತರ ನೀರು ಸರಬರಾಜು ಯೋಜನೆ ಕಾಮಗಾರಿಯನ್ನು 2005ರಲ್ಲಿ ಆರಂಭಿಸಿ 2008ಕ್ಕೆ ಮುಕ್ತಾಯಗೊಳಿಸಲಾಗಿದೆ. ಪ್ರಸ್ತುತ ಪ್ರಾತ್ಯಕ್ಷಿಕವಾಗಿ ನಗರದ ವಾರ್ಡ್‌ ಸಂಖ್ಯೆ: 17, 23, 33 ಮತ್ತು 44ರಲ್ಲಿ ನಿರಂತರ ನೀರು ಸರಬರಾಜು ಸಂಪೂರ್ಣವಾಗಿ ಅನುಷ್ಠಾನಗೊಳಿಸಿದ್ದು, ವಾರ್ಡ್‌ ಸಂಖ್ಯೆ: 6, 19, 24, 32, 42, 43 ಮತ್ತು 49ರಲ್ಲಿ ಭಾಗಶಃ ಪೂರ್ಣಗೊಳಿಸಲಾಗಿದೆ ಎಂದು ಕೆ.ಯೂ.ಐ.ಎಫ್‌.ಡಿ.ಸಿ ಕಾರ್ಯನಿರ್ವಾಹಕ ಅಭಿಯಂತ ಡಿ.ವಿ. ಬಂಡೆವಾಡ ಮಾಹಿತಿ ನೀಡಿದರು.

ಪಾಲಿಕೆ ಮಹಾಪೌರರಾದ ಶರಣಕುಮಾರ ಮೋದಿ, ಪಾಲಿಕೆ ಕಾರ್ಯನಿರ್ವಾಹಕ ಅಭಿಯಂತ ಆರ್‌.ಪಿ. ಜಾಧವ್‌, ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತ ಉಮೇಶ ಪಾಂಚಾಳ, ಕೆ.ಯೂ.ಐ.ಎಫ್‌.ಡಿ.ಸಿ ಸಹಾಯಕ ಯೋಜನಾ ನಿರ್ದೇಶಕ ಜಿ.ಕೆ.ಪಾಟೀಲ, ಭಗವನದಾಸ್‌ ಸೇರಿದಂತೆ ಕೆ.ಯೂ.ಡಬ್ಲ್ಯು.ಎಸ್‌.ಡಿ.ಬಿ ಮತ್ತು ಕೆ.ಯೂ.ಐ.ಎಫ್‌.ಡಿ.ಸಿ ಅಧಿಕಾರಿ ಸಿಬ್ಬಂದಿ ಹಾಜರಿದ್ದರು.

ನಳದ ಸಂಪರ್ಕ ಪಡೆಯಲು ಅರ್ಜಿ ಆಹ್ವಾನ
ಕಲಬುರಗಿ:
24×7ನೀರು ಸರಬರಾಜು ಯೋಜನೆಯಡಿ ನಳದ ಸಂಪರ್ಕ ಪಡೆಯಲು ಸೇಡಂ ಪಟ್ಟಣದ ಸಾರ್ವಜನಿಕರು ಅರ್ಜಿಯನ್ನು ಸೇಡಂ ಪುರಸಭೆ ಕಾರ್ಯಾಲಯದಿಂದ ಜು. 10 ರಿಂದ ಪಡೆದು ಭರ್ತಿಮಾಡಿ ನಿಗದಿತ ಶುಲ್ಕ ಭರಿಸಿ ಸೂಕ್ತ ದಾಖಲೆಯೊಂದಿಗೆ ಸಲ್ಲಿಸಿ ನಳದ ಸಂಪರ್ಕ ಪಡೆಯಬೇಕು ಎಂದು ಸೇಡಂ ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಲು ಆ. 10 ಕೊನೆ ದಿನವಾಗಿದೆ. ಕೊನೆ ದಿನಾಂಕದ ನಂತರ ಅರ್ಜಿ ಸಲ್ಲಿಸುವ ಸಾರ್ವಜನಿಕರುಪುರಸಭೆ ನಿಗದಿಪಡಿಸಿದ ಶುಲ್ಕಗಳೊಂದಿಗೆ ನಳದ ಸಂಪರ್ಕ ಜೋಡಣಾ ವೆಚ್ಚ, ರಸ್ತೆ ಅಗೆತ ಮತ್ತು ದುರಸ್ತಿ ವೆಚ್ಚ ಭರಿಸಿ ನಳದ ಸಂಪರ್ಕ ಪಡೆಯಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸೇಡಂ ಪುರಸಭೆ ಕಚೇರಿ ಸಂಪರ್ಕಿಸಲು ಕೋರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next