ಬೆಂಗಳೂರು: ಮತದಾರರ ಮಾಹಿತಿ ಕಳವು ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಹಲಸೂರು ಗೇಟ್ ಪೊಲೀಸರು ಕರ್ತವ್ಯ ಲೋಪದಡಿ ಅಮಾನತುಗೊಂಡಿದ್ದ ಇಬ್ಬರು ಐಎಎಸ್ ಅಧಿಕಾರಿಗಳಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.
ಬಿಬಿಎಂಪಿ ಆಡಳಿತ ಹಾಗೂ ಚುನಾವಣೆ ವಿಭಾಗದ ವಿಶೇಷ ಅಧಿಕಾರಿ ರಂಗಪ್ಪ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಶ್ರೀನಿವಾಸ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಈ ಹಿಂದೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕೇಂದ್ರ ಚುನಾವಣ ಆಯೋಗದ ವರದಿ ಆಧರಿಸಿ ಇಬ್ಬರು ಅಧಿಕಾರಿಗಳನ್ನು ಕರ್ತವ್ಯ ಲೋಪದಡಿ ಸರಕಾರ ಅಮಾನತುಗೊಳಿಸಿತ್ತು.
ಮತ್ತೊಂದೆಡೆ ಚಿಲುಮೆ ಸಂಸ್ಥೆಯ ಮೇಲುಸ್ತುವಾರಿಯಾಗಿದ್ದ ಮಾರುತಿ ಮತ್ತು ಅಭಿಷೇಕ್ನನ್ನು ಬಂಧಿಸಲಾಗಿದೆ. ಈ ಹಿಂದೆ ಮಾರುತಿ ಮನೆ ಮೇಲೆ ದಾಳಿ ನಡೆಸಿದಾಗ ಲ್ಯಾಪ್ಟಾಪ್ ಹಾಗೂ ಇತರೆ ದಾಖಲೆಗಳು ಸಿಕ್ಕಿತ್ತು. ಹೀಗಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಕೆಲವೊಂದು ಗೊಂದಲದ ಹೇಳಿಕೆ ನೀಡಿದ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಹಾಗೆಯೇ ಅಭಿಷೇಕ್ ಕೂಡ ಸಂಸ್ಥೆಗೆ ಬೇಕಾದ ಗುರುತಿನ ಚೀಟಿಗಳನ್ನು ಕೊಡಿಸುತ್ತಿದ್ದ. ಈ ಆರೋಪದ ಮೇಲೆ ಬಂಧಿಸಲಾಗಿದೆ. ಪ್ರಕರಣದಲ್ಲಿ ಇದುವರೆಗೂ 14 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.