Advertisement

ಕುಡಿಯುವ ನೀರಿಗಾಗಿ ಮುಂಜಾಗ್ರತೆ ವಹಿಸಲು ಸೂಚನೆ

04:50 PM Jan 04, 2018 | Team Udayavani |

ಸುರಪುರ: ಬರುವ ಬೇಸಿಗೆಯಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಬಾರದು. ಈ ಕುರಿತಂತೆ ನಗರಸಭೆ ಮುಂಜಾಗ್ರತೆ ವಹಿಸಬೇಕು ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

Advertisement

ಇಲ್ಲಿಯ ನಗರಸಭೆಯ ಸಭಾಂಗಣದಲ್ಲಿ ಬುಧವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, ಹಾಳಾದ ಪೈಪ್‌
ಲೈನ್‌ಗಳನ್ನು ಶೀಘ್ರ ರಿಪೇರಿ ಮಾಡಿ ಕೆಟ್ಟು ಹೋಗಿರುವ ಕೊಳವೆ ಬಾವಿ ಮತ್ತು ಕೈ ಪಂಪ್‌ಗಳನ್ನು ದುರಸ್ತಿಗೊಳಿಸಬೇಕು. ಅಗತ್ಯವಿರುವ ವಾರ್ಡ್‌ಗಳಲ್ಲಿ ಬೋರವೆಲ್‌ ಕೊರೆಸಬೇಕು.

ಅವಶ್ಯವಿದ್ದರೆ ಟ್ಯಾಂಕ್‌ರ ಮೂಲಕ ನೀರು ಸರಬರಾಜು ಮಾಡಬೇಕು. ವಿದ್ಯುತ್‌ ಸಮಸ್ಯೆ ಆಗದಂತೆ ನಿಗಾವಹಿಸಬೇಕು. ಒಟ್ಟಾರೆ ಬೇಸಿಗೆಯುದ್ದಕ್ಕೂ ನೀರಿನ ಸಮಸ್ಯೆ ಆಗದಂತೆ ಕ್ರಮ ಜರುಗಿಸಬೇಕು ಎಂದು ತಿಳಿಸಿದರು.

ನಗರೋತ್ಥಾನ ಎರಡನೇ ಹಂತದಲ್ಲಿ 1.15 ಕೋಟಿ ರೂ. ಅನುದಾನ ಮಂಜುರಾಗಿದೆ. ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಇರುವ ವಿದ್ಯುತ್‌ ಸಮಸ್ಯೆಗಳನ್ನು ಹೋಗಲಾಡಿಸಬೇಕು. ಎಕ್ಸ್‌ಪ್ರೆಸ್‌ ಲೈನ್‌ಗೆ ಇರುವ ಅನಧಿಕೃತ ಸಂಪರ್ಕಗಳನ್ನು ಮುಲ್ಲಾಜಿಲ್ಲದೆ ಕಡಿತಗೊಳಿಸಬೇಕು. ಇಲ್ಲವಾದಲ್ಲಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಜೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ವೀರಶೈವ ಕಲ್ಯಾಣ ಮಂಟಪದಿಂದ ಹಸನಾಪುರ ವೃತ್ತದವರೆಗೆ 80 ಲಕ್ಷ ರೂ. ವೆಚ್ಚದಲ್ಲಿ ಬೀದಿ ದೀಪದ ವ್ಯವಸ್ಥೆ ಮಾಡಲಾಗುತ್ತದೆ. ಶೆಳ್ಳಗಿ ಪೈಪ್‌ಲೈನ್‌ 1 ಕಿ.ಮೀ ವಿಸ್ತರಣೆ ಸಂಬಂಧ ಮುಖ್ಯಮುಂತ್ರಿ ಅವರಿಗೆ ಹೆಚ್ಚುವರಿ ಅನುದಾನ ಕೋರಿ ಮನವಿ ಸಲ್ಲಿಸಲಾಗಿದೆ. ಮಂಜೂರಾತಿ ನೀಡುವ ಭರವಸೆ ಸಿಕ್ಕಿದೆ. ನಗರಸಭೆಯ 27 ವಾರ್ಡ್‌ಗಳಲ್ಲಿ ಮೂಲ ಸೌಕರ್ಯಗಳಿಗೆ ತೊಂದರೆ ಆಗದಂತೆ ನಿಗಾವಹಿಸಬೇಕು. ಯಾವುದೇ ಕಾರಣಕ್ಕೆ ಕುಡಿಯುವ ನೀರಿನ ವಿಷಯದಲ್ಲಿ ಲೋಪದೋಷ ಸಹಿಸುವುದಿಲ್ಲ ಎಂದು ಪೌರಾಯುಕ್ತ ಮತ್ತು ನೀರು ಸರಬರಾಜು ಸಿಬ್ಬಂದಿಗಳಗೆ ತಾಕೀತು ಮಾಡಿದರು.

Advertisement

ಪೌರಾಯುಕ್ತ ದೇವಿಂದ್ರ ಹೆಗಡೆ ಮಾತನಾಡಿ, ನಗರಸಭೆಯು ನಗರದ ನೀರಿನ ಸಮಸ್ಯೆಗೆ ಆದ್ಯತೆ ನೀಡಿದೆ. ಪ್ರತಿಯೊಂದು
ವಾರ್ಡ್‌ಗಳಿಗೆ ಕ್ರಮಬದ್ಧವಾಗಿ ನೀರು ಸರಬರಾಜು ಮಾಡಲಾಗುತ್ತಿದೆ. ವಾರ್ಡ್‌ಗಳನ್ನು ಬಯಲು ಶೌಚಾಲಯ ಮುಕ್ತಗೊಳಿಸಲು ಪ್ರಾಮಾಣಿಕ ಪ್ರಯತ್ನ ಮುಂದುವರೆಸಲಾಗಿದೆ. 

ನಗರದಲ್ಲಿ 8,775 ಮನೆಗಳಿದ್ದು, ಆ ಪೈಕಿ 6,426 ಮನೆಗಳಲ್ಲಿ ಶೌಚಾಲಯವಿದೆ. 2,249 ಮನೆಗಳಲ್ಲಿ ಶೌಚಾಲಯಗಳಿಲ್ಲ. 9 ನೂರು ಶೌಚಾಲಯಗಳ ಅನುದಾನ ಲಭ್ಯವಿದೆ. ಶೀಘ್ರದಲ್ಲಿಯೇ ಎರಡನೆ ಹಂತದ ಹಣವನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತಿದೆ. ವಾರ್ಡ್‌ ನಂ.5,7,8,11,18,19,20,21 ವಾರ್ಡ್‌ಗಳು ಬಯಲು ಶೌಚಾಲಯ ಮುಕ್ತವಾಗಿವೆ. ಇನ್ನುಳಿದವುಗಳಿಗೆ ನಗರಸಭೆ ಸದಸ್ಯರ ಸಹಕಾರ ನೀಡಬೇಕು ಎಂದು ಇತರೆ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ಆಡಳಿತ ಮತ್ತು ಪ್ರತಿ ಪಕ್ಷದ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ನಗರಸಭೆ ಅಧ್ಯಕ್ಷೆ ಕವಿತಾ ಎಲಿಗಾರ, ಉಪಾಧ್ಯಕ್ಷೆ ರಾಣಿ ಸರಿತಾನಾಯಕ ವೇದಿಕೆಯಲ್ಲಿದ್ದರು. ಸುರೇಶ ವಿಭೂತೆ ವರದಿ ವಾಚನೆ ಮಾಡಿದರು. ವ್ಯವಸ್ಥಾಪಕ ಯಲ್ಲಪ್ಪನಾಯಕ ಡೊಣ್ಣಿಗೇರಾ, ಎಇಇ ಪರಶುರಾ ಮ, ಎಇ ಸುನೀಲನಾಯಕ. ಆರ್‌ಐ ವೆಂಕಟೇಶ, ಸುರೇಂದ್ರ ಕರಕಳ್ಳಿ ಮತ್ತು ಜೆಸ್ಕಾಂ ಅಧಿಕಾರಿಗಳು ಇದ್ದರು.

36 ಸಾವಿರ ವೆಚ್ಚದಲ್ಲಿ ಮೊಬೈಲ್‌ ಖರೀದಿ
36 ಸಾವಿರ ವೆಚ್ಚದಲ್ಲಿ ಅಧ್ಯಕ್ಷರಿಗೆ ಮೊಬೈಲ್‌ ಎಂದು ಖರ್ಚಿನಲ್ಲಿ ತೋರಿಸಲಾಗಿದೆ. ಇದು ಯಾವ ಆಧಾರದಲ್ಲಿ ಕೊಡಿಸಿದ್ದೀರಿ. ಟ್ಯಾಂಕರ್‌ ನೀರಿನ ಸರಬರಾಜು ಸೇರಿದಂತೆ ಇತರೆ ಖರ್ಚು ವೆಚ್ಚದಲ್ಲಿ ಅನುಮಾನ ಕಂಡು ಬರುತ್ತಿದೆ ಎಂದು ವಿರೋಧ ಪಕ್ಷದ ಸದಸ್ಯರು ಆಕ್ಷೇಪಣೆ ಎತ್ತಿದರು. ಇದಕ್ಕೆ ಪಕ್ಷ ಭೇದ ಮರೆತು ಎಲ್ಲಾ ಸದಸ್ಯರು ಧ್ವನಿಗೂಡಿಸಿದರು. ಪೌರಾಯುಕ್ತರು ಸಮರ್ಪಕವಾಗಿ ಉತ್ತರಿಸಲು ತಡಬಡಾಯಿಸಿದರು. ಶಾಸಕರು ಮಧ್ಯ ಪ್ರವೇಶಿಸಿ ಈ ಬಗ್ಗೆ ನಂತರ ಪರಿಶೀಲಿಸೋಣ ಎಂದು ಹೇಳಿ ವಾತಾವರಣ ತಿಳಿಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next