ಬೆಂಗಳೂರು: ಗ್ರಾಮ ನಕಾಶೆಯಲ್ಲಿ ಇರುವ ದಾರಿಗಳ ಹಕ್ಕನ್ನು ರೈತರಿಗೆ ನೀಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರಿಗೆ ಕಂದಾಯ ಇಲಾಖೆ ಸೂಚಿಸಿದೆ.
ಗ್ರಾಮ ನಕಾಶೆಯಲ್ಲಿರುವ ಕಾಲುದಾರಿ, ಬಂಡಿದಾರಿ ಅಥವಾ ರಸ್ತೆಗಳಲ್ಲಿ ಅನ್ಯ ಕೃಷಿಕರು ಸಂಚರಿಸಲು ಜಮೀನು ಮಾಲಕರು ಅಡ್ಡಿಪಡಿಸುತ್ತಿರುವ ಪ್ರಕರಣಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಸುತ್ತೋಲೆ ಹೊರಡಿಸಿದ್ದು, ರೈತರ ದಾರಿ ಹಕ್ಕನ್ನು ರಕ್ಷಿಸುವಂತೆ ತಹಶೀಲ್ದಾರರಿಗೆ ತಿಳಿಸಿದೆ.
ಕೃಷಿ ಜಮೀನಿನ ಮಾಲಕರು ತಮ್ಮ ಜಮೀನಿನಲ್ಲಿ ಅನ್ಯ ಕೃಷಿ ಬಳಕೆದಾರರು ಸಂಚರಿಸಲು ಅವಕಾಶ ನೀಡದೆ ಅಡ್ಡಿಪಡಿಸಿರುವ ಅಥವಾ ದಾರಿಗಳನ್ನು ಮುಚ್ಚಿರುವ ಪ್ರಕರಣಗಳಲ್ಲಿ ದಾರಿಗಿರುವ ಅಡ್ಡಿಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಸರಕಾರ ತಿಳಿಸಿದೆ.
ರೈತರು ವ್ಯವಸಾಯದ ಉದ್ದೇಶಗಳಿಗೆ ಬಳಸುವ ಕೃಷಿ ಸಲಕರಣೆಗಳನ್ನು ಸಾಗಿಸಲು ಅನ್ಯ ಭೂಮಾಲಕರ ಖಾಸಗಿ ಜಮೀನುಗಳಲ್ಲಿ ತಿರುಗಾಡಲು “ದಾರಿ ಸಮಸ್ಯೆ’ಯಿದ್ದು ಬಳಕೆದಾರ ರೈತರಿಗೆ ತೊಂದರೆ ಆಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ದಾರಿ ಸಮಸ್ಯೆಯಿಂದ ಕೃಷಿ ಪೂರಕ ಚಟುವಟಿಕೆ ನಡೆಸಲು, ಬೆಳೆದ ಫಸಲನ್ನು ಹೊರತರಲಾಗದೆ ಕೃಷಿಕರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಸರಕಾರ ಸುತ್ತೋಲೆಯಲ್ಲಿ ಹೇಳಿದೆ.
ಗ್ರಾಮ ನಕಾಶೆಯಲ್ಲಿ ಕಂಡ ದಾರಿಗಳಲ್ಲಿ ಬಳಕೆದಾರ ರೈತರ ಸಂಚಾರಕ್ಕೆ ಅವಕಾಶವಿದ್ದರೂ ಕೆಲವು ಜಮೀನು ಮಾಲಕರು ಅಡ್ಡಿಪಡಿಸುತ್ತಿರುವುದು, ರೈತರ ಮಧ್ಯದ ವೈಯಕ್ತಿಕ ದ್ವೇಷ/ಅಸೂಯೆ, ಹೊಂದಾಣಿಕೆ ಕೊರತೆಯಿಂದ ದಾರಿ ಮುಚ್ಚಿರುವ ಪ್ರಸಂಗಗಳಿವೆ. ಆದರೆ ಭಾರತೀಯ ಈಸ್‌ಮೆಂಟ್ ಕಾಯ್ದೆ ಪ್ರಕಾರ ಪ್ರತಿ ಜಮೀನಿನ ಮಾಲಕರು ಅಥವಾ ಜಮೀನಿನ ಅನುಭವದಲ್ಲಿರುವವರು ಅವರ ಭೂಮಿಯನ್ನು ಪ್ರವೇಶಿಸುವ ಹಕ್ಕು ಅಥವಾ ವಹಿವವಾಟಿನ ಹಕ್ಕನ್ನು ಹೊಂದಿದ್ದು ಈ ಹಕ್ಕಿನ ಮೇಲೆ ಹಸ್ತಕ್ಷೇಪ ಮಾಡಲು ಅಥವಾ ಹಕ್ಕನ್ನು ಕ್ಷೀಣಿಸುವುದಕ್ಕೆ ಸಾಧ್ಯವಿಲ್ಲ ಎಂದು ಕಂದಾಯ ಇಲಾಖೆ ತಿಳಿಸಿದೆ.