ಗೌರಿಬಿದನೂರು: ತಾಲೂಕಿನ ತೊಂಡೇಬಾವಿ ಬಳಿಯ ಎಸಿಸಿ ಸಿಮೆಂಟ್ ಕಾರ್ಖಾನೆಯು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಾಗದ ಸ್ಥಳ ಪರಿಶೀಲನೆ ಮಾಡಿ 15 ದಿನಗಳಲ್ಲಿ ವಿಧಾನಸಭೆಯ ಅರ್ಜಿಗಳ ಸಮಿತಿಗೆ ವರದಿ ನೀಡಬೇಕೆಂದು ರಾಜ್ಯ ವಿಧಾನಸಭಾ ಉಪಸಭಾಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು, ಸರ್ವೆ ಇಲಾಖೆಯ ಉಪನಿರ್ದೇಶಕರು, ಎಸಿ ಹಾಗೂ ತಹಶೀಲ್ದಾರ್ ಅವರಿಗೆ ಸೂಚಿಸಿದರು.
99 ವರ್ಷಕ್ಕೆ ಲೀಸ್‌ಗೆ: ಎಸಿಸಿ ಕಾರ್ಖಾನೆಯು ಸರ್ಕಾರಿ ಬಿ.ಖರಾಬು ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದು, ಸರ್ಕಾರವು ಶಾಲೆಯ ಉದ್ದೇಶಕ್ಕಾಗಿ ಶ್ರೀ ಶಿವಾನಂದ ಸೇವಾಶ್ರಮ ಪ್ರೌಢಶಾಲೆಗೆ ಮಂಜೂರು ಮಾಡಿರುವ ಭೂಮಿಯನ್ನು ಉದ್ದೇಶಿತ ಕಾರ್ಯಕ್ಕೆ ಬಳಸಿಕೊಳ್ಳದೇ ಕಾರ್ಖಾನೆಗೆ 99 ವರ್ಷಕ್ಕೆ ಲೀಸ್‌ಗೆ ಕೊಟ್ಟಿರುವುದು, ಕಾರ್ಖಾನೆಯಿಂದ ವ್ಯಾಪಕವಾಗಿ ಮಾಲಿನ್ಯ ಉಂಟಾಗುತ್ತಿದೆ.
ಸಿಮೆಂಟ್ ದೂಳಿನಿಂದ ಮಾಲಿನ್ಯ: ಜನರು ಅನಾರೋಗ್ಯದಿಂದ ನರಳುತ್ತಿರುವ ಬಗ್ಗೆ ವ್ಯಾಪಕ ದೂರು ಬಂದರೂ ಯಾವದೇ ಕ್ರಮಕೈಗೊಳ್ಳದೇ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ನಿರ್ಲಕ್ಷಿಸಿರುವುದು ಕಂಡುಬರುತ್ತಿದೆ. ಸ್ಥಳ ಪರಿಶೀಲನೆ ನಡೆಸಿದಾಗ ಮೇಲ್ನೋಟಕ್ಕೆ ಸರ್ಕಾರಿ ಭೂಮಿ ಒತ್ತುವರಿ ಹಾಗೂ ಸಿಮೆಂಟ್ ದೂಳಿನಿಂದ ಮಾಲಿನ್ಯ ಉಂಟಾಗುತ್ತಿರುವುದು ಕಂಡುಬಂದಿದೆ ಎಂದರು.
ಸರ್ಕಾರದಿಂದ ಶಾಲೆಯ ಕ್ರೀಡಾಂಗಣ ಹಾಗೂ ಇತರೆ ಉದ್ದೇಶಕ್ಕಾಗಿ 5.17 ಎಕರೆ ಜಮೀನನ್ನು ಶ್ರೀ ಶಿವಾನಂದ ಸೇವಾಶ್ರಮ ಪ್ರೌಢಶಾಲೆಯ ಆಡಳಿತ ಮಂಡಳಿಗೆ ಮಂಜೂರು ಮಾಡಲಾಗಿತ್ತು.
Advertisement
ಇತ್ತೀಚೆಗೆ ವಿಧಾನಸಭಾ ಅರ್ಜಿಗಳ ಸಮಿತಿಗೆ ಎಸಿಸಿ ಕಾರ್ಖಾನೆಯ ವಿರುದ್ಧ ಬಂದ ಲಿಖೀತ ದೂರಿನ ಮೇರೆಗೆ ತೊಂಡೇಬಾವಿ ಬಳಿಯ ಎಸಿಸಿ ಸಿಮೆಂಟ್ ಕಾರ್ಖಾನೆಯ ಸ್ಥಳ ಪರಿಶೀಲನೆ ನಡೆಸಿದ ನಂತರ ಅಲ್ಲಿನ ಎವಿಎನ್‌ಆರ್ ಕಾಲೇಜಿನ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
Related Articles
Advertisement
ಭೂಮಿ ಹಿಂಪಡೆಯಲು ತಾಕೀತು: ಆಶ್ರಮಕ್ಕೆ ಹಾಗೂ ಶಾಲಾ ಉಪಯೋಗಕ್ಕೆ ಎಂದು ಮಂಜೂರು ಮಾಡಿಸಿಕೊಂಡು ಎಸಿಸಿ ಸಿಮೆಂಟ್ ಕಾರ್ಖಾನೆಗೆ ಅದನ್ನು 2008-2009ರಲ್ಲಿ 99 ವರ್ಷಗಳಿಗೆ ಭೋಗ್ಯಕ್ಕೆ ನೋಂದಣಿ ಮಾಡಿಸಲಾಗಿದ್ದು, ಉದ್ದೇಶಿತ ಕಾರ್ಯಕ್ಕೆ ಬಳಸದಿರುವುದರಿಂದ ಆ ಶಾಲೆ ಮೇಲೆ ಕ್ರಮಕೈಗೊಳ್ಳಿ ಹಾಗೂ ಸದರಿ ಭೂಮಿಯನ್ನು ಸರ್ಕಾರಕ್ಕೆ ವಾಪಸ್ ಪಡೆಯಿರಿ ಎಂದರು.
15 ದಿನದಲ್ಲಿ ವರದಿ ನೀಡಿ: ಸರ್ಕಾರಿ ಜಮೀನು 14-4 ಬಿ.ಖರಾಬು ಜಾಗದಲ್ಲಿ ಅನಧಿಕೃತವಾಗಿ ಕಟ್ಟಡ ಸೇರಿದಂತೆ ಅನೇಕ ರೀತಿಯ ಅಭಿವೃದ್ಧಿ ಮಾಡಿದ್ದಾರೆ. ಹಳ್ಳಿಗೆ ಓಡಾಡುವ ಸಾರ್ವಜನಿಕ ರಸ್ತೆ ಮುಚ್ಚಿದ್ದಾರೆ. ಸರ್ಕಾರಿ ಕಾಲುವೆ ಬಳಸಿಕೊಂಡಿದ್ದಾರೆ. ಇವೆಲ್ಲವನ್ನೂ ಪರಿಶೀಲನೆ ನಡೆಸಿ 15 ದಿನದೊಳಗೆ ವಿಧಾನಸಭೆ ಅರ್ಜಿಗಳ ಸಮಿತಿಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಮತ್ತು ಇತರಿ ಅಧಿಕಾರಿಗಳಿಗೆ ಸೂಚಿಸಿದರು.
ಶಾಲೆ, ಇಬ್ಬರಿಗೂ ನೋಟಿಸ್ ನೀಡಿ: ಶಾಲೆಯ ಉದ್ದೇಶಕ್ಕಾಗಿ ನೀಡಿರುವ ಭೂಮಿಯನ್ನು ಪರಭಾರೆ ಮಾಡಿರುವ ಶ್ರೀ ಶಿವಾನಂದ ಸೇವಾಶ್ರಮ ಪ್ರೌಢಶಾಲೆಯ ಆಡಳಿತ ಮಂಡಳಿಗೆ ನೋಟಿಸ್ ನೀಡಿ ಎಂದ ಅವರು, ಶಾಲೆಯ ಶಿಕ್ಷಕ ಸಂಬಳಕ್ಕಾಗಿ ಲೀಸ್‌ಗೆ ನೀಡಿದೇವೆ ಎಂಬ ಉತ್ತರ ನೀಡಿರುವ ಶಾಲಾ ಆಡಳಿತ ಮಂಡಳಿ ಬಗ್ಗೆ ಪ್ರಶ್ನಿಸಿ ಈ ಶಾಲೆ ಅನುದಾನಿತ ಶಾಲೆಯಾಗಿರುವಾಗ ಅವರಿಗೆ ಸಂಬಳ ನೀಡುತ್ತಿಲ್ಲವೇ ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕರನ್ನು ಪ್ರಶ್ನಿಸಿದರು. ಶಿಕ್ಷಕ ವೇತನಕ್ಕೆ 5ಲಕ್ಷ ಸರ್ಕಾರದಿಂದ ಸಂಬಳ ನೀಡಲಾಗುತ್ತಿದೆ ಎಂದು ವಿವರಿಸಿದರು.
ಸತ್ಯಾಸತ್ಯತೆ ಪರಿಶೀಲಿಸಿಲ್ಲ: ಉದ್ದೇಶಪೂರ್ವಕವಾಗಿ ಮಾಡಿರುವ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನೋಟಿಸ್ ನೀಡಿ ಸರ್ಕಾರಕ್ಕೆ ವಾಪಸ್ ಪಡೆದುಕೊಳ್ಳಿ, 14-4 ಎಷ್ಟು ಸರ್ವೆ ನಂಬರ್‌ಗಳನ್ನು ಒಳಗೊಂಡಿದೆ ಎಂಬುದನ್ನು ಪರಿಶೀಲಿಸಿ, ಎಲ್ಲೆಲ್ಲಿ ಕಟ್ಟಡ ಬಂದಿದೆ ಎಂಬುದರ ಬಗ್ಗೆಯೂ ವರದಿ ನೀಡಬೇಕು.
ಶಾಲೆಯ ಆಡಳಿತ ಮಂಡಳಿ ಸರ್ಕಾರಿ ಜಾಗ 2 ಎಕರೆ ಗ್ಯಾರೇಜ್, ಹೋಟೆಲ್ಗಳಿಗೆ ನೀಡಿ ಬಾಡಿಗೆ ಪಡೆಯುತ್ತಿದ್ದಾರೆ ಎಂಬ ದೂರು ಬಂದಿದ್ದು, ತಹಶೀಲ್ದಾರ್ ಪರಿಶೀಲಿಸಿ ಸಮಿತಿಗೆ ವರದಿ ನೀಡಬೇಕು. ಕಾರ್ಖಾನೆಗೆ ಎನ್‌ಒಸಿ ನೀಡುವಾಗ ಸತ್ಯಾಸತ್ಯತೆ ಪರಿಶೀಲಿಸದೆ ನೀಡಲಾಗಿದೆ ಎಂದರು.
ಕೆೆಐಎಡಿಬಿಯಿಂದ 70 ಎಕರೆ ಮಂಜೂರಾಗಿದೆ. ಇಬ್ಬರು ರೈತರಿಗೆ ಪರಿಹಾರ ನೀಡಿಲ್ಲ ಎಂದಾಗ, ಒಂದು ಸಿವಿಲ್ ವಿವಾದ ಇದೆ. ಇನ್ನೊಂದು ಸರಿಮಾಡಿ ಮಾಡಿ ಪರಿಹಾರ ನೀಡಲಾಗುವುದು ಎಂದು ಕೆಐಎಡಿಬಿ ಅಧಿಕಾರಿ ಮಂಜುನಾಥ್ ಉತ್ತರಿಸಿದರು.
ಸಭೆಯಲ್ಲಿ ಸಮಿತಿಯ ಸದಸ್ಯರು ಹಾಗೂ ಶಾಸಕರಾದ ಸುರೇಶ್‌ಗೌಡ, ಶಾಸಕಿ ಸೌಮ್ಯರೆಡ್ಡಿ, ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಮಧುಸೂದನ್, ಲಾಲ್ಜಿ ಟಂಡನ್, ಸರ್ವೆ ಇಲಾಖೆಯ ಉಪನಿರ್ದೇಶಕರು, ಕೆಐಎಡಿಬಿ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ತಹಶೀಲ್ದಾರ್ ಶ್ರೀನಿವಾಸ್, ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸ್ಥಳೀಯರಿಗೆ ಚರ್ಮರೋಗ, ಅಸ್ತಮಾ:
ಕಾರ್ಖಾನೆ ಮುಚ್ಚುವವರಿಗೆ ಹೋರಾಟ ನಿಲ್ಲುವುದಿಲ್ಲ ಎಂದು ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಮುಖಂಡರು ಹೇಳಿಕೆ ನೀಡಿದ್ದು, ಕಾರ್ಖಾನೆಯಿಂದಾಗಿ ಸ್ಥಳೀಯರಿಗೆ ಚರ್ಮರೋಗ, ಅಲರ್ಜಿ, ಅಸ್ತಮಾ ಬರುತ್ತಿದೆ. ಕಾರ್ಖಾನೆಯನ್ನು ಸ್ಥಳಾಂತರಿಸಬೇಕು ಎಂದಿರುವ ಅವರು, ಯಾವುದೇ ಹೋರಾಟಕ್ಕೂ ಸಿದ್ಧ ಎಂದಿದ್ದಾರೆ. ಕಾರ್ಖಾನೆ ಕುಡಮಲಕುಂಟೆ ಹತ್ತಿರ ಇರಬೇಕಿತ್ತು. ಇದು ಕೈಗಾರಿಕಾ ವಲಯ ಅಲ್ಲ ಎಂದು ಪತ್ರದ ಮೂಲಕ ಅವರ ಗಮನಕ್ಕೆ ತಂದಿದ್ದು, ಶಾಸಕರಿಗೆ ಜೂ.24ರಂದು ಮನವಿ ನೀಡಿದ್ದೇವೆ ಎಂದು ತಿಳಿಸಿದರು.