Advertisement

ಶೀಘ್ರ ಮಳೆ ಹಾನಿ ವರದಿಗೆ ಸೂಚನೆ

03:03 PM May 23, 2022 | Team Udayavani |

ಹಾವೇರಿ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಬೀಳುತ್ತಿರುವ ನಿರಂತರ ಮಳೆಗೆ ಜೀವ, ಜಾನುವಾರು, ಬೆಳೆ, ಮನೆ ಹಾನಿಯಾಗಿದ್ದು, ಈ ಬಗ್ಗೆ ಮೂರು ದಿನದೊಳಗೆ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ ತಿಳಿಸಿದರು.

Advertisement

ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ಬಿದ್ದ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಮನೆ, ಬೆಳೆ ಹಾನಿಗೊಂಡು ಕಷ್ಟದಲ್ಲಿರುವವರಿಗೆ ತುರ್ತಾಗಿ ಸ್ಪಂದಿಸುವುದು ಸರ್ಕಾರದ ಕರ್ತವ್ಯ. ಹಾನಿಯ ಸಮೀಕ್ಷೆಯನ್ನು ಮೇ 25ರೊಳಗೆ ಪೂರ್ಣಗೊಳಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೆಳೆ ಹಾನಿಗೊಳಗಾದವರಿಗೆ ತುರ್ತಾಗಿ ಸ್ಪಂದಿಸುವಂತೆ ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ಹೇಳಿದರು.

ಮೇ ತಿಂಗಳ ವಾಡಿಕೆ ಮಳೆ 41 ಮಿಮೀ ಆಗಿದ್ದು, ಇದುವರೆಗೆ 197 ಮಿಮೀ ಮಳೆ ಬಿದ್ದಿದೆ. ಮೇ 15ರಿಂದ ಮೇ 21ರವರೆಗೆ 15 ಮಿಮೀ ವಾಡಿಕೆ ಮಳೆ ಇದ್ದು, ವಾಸ್ತವವಾಗಿ 137 ಮಿಮೀ ಮಳೆಯಾಗಿದೆ. ಈ ಸಾಲಿನಲ್ಲಿ ಜಿಲ್ಲೆಯಲ್ಲಿ ಸಿಡಿಲು ಬಡಿದು, ಗೋಡೆ ಕುಸಿದು 5 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಕುಟುಂಬಕ್ಕೆ ಈಗಾಗಲೇ 24 ಲಕ್ಷ‌ ರೂ. ಪರಿಹಾರ ನೀಡಲಾಗಿದೆ.

ಹಾವೇರಿ ತಾಲೂಕಿನಲ್ಲಿ 247, ರಾಣಿಬೆನ್ನೂರು 176, ಬ್ಯಾಡಗಿ 126 ಹಿರೇಕೆರೂರು 23, ರಟ್ಟೀಹಳ್ಳಿ 62, ಸವಣೂರು 210, ಶಿಗ್ಗಾವಿ 47 ಸೇರಿದಂತೆ 976 ಮನೆಗಳು ಬಿದ್ದಿವೆ. 481 ಹೆಕ್ಟೇರ್‌ ಕೃಷಿ ಬೆಳೆ, 278 ಹೆಕ್ಟೇರ್‌ ತೋಟಗಾರಿಕಾ ಬೆಳೆ ಹಾನಿಯಾಗಿದೆ. 410 ಶಾಲೆಗಳ 815 ಕೊಠಡಿಗಳಿಗೆ ಹಾನಿಯಾಗಿದೆ. 132 ಅಂಗನವಾಡಿಗಳಿಗೆ ಭಾಗಶಃ ಹಾಗೂ 18 ಅಂಗನವಾಡಿ ಸಂಪೂರ್ಣ ಹಾನಿಯಾಗಿದೆ. ಹೆಸ್ಕಾಂಗೆ ಸಂಬಂಧಿಸಿದಂತೆ 1498 ವಿದ್ಯುತ್‌ ಕಂಬಗಳು ಮುರಿದಿದ್ದು, 71 ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ. ಲೋಕೋಪಯೋಗಿ ಇಲಾಖೆಯ 9 ಕಿಮೀ ರಾಷ್ಟ್ರೀಯ ಹೆದ್ದಾರಿ, 44 ಕಿಮೀ ಜಿಲ್ಲಾ ಹೆದ್ದಾರಿ, 11 ಸೇತುವೆಗಳು ಹಾನಿಗೀಡಾಗಿವೆ. ಪಿಆರ್‌ ಇಡಿ ಇಲಾಖೆ ವ್ಯಾಪ್ತಿಯಲ್ಲಿ 289 ಕಿಮೀ ಗ್ರಾಮೀಣ ರಸ್ತೆ, 17 ಸೇತುವೆ, 6 ಕೆರೆಗಳಿಗೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.

ಮಳೆ ಹಾನಿ ಪರಿಹಾರ ನೀಡಲು ಸರ್ಕಾರಕ್ಕೆ ಹಣಕಾಸಿನ ಕೊರತೆಯಿಲ್ಲ. ಅಲ್ಲದೇ, ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡುವ ಬಗ್ಗೆ ಚುನಾವಣಾ ಆಯೋಗ ವಿನಾಯಿತಿ ನೀಡಿದೆ. ನೆರೆ ಪೀಡಿತ ಗ್ರಾಮಗಳ ಸ್ಥಳಾಂತರಕ್ಕೆ ಸರ್ಕಾರ ಬದ್ಧವಾಗಿದೆ. ಆದರೆ, ಜನರು ಸ್ಥಳಾಂತರಿತ ಗ್ರಾಮಗಳಿಗೆ ಹೋಗಲು ಮನಸ್ಸು ಮಾಡುತ್ತಿಲ್ಲ. ಆದರೂ, ಜಿಲ್ಲೆಯಲ್ಲಿ ಜಾಗ ಗುರುತಿಸಿ ಜನರು ಒಪ್ಪಿದರೆ ನೆರೆ ಪೀಡಿತ ಗ್ರಾಮಗಳನ್ನು ಸ್ಥಳಾಂತರಿಸಲು ಕ್ರಮ ವಹಿಸಲಾಗುವುದು ಎಂದರು.

Advertisement

ಬೆಳೆ ಪರಿಹಾರ ವಿತರಣೆಯಲ್ಲಿ ಅಕ್ರಮ ಎಸಗಿ ಅಮಾನತುಗೊಂಡಿದ್ದ ಅ ಧಿಕಾರಿಗಳು ಮತ್ತೆ ಅದೇ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ, ಈ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದು ಪ್ರತಿಕ್ರಿಯಿಸಿದರು.

ಸಿಎಂ ನಿರ್ಧಾರವೇ ಅಂತಿಮ: ಮುಂದಿನ ವರ್ಷ ಚುನಾವಣೆ ನಡೆಯುವುದರಿಂದ ಸ್ವಂತ ಜಿಲ್ಲೆಗೆ ಉಸ್ತುವಾರಿ ಜವಾಬ್ದಾರಿ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಶಿವರಾಮ ಹೆಬ್ಟಾರ್‌, ಈ ಬಗ್ಗೆ ಹಿಂದೆಯೇ ಚರ್ಚೆಯಾಗಿತ್ತು. ಮುಖ್ಯಮಂತ್ರಿಗಳೂ ಇದನ್ನೇ ಹೇಳಿದ್ದರು. ಆದರೆ, ಪಕ್ಷದ ಹೈಕಮಾಂಡ್‌ ಸೂಚನೆ ಮೇರೆಗೆ ಬೇರೆ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ. ಈ ಬಗ್ಗೆ ಸಿಎಂ ನಿರ್ಧಾರವೇ ಅಂತಿಮ ಎಂದು ಉತ್ತರಿಸಿದರು.

ಶಾಸಕ ನೆಹರು ಓಲೇಕಾರ ಮಾತನಾಡಿ, ಕಳೆದ ವರ್ಷ ನೆರೆಯಿಂದ ಮನೆ ಕಳೆದುಕೊಂಡವರಿಗೆ, ಬೆಳೆ ಹಾನಿ ಪರಿಹಾರದಲ್ಲಿ ಲೋಪವಾಗಿರುವುದು ಸತ್ಯ. ಆದರೆ, ಈ ಸಲ ಆ ರೀತಿ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಅದಕ್ಕಾಗಿ ಸಮಿತಿ ರಚಿಸಲಾಗಿದ್ದು, ಪಾರದರ್ಶಕ ರೀತಿಯಲ್ಲಿ ಸಮೀಕ್ಷೆ ನಡೆಸಿ ನೇರವಾಗಿ ಫಲಾನುಭವಿಗಳಿಗೆ ಪರಿಹಾರ ಹಣ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಅರುಣಕುಮಾರ ಪೂಜಾರ, ವಿರುಪಾಕ್ಷಪ್ಪ ಬಳ್ಳಾರಿ ಇದ್ದರು.

ಮುಂಗಾರು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನಿದೆ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಕಳಪೆ ಬೀಜ, ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ ಮಾಡಿದ್ದು, ಗೊತ್ತಾದರೆ ಪರವಾನಗಿ ರದ್ದು ಮಾಡುವುದಾಗಿ ಕೃಷಿ ಸಚಿವರು ಎಚ್ಚರಿಕೆ ನೀಡಿದ್ದಾರೆ. ರೈತರು ಕೂಡ ಎಚ್ಚರಿಕೆ ವಹಿಸಬೇಕು. –ಶಿವರಾಮ ಹೆಬ್ಟಾರ, ಜಿಲ್ಲಾ ಉಸ್ತುವಾರಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next