Advertisement

ಬೆಳೆ ಸಮೀಕ್ಷೆ ಮಾಹಿತಿ ನೀಡಲು ಸೂಚನೆ

11:50 AM Oct 14, 2017 | |

ನೆಲಮಂಗಲ: ಬೆಳೆ ಸಮೀಕ್ಷೆ ಮಾಹಿತಿ, ಕೃಷಿಕರ ಹೊಲಗಳಲ್ಲಿ ಬೆಳೆಯಲಾಗಿರುವ ಬೆಳೆ ಕುರಿತಾಗಿ ನಿಖರ ಮಾಹಿತಿ ಸಂಗ್ರಹಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಬೇಕು ಎಂದು ಕಂದಾಯ ಇಲಾಖೆ ಸಿಬ್ಬಂದಿಗಳಿಗೆ ತಹಶೀಲ್ದಾರ್‌ ಎನ್‌.ರಮೇಶ್‌ ಸೂಚಿಸಿದರು. ತಾಲೂಕು ಕಚೇರಿ ಸಭಾಂಗಣದಲ್ಲಿ ಬೆಳೆ ಸಮೀಕ್ಷೆ ಅಂಗವಾಗಿ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕಂದಾಯ ಇಲಾಖೆ ಮತ್ತಿತರ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

30 ದಿನಗಳೊಳಗಾಗಿ ಮಾಹಿತಿ: ಒಂದು ತಿಂಗಳ ಬಳಿಕ ರೈತರಿಗೆ ತಮ್ಮ ಹೊಲಗಳ ಮಾಹಿತಿ ಅಂತರ್ಜಾಲದ ಮೂಲಕ ಲಭ್ಯವಾಗಲಿದೆ. ಇದರಿಂದ ಬರ ಗಾಲ ಎದುರಾದ ವೇಳೆ ರೈತರಿಗೆ ಸೂಕ್ತರೀತಿ ಪರಿಹಾರ ನೀಡಲು ಸರ್ಕಾರಕ್ಕೆ ಉಪಯೋಗವಾಗಲಿದೆ. ತಾಲೂಕಿನಾದ್ಯಂತ 63 ಮಂದಿ ನೌಕರರನ್ನು 3 ತಂಡಗಳು ಗ್ರಾಮಗಳಿಗೆ ಭೇಟಿನೀಡಿ ಪ್ರತಿಯೊಂದು ಗ್ರಾಮದಲ್ಲಿ ಬೆಳೆಯುವಂತಹ ಬೆಳೆ ಮತ್ತು ಕೃಷಿಭೂಮಿ ಮಾಹಿತಿ ಪಡೆಯಲು ಮೊಬೈಲ್‌ಗ‌ಳ ಮೂಲಕವೇ ಮಾಹಿತಿ ಸಂಗ್ರಹಿಸಲು ನೂತನವಾದ ಆ್ಯಪ್‌ಗ್ಳನ್ನು ಸರ್ಕಾರದಿಂದಲೇ ಸಿದ್ಧಪಡಿಸಲಾಗಿದ್ದು, 30 ದಿನಗಳೊಳಗಾಗಿ ಇಲಾಖೆ ಅಧಿಕಾರಿಗಳೇ ರೈತರ ಜಮೀನಿಗೆ ಖುದ್ದಾಗಿ ಭೇಟಿ ನೀಡಿ ಸೂಕ್ತ ಮಾಹಿತಿ ಸಂಗ್ರಹಿಸಲಿದ್ದಾರೆ. ಬೆಳೆ ಸಮೀಕ್ಷೆ ಮನಸ್ಸಿಗೆ ಬಂದಂತೆ ವರದಿ ನೀಡಬಾರದು ಎಂದು ಎಚ್ಚರಿಸಿದರು.

ಸಾವಧಾನದಿಂದ ಉತ್ತರ ನೀಡಿ: ರೈತರು ತಮ್ಮ ಮೊಬೈಲ್‌ ಸಂಖ್ಯೆ ಮತ್ತು ಒಪ್ಪಿಗೆ ಪತ್ರ ನೀಡುವ ಮೂಲಕ ಸಮೀಕ್ಷಕರಿಗೆ ಸಹಕರಿಸ ಬೇಕು. ಕೃಷಿಕರು ಗೊಂದಲ ಕ್ಕೊಳಗಾಗದೇ ತಮ್ಮ ಹೊಲಗಳಲ್ಲಿ ಬೆಳೆಯು ವಂತಹ ಬೆಳೆಗಳ ಮಾಹಿತಿ ನೀಡಬೇಕು. ಸಮೀಕ್ಷಕರು ಬಂದವೇಳೆ ಕೇಳುವ ಪ್ರಶ್ನೆಗಳಿಗೆ ಸಾವಧಾನ ದಿಂದ ಉತ್ತರ ನೀಡಬೇಕು. ಅವಶ್ಯವಿದ್ದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹೊರತುಪಡಿಸಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸಲಾಗುತ್ತದೆ. ಇದು ರಾಜ್ಯಾದ್ಯಂತ ಏಕಕಾಲಕ್ಕೆ ನಡೆಸಲಾಗುತ್ತಿರುವುದು ಅನುಕೂಲಕರ
ವಾಗಿದೆ. ತಾಲೂಕಿನ ಕಂದಾಯ ಇಲಾಖೆ ವತಿಯಿಂದ ಬೆಳೆ ಸಮೀಕ್ಷೆ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಭೆ: ತಾಲೂಕು ಕಚೇರಿ ಸಭಾಂಗಣದಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತಗಟ್ಟೆಗಳ ಮರುವಿಂಗಡಣೆ ಕುರಿತಾಗಿ
ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ಸಭೆ ಆಯೋಜಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ 1200 ಮತಗಳಿಗೂ ಹೆಚ್ಚಾಗಿರುವ ಮತಗಟ್ಟೆಗಳು ಹಾಗೂ ಪಟ್ಟಣ ಮತ್ತು ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ 1400ಕ್ಕೂ ಹೆಚ್ಚು ಮತಗಳಿರುವ ಮತಗಟ್ಟೆಗಳ ಮರುವಿಂಗಡಣೆ ಮಾಡಲಾಗುತ್ತಿದ್ದು, ಕ್ಷೇತ್ರ ವ್ಯಾಪ್ತಿಯಲ್ಲಿ ರುವ 243 ಮತಗಟ್ಟೆಗಳ ಪೈಕಿ ಸುಮಾರು 21 ಮತಗಟ್ಟೆಗಳು
ಮರುವಿಂಗಡಣೆಯಾಗಲಿವೆ. ಈ ಕುರಿತಾಗಿ ಅ.16ರಂದು ಸಂಜೆ 4ಗಂಟೆಗೆ ತಾಲೂಕು ಕಚೇರಿ ಸಭಾಂಗಣದಲ್ಲಿ ಸಭೆ
ಆಯೋಜಿಸಲಾಗಿದೆ, ಸಭೆಯಲ್ಲಿ ಮತಗಟ್ಟೆ ಅಧಿಕಾರಿಗಳು, ಗ್ರಾಮಲೆಕ್ಕಾಧಿಕಾರಿಗಳು, ರಾಜಸ್ವನಿರೀಕ್ಷಕರುಗಳು ಭಾಗವಹಿಸಲಿದ್ದು ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಆಸಕ್ತ ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರೇಡ್‌2 ತಹಶೀಲ್ದಾರ್‌ ರಮೇಶ್‌, ಲೆಕ್ಕಪರಿಶೋಧಕ ಕ್ರಷ್ಣಪ್ಪ, ಉಪತಹಶೀಲ್ದಾರ್‌ ರಾಜೇಂದ್ರ, ಶಿರಸ್ತೇದಾರ್‌ ಕೆಂಪೇಗೌಡ, ರಾಜಸ್ವನಿರೀಕ್ಷಕ ಹರೀಶ್‌, ಅಶ್ವತ್ಥ್, ಕುಮಾರಸ್ವಾಮಿ ಸೇರಿದಂತೆ ತಾಲೂಕಿನ ಗ್ರಾಮಲೆಕ್ಕಾಧಿಕಾರಿಗಳು ಸೇರಿದಂತೆ ತಾಲೂಕು ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next