Advertisement

ಮಳೆ-ನೆರೆಯಿಂದ ಹಾನಿಗೊಳಗಾದ ಮನೆಗಳ ಸ್ಥಿತಿಗತಿ ಪರಿಶೀಲನೆಗೆ ಸೂಚನೆ

01:21 PM Aug 18, 2019 | Suhan S |

ಗದಗ: ಜಿಲ್ಲೆಯಲ್ಲಿ ನೆರೆಯಿಂದ ಹಾನಿಗೊಳಗಾದ ಮನೆಗಳ ಸ್ಥಿತಿಗತಿ ಪರಿಶೀಲನೆ ಮಾಡಿ ಶೀಘ್ರವೇ ಪರಿಹಾರ ದೊರಕುವಂತೆ ಕ್ರಮ ಜರುಗಿಸಬೇಕು ಎಂದು ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ವಿ. ಮಂಜುಳಾ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಮಲಪ್ರಭಾ ಹಾಗೂ ತುಂಗಭದ್ರಾ ನದಿ ಪ್ರವಾಹಕ್ಕೆ ತುತ್ತಾದ ಪ್ರವಾಹಪೀಡಿತ ಗ್ರಾಮಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರವಾಹದಿಂದಾಗಿ ತೊಂದರೆಗೊಳಗಾದ ನೆರೆ ಸಂತ್ರಸ್ತರ ಕುಟುಂಬಗಳಿಗೆ ವಸತಿ, ಮೂಲ ಸೌಕರ್ಯಗಳನ್ನು ಒದಗಿಸಲು ಸಕಲ ಕ್ರಮ ಕೈಗೊಳ್ಳಬೇಕು. ನೆರೆಯಿಂದ ಉಂಟಾಗಿರುವ ಹಾನಿ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸಬೇಕಾಗಿದ್ದು, ಜಿಲ್ಲೆಯಲ್ಲಿ ನೆರೆಯಿಂದಾದ ಹಾನಿ ಕುರಿತು ತ್ವರಿತವಾಗಿ ವರದಿ ತಯಾರಿಸಬೇಕು. ತಾವು ತಯಾರಿಸುವ ವರದಿಯಲ್ಲಿ ಹಳೆಯ ಕಾಮಗಾರಿಗಳನ್ನು ಅತಿವೃಷ್ಟಿಯ ಕಾಮಗಾರಿಗಳಿಗೆ ಸೇರಿಸದೇ ಸ್ಥಳ ಪರಿಶೀಲನೆ ಮಾಡಿ ವಸ್ತುಸ್ಥಿತಿ ಹಾಗೂ ನಿಖರವಾದ ವರದಿ ಸಲ್ಲಿಸುವಂತೆ ಅವರು ಸೂಚನೆ ನೀಡಿದರು.

ವಿದ್ಯುತ್‌, ರಸ್ತೆ, ಸೇತುವೆ, ಕಟ್ಟಡ, ಕುಡಿಯುವ ನೀರು, ಕೆರೆ ಇತರ ಮೂಲ ಸೌಕರ್ಯಗಳ ಹಾನಿ ಕುರಿತಂತೆ ವರದಿ ತಯಾರಿಸುವಾಗ ತಾತ್ಕಾಲಿಕ ಹಾಗೂ ಕಾಯಂ ದುರಸ್ತಿ ಎಂದು ಪರಿಗಣಿಸಬೇಕು. ಎನ್‌.ಡಿ.ಆರ್‌.ಎಫ್‌. ಮಾರ್ಗಸೂಚಿಯಂತೆ ಪರಿಹಾರ ಪಡೆಯಬೇಕಾದ ವಿವರವನ್ನು ಪ್ರತ್ಯೇಕವಾಗಿ ತಯಾರಿಸಿ ಸಲ್ಲಿಸಲು ಸಂಬಂಧಿಸಿದ ಇಂಜಿನಿಯರ್‌ಗಳಿಗೆ ಸೂಚಿಸಿದ ಅವರು, ನೆರೆಯಿಂದಾಗಿ ಹಾನಿಗೊಳಗಾದ ಮನೆಗಳ ಸರ್ವೇ ಕಾರ್ಯವನ್ನು ಕಂದಾಯ ಇಲಾಖೆ, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳ ತಂಡ ರಚಿಸಿ ಜಂಟಿ ಸಮೀಕ್ಷೆ ನಡೆಸುವಂತೆ ಸಲಹೆ ನೀಡಿದರು.

ನೆರೆಯಿಂದಾಗಿ ಹಾನಿಗೊಳಗಾದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಕುರಿತು ನಿಖರ ಮಾಹಿತಿ ಒದಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಅವರು, ನೆರೆಯಿಂದಾಗಿ ಹಾನಿಗೊಳಗಾದ ಬೆಳೆ, ರಸ್ತೆ, ಸೇತುವೆ ಇವುಗಳ ವರದಿಗಳನ್ನು ತಯಾರಿಸಲು ತಂಡಗಳನ್ನು ರಚಿಸಿ ನಿಖರವಾದ ವರದಿಯನ್ನು ಆದಷ್ಟು ಶೀಘ್ರವೇ ಸಲ್ಲಿಸುವಂತೆ ನಿರ್ದೇಶಿಸಿದರು.

Advertisement

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಗದಗ ಜಿಲ್ಲೆಯ ನರಗುಂದ, ರೋಣ ತಾಲೂಕುಗಳಿಗೆ ಮಲಪ್ರಭಾ ಮತ್ತು ಬೆಣ್ಣಿಹಳ್ಳಗಳ ಪ್ರವಾಹದಿಂದಾಗಿ ಹಾಗೂ ತುಂಗಭದ್ರಾ, ವರದಾ ನೆರೆಯಿಂದಾಗಿ ಶಿರಹಟ್ಟಿ ಹಾಗೂ ಮುಂಡರಗಿ ಗ್ರಾಮದ ಜನರು ಸಂಕಷ್ಟದಲ್ಲಿದ್ದಾರೆ. ಜಿಲ್ಲೆಯ ಒಟ್ಟು 40 ಗ್ರಾಮಗಳ ಪ್ರವಾಹ ಪೀಡಿತವಾಗಿದ್ದು, 44 ಪರಿಹಾರ ಕೇಂದ್ರಗಳನ್ನು ತೆರೆದು 13200 ಕುಟುಂಬಗಳ 48,282 ಜನರಿಗೆ ಆಶ್ರಯ ಒದಗಿಸಿ ಊಟ, ವಸತಿ, ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆಯನ್ನು ಮಾಡಲಾಗಿದೆ. ನೆರೆ ಸಂತ್ರಸ್ತರಿಗೆ ಅಗತ್ಯ ಸೂರು ಕಲ್ಪಿಸಲು ಇತರ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿ.ಪಂ. ಸಿಇಒ ಮಂಜುನಾಥ ಚವ್ಹಾಣ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಪಿ.ಎಸ್‌.ಮಂಜುನಾಥ, ಜಿ.ಪಂ. ಉಪ ಕಾರ್ಯದರ್ಶಿ ಪ್ರಾಣೇಶರಾವ್‌, ಜಿಲ್ಲಾ ನಗರಾಭಿವೃದ್ಧಿಕೋಶ ಯೋಜನಾ ನಿರ್ದೇಶಕ ರುದ್ರೇಶ ಸೇರಿದಂತೆ ತಹಶೀಲ್ದಾರರು, ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿಗಳು, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿದ್ದರು.

•ಜಿಲ್ಲೆಯ ಒಟ್ಟು 40 ಗ್ರಾಮ ಪ್ರವಾಹ ಪೀಡಿತ

•44 ಪರಿಹಾರ ಕೇಂದ್ರ ತೆರೆದು 13200 ಕುಟುಂಬಗಳ 48,282 ಜನರಿಗೆ ಆಶ್ರಯ

•ಊಟ, ವಸತಿ, ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ

• ಜಂಟಿ ಸಮೀಕ್ಷೆ ನಡೆಸುವಂತೆ ಸಲಹೆ

Advertisement

Udayavani is now on Telegram. Click here to join our channel and stay updated with the latest news.

Next