Advertisement

ಕೆರೆ ಭರ್ತಿ ಮಾಡಿಕೊಳ್ಳಲು ಸೂಚನೆ

10:00 AM Jan 11, 2019 | Team Udayavani |

ಮಸ್ಕಿ: ತುಂಗಭದ್ರಾ ಜಲಾಶಯದಿಂದ ನಾಲೆಗೆ ಇನ್ನೂ ನಾಲ್ಕೈದು ದಿನ ಮಾತ್ರ ನೀರು ಹರಿಸಲಾಗುತ್ತಿದೆ. ಆದ್ದರಿಂದ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗುವುದನ್ನು ತಡೆಯಲು ಮಸ್ಕಿ ತಾಲೂಕಿನ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಕೆರೆಗಳನ್ನು ಭರ್ತಿ ಮಾಡಿಕೊಳ್ಳಬೇಕು ಎಂದು ಶಾಸಕ ಪ್ರತಾಪಗೌಡ ಪಾಟೀಲ ಸೂಚಿಸಿದರು.

Advertisement

ಪಟ್ಟಣದ ವಾಲ್ಮೀಕಿ ಭವನದಲ್ಲಿನ ತಾಲೂಕು ಪಂಚಾಯತಿ ಕಚೇರಿಯಲ್ಲಿ ಗುರುವಾರ ನಡೆದ ಮಸ್ಕಿ ವಿಧಾನಸಭಾ ಕ್ಷೇತ್ರದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ನಾಲ್ಕೈದು ದಿನಗಳಲ್ಲಿ ಕೆರೆಗಳನ್ನು ಭರ್ತಿ ಮಾಡಿಕೊಳ್ಳದಿದ್ದರೆ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗಲಿದೆ. ಅಧಿಕಾರಿಗಳು ಮುಂಜಾಗ್ರತೆ ವಹಿಸಿ ಕೆರೆ ತುಂಬಿಸಿಕೊಳ್ಳುವ ಮೂಲಕ ಗ್ರಾಮೀಣ ಜನತೆಗೆ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈಗಾಗಲೇ ಮಸ್ಕಿ, ರಂಗಾಪುರು, ಬುದ್ದಿನ್ನಿ ಸೇರಿದಂತೆ ಕ್ಷೇತ್ರ ವ್ಯಾಪ್ತಿಯ ಎಲ್ಲ ಕೆರೆಗಳು ಭರ್ತಿಯಾಗಿವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಕನ್ನಾಳ, ಗುಂಡಾ ಸೇರಿ ಕೆಲ ಗ್ರಾಮಗಳಲ್ಲಿ ಕೊಳವೆಬಾವಿಗಳನ್ನು ಕೊರೆಸಿದರೆ ಬೇಸಿಗೆಯಲ್ಲಿ ಎದುರಾಗುವ ನೀರನ ಸಮಸ್ಯೆ ನಿವಾರಿಸಬಹುದು ಎಂದು ಅಧಿಕಾರಿಗಳು ಸಭೆ ಗಮನಕ್ಕೆ ತಂದರು.

ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ, ಯಾವ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಆಗುವುದೋ ಅಂಥಲ್ಲಿ ಕೊಳವೆಬಾವಿ ಕೊರೆಸಲಾಗುವುದು ಎಂದರು. ನರೇಗಾ ಹಾಗೂ 14ನೇ ಹಣಕಾಸು ಯೋಜನೆಯಲ್ಲಿ ಕೆರೆ ಹಾಗೂ ಕುಡಿಯುವ ನೀರಿನ ಕಾಮಗಾರಿಗಳು ಎಲ್ಲಿಗೆ ಬಂದಿವೆ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.

ಅಂಗನವಾಡಿ ಕಟ್ಟಡ: ಕ್ಷೇತ್ರದಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಟ್ಟಡಗಳ ಮಾಹಿತಿ ನೀಡಬೇಕು ಮತ್ತು ಸ್ವಂತ ಕಟ್ಟಡಕ್ಕೆ ಬೇಕಾಗುವ ಸ್ಥಳಕ್ಕಾಗಿ ಆಯಾ ಗ್ರಾಪಂ ಅಧಿಕಾರಿಗಳು ಜಾಗದ ಲಭ್ಯತೆ ಕುರಿತು ನೀಡಿದ ಮಾಹಿತಿ ಒದಗಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಸೂಚಿಸಿದರು.

Advertisement

ಶಾಲಾ ಜಾಗದ ಮಾಹಿತಿ ಕೊಡಿ: ಮಸ್ಕಿ ತಾಲೂಕಿನಲ್ಲಿರುವ ಸರ್ಕಾರಿ ಶಾಲೆಗಳ ಜಾಗದ ಮಾಹಿತಿ ಕ್ರೂಢೀಕರಿಸಬೇಕು. ಮುಂದಿನ ದಿನಗಳಲ್ಲಿ ಸರ್ಕಾರಿ ಜಾಗಕ್ಕೆ ಯಾರದೇ ತಕರಾರು ಬರದ ಹಾಗೆ ಜಾಗದ ಕಾಗದ ಪತ್ರಗಳನ್ನು ಸಿದ್ದಪಡಿಕೊಳ್ಳಬೇಕು. ಇಲ್ಲದಿದ್ದರೆ ಸಮಸ್ಯೆಗಳು ಎದುರಾಗುತ್ತವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಅಡವಿಬಾವಿ ಮಸ್ಕಿ ಗ್ರಾಪಂ ವ್ಯಾಪ್ತಿಯಲ್ಲಿನ ಬುದ್ದಿನ್ನಿ ಹಾಗೂ ಸಾನಾಬಾಳ ಗ್ರಾಮಗಳಿಗೆ ನೀರು ಪೂರೈಕೆಗೆ ನಿರಂತರ ಜ್ಯೋತಿ ವಿದ್ಯುತ್‌ ಬೇಕು ಎಂದು ಪಿಡಿಒ ಸುರೇಶ ಸಭೆಗೆ ಮಾಹಿತಿ ನೀಡಿದರು. ಕುಡಿಯುವ ನೀರು ಸರಬರಾಜು ಮಾಡಲು ತೊಂದರೆಯಾಗದಂತೆ ಕೂಡಲೇ ವಿದ್ಯುತ್‌ ಸಂಪರ್ಕ ಒದಗಿಸುವಂತೆ ಶಾಸಕ ಪ್ರತಾಪಗೌಡ ಪಾಟೀಲ ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಕೆಲ ಗ್ರಾಪಂ ವ್ಯಾಪ್ತಿಯಲ್ಲಿ ಸಿಸಿ ರಸ್ತೆಗಳನ್ನು ಮಾಡಲು ಈ ಹಿಂದೆ ಹಾಕಿರುವ ನೀರಿನ ಪೈಪ್‌ಲೈನ್‌ಗಳನ್ನು ಕಿತ್ತಿದ್ದಾರೆ. ಇದರಿಂದ ಮತ್ತೆ ನೀರು ಸರಬರಾಜು ಸಮಸ್ಯೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ನಿರ್ವಹಣೆ ಕೊರತೆ: ಗ್ರಾಪಂ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವ ಶುದ್ಧ ನೀರು ಘಟಕಗಳ ನಿರ್ವಹಣೆ ಗುತ್ತಿಗೆ ಪಡೆದ ಏಜೆನ್ಸಿಯವರು ಸರಿಯಾಗಿ ನಿರ್ವಹಣೆ ಮಾಡದ್ದರಿಂಧ ಘಟಕಗಳು ಬಂದ್‌ ಆಗಿವೆ ಎಂದು ಗ್ರಾಪಂ ಅಧಿಕಾರಿಗಳು ಸಭೆ ಗಮನಕ್ಕೆ ತಂದರು. ಮಸ್ಕಿ ತಹಶೀಲ್ದಾರ್‌ ಬಲರಾಮ ಕಟ್ಟಿಮನಿ, ಸಿಂದನೂರು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಬಾಬು ರಾಠೊಡ, ಲಿಂಗಸುಗೂರು ತಾಪಂ ಕಾ.ನಿ. ಅಧಿಕಾರಿ ಪ್ರಕಾಶ ಒಡ್ಡರ್‌ ಸೇರಿದಂತೆ ಮೂರು ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next