Advertisement

ಮಳೆ-ಜಲಾಶಯ ಮಾಹಿತಿ ವಿನಿಮಯಕ್ಕೆ ಸೂಚನೆ

04:41 PM May 22, 2022 | Team Udayavani |

ಬೆಳಗಾವಿ: ಮಳೆ ಹೆಚ್ಚು ಆಗುತ್ತಿರುವುದರಿಂದ ನೆರೆಯ ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಡುಗಡೆ ಸಾಧ್ಯತೆ ಇರುತ್ತದೆ. ಹೀಗಾಗಿ ಆ ರಾಜ್ಯದ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜತೆ ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು. ಅಲ್ಲಿನ ಮಳೆಯ ಪ್ರಮಾಣ, ಜಲಾಶಯಗಳ ಸಂಗ್ರಹ ಕುರಿತು ನಿರಂತರವಾಗಿ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಸಂಭವನೀಯ ಪ್ರವಾಹ ನಿರ್ವಹಣೆಯ ಸಿದ್ಧತೆಗೆ ಸಂಬಂಧಿಸಿದಂತೆ ಶನಿವಾರ ಮುಖ್ಯಮಂತ್ರಿಗಳು ನಡೆಸಿದ ವಿಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಅವರು ಮಾತನಾಡಿದರು. ಈ ಬಾರಿ ಒಂದು ವಾರ ಮುಂಚೆಯೇ ಮಳೆಯಾಗುತ್ತಿರುವುದರಿಂದ ನೆರೆಯ ರಾಜ್ಯದ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿರಬೇಕು. ಪ್ರತಿದಿನ ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ, ಜಲಾಶಯಮಟ್ಟ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಬೆಳಗಾವಿ ಜಿಲ್ಲಾಡಳಿತಕ್ಕೆ ಮುಂಚಿತವಾಗಿ ಮಾಹಿತಿ ನೀಡದೇ ನೀರು ಬಿಡುಗಡೆ ಮಾಡದಂತೆ ನೆರೆಯ ರಾಜ್ಯದ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು.

ನೆರೆಯ ಮಹಾರಾಷ್ಟ್ರದ ನೀರಾವರಿ ಇಲಾಖೆಯ ಜತೆ ಸಮನ್ವಯ ಸಾಧಿಸಿ ನಿರಂತರವಾಗಿ ನಿಗಾ ವಹಿಸಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು. ಮಳೆಯ ಪ್ರಮಾಣ ಜಾಸ್ತಿಯಾದಾಗ ರಸ್ತೆ ಸಂಪರ್ಕಕ್ಕೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು. ಮಳೆಗಾಲ ಆರಂಭದಲ್ಲಿಯೇ ನದಿತೀರದ ಗ್ರಾಮಗಳು ಹಾಗೂ ಪ್ರವಾಹದಿಂದ ಪೀಡಿತ ಗೊಳ್ಳಬಹುದಾದ ಗ್ರಾಮಗಳಿಗೆ ಅಧಿಕಾರಿಗಳು ಕಡ್ಡಾಯವಾಗಿ ಭೇಟಿ ನೀಡಿ ಮನೆಗಳ ಸ್ಥಿತಿಗತಿ ಬಗ್ಗೆ ಸೂಕ್ತ ಸಮೀಕ್ಷೆ ನಡೆಸಿ ಸಮಗ್ರ ವರದಿ ಸಿದ್ಧಪಡಿಸಬೇಕು ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.

ಅತಿವೃಷ್ಟಿ, ಸಿಡಿಲು ಮತ್ತಿತರ ಕಾರಣಗಳಿಂದ ಜನರ ಪ್ರಾಣಹಾನಿ ಹಾಗೂ ಜಾನುವಾರು ಜೀವಹಾನಿಯಾದಾಗ 24 ಗಂಟೆಗಳಲ್ಲಿ ನಿಯಮಾವಳಿ ಪ್ರಕಾರ ಪರಿಹಾರ ಒದಗಿಸಬೇಕು. ಬೆಳೆಹಾನಿ ಕುರಿತು ಕೃಷಿ, ತೋಟಗಾರಿಕೆ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಿ ನಿಖರ ವರದಿ ನೀಡಬೇಕು ಎಂದು ತಿಳಿಸಿದರು.

ಮಳೆಯ ಮುನ್ಸೂಚನೆ ಆಧರಿಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಮುಳುಗಡೆ, ಭೂಕುಸಿತ ಸೇರಿದಂತೆ ಆಯಾ ಜಿಲ್ಲೆಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಬೇಕು. ಬೆಳೆಹಾನಿ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ನಿಖರವಾಗಿ ಸಮೀಕ್ಷೆ ನಡೆಸಿ ವಾಸ್ತವ ವರದಿ ನೀಡಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಜಿಲ್ಲೆಯಲ್ಲಿ ನಿಗದಿಗಿಂತ ಮಳೆಯ ಪ್ರಮಾಣ ಜಾಸ್ತಿಯಾಗಿದೆ. ಬೆಳೆಹಾನಿಯ ಕುರಿತು ನಿಖರ ವರದಿ ನೀಡುವಂತೆ ಅಧಕಾರಿಗಳಿಗೆ ಸೂಚನೆ ನೀಡಲಾಗಿದೆ. ವಿಜಯಪುರ ಜಿಲ್ಲೆಯ ಕುರಿತು ಮಾಹಿತಿ ನೀಡಿದ ಆಹಾರ ಸಚಿವ ಉಮೇಶ ಕತ್ತಿ, ವಿಜಯಪುರದಲ್ಲಿ ಮಳೆ ಜಾಸ್ತಿಯಾಗಿದ್ದು, ಯಾವುದೇ ಹಾನಿಯಾಗಿಲ್ಲ ಎಂದು ತಿಳಿಸಿದರು.

ಮಾನವ ಜೀವಹಾನಿ ಆಗಿಲ್ಲ: ಒಂದು ವಾರದಿಂದ ಜಿಲ್ಲೆಯಲ್ಲಿ ವಾಡಿಕೆಗಿಂತ ಅ ಧಿಕ ಮಳೆಯಾಗಿದೆ. ಮೇ 15ರಿಂದ 21ರ ವರೆಗೆ 14 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ 114 ಮಿ.ಮೀ ಮಳೆಯಾಗಿದ್ದು, ಯಾವುದೇ ಮಾನವ ಜೀವಹಾನಿಯಾಗಿಲ್ಲ. ಎರಡು ಜಾನುವಾರ ಮೃತಪಟ್ಟಿವೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾಹಿತಿ ನೀಡಿದರು.

ಮೇ 15ರಿಂದ 21ರ ಅವಧಿಯಲ್ಲಿ 1 ಮನೆ ಪೂರ್ಣವಾಗಿ ಕುಸಿದಿದ್ದು, 193 ಮನೆಗಳು ಭಾಗಶಃ ಕುಸಿದಿವೆ. 30 ಹೆಕ್ಟೇರ್‌ ಕೃಷಿ ಬೆಳೆ ಮತ್ತು 15.3 ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಹಾನಿಯಾಗಿದೆ. ಪ್ರವಾಹ ಪೀಡಿತಗೊಳ್ಳಬಹುದಾದ ತಾಲೂಕು, ಹೋಬಳಿ, ಗ್ರಾಮವಾರು ಮಾಹಿತಿ ಸಿದ್ಧಪಡಿಸಿ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ತಿಳಿಸಿ ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಕಳಿಸಲಾಗಿದೆ ಎಂದು ತಿಳಿಸಿದರು.

ನಗರ ಪೊಲೀಸ್‌ ಆಯುಕ್ತ ಡಾ| ಎಂ.ಬಿ. ಬೋರಲಿಂಗಯ್ಯ, ಜಿಪಂ ಸಿಇಒ ದರ್ಶನ್‌ ಎಚ್‌.ವಿ., ಎಸ್‌ಪಿ ಲಕ್ಷ್ಮಣ ನಿಂಬರಗಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next