Advertisement

ವಾಹನ, ಆಸ್ತಿ ನೋಂದಣಿ ಸಿದ್ಧತೆಗೆ ಸೂಚನೆ

03:43 PM Apr 15, 2020 | Suhan S |

ಹಾಸನ: ಜಿಲ್ಲೆಯಲ್ಲಿ ವಾಹನಗಳ ನೋಂದಣಿ ಹಾಗೂ ಆಸ್ತಿ ನೋಂದಣಿ ಪ್ರಕ್ರಿಯೆಗೆ ಸಂಬಂಧಪಟ್ಟ ಇಲಾಖೆಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಮೈಸೂರು ಮಿನರಲ್ಸ್‌ ವ್ಯವಸ್ಥಾಪಕ ನಿರ್ದೇಶಕ ನವೀನ್‌ ರಾಜ್‌ಸಿಂಗ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್ 19 ನಿಯಂತ್ರಣ ಕ್ರಮಗಳ ಕುರಿತು ಮಂಗಳವಾರ ಪರಿಶೀಲನೆ ನಡೆಸಿದ ಅವರು, ಸಾರಿಗೆ ಇಲಾಖೆಯಲ್ಲಿ ಹೊಸ ವಾಹನಗಳ ನೋಂದಣಿ ಹಾಗೂ ಇತರ ತೆರಿಗೆ ವಸೂಲಿ ಮತ್ತು ನವೀಕರಣ ಪ್ರಕ್ರಿಯೆಗಳು ನಡೆಯಬೇಕು ಎಂದರು.

ಭೂ ದಾಖಲೆಗಳ ನೋಂದಣಿ: ಎಲ್ಲಾ ತಾಲೂಕುಗಳಲ್ಲಿ ಭೂದಾಖಲೆಗಳ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಬೇಕು. ಮೊದಲ ಹಂತದಲ್ಲಿ ದಿನಕ್ಕೆ 20-25 ದಾಖಲೆಗಳ ನೋಂದಣಿ ಗಣಕೀಕರಣಕ್ಕೆ ವ್ಯವಸ್ಥೆ ಮಾಡಿ ಮುಂಗಡ ಟೋಕನ್‌ ನೀಡಿ ಸಾಮಾಜಿಕ ಅಂತರ ಕಾಯ್ದುಕೊಂಡು ನಿಯಮನುಸಾರ ಪ್ರಕ್ರಿಯೆ ಪೂರ್ಣಗೊಳಿಸಿ ಎಂದು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಪ್ರಕ್ರಿಯೆಗಳನ್ನು ಇನ್ನಷ್ಟು ಕಠಿಣವಾಗಿ ಮುಂದುವರಿಸಿ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದವರ ಆರೋಗ್ಯದ ಮೇಲೆ ನಿಗಾವಹಿಸಬೇಕು ಎಂದು ಅವರು, ಸೋಂಕಿತರ ಪ್ರಾಥಮಿಕ ಹಾಗೂ ಎರಡನೇ ಹಂತದ ಸಂಪರ್ಕ ಹೊಂದಿರುವವರನ್ನು ಪರೀಕ್ಷೆಗೆ ಒಳಪಡಿಸಿದ್ದರೂ 28 ದಿನಗಳವರೆಗೂ ವಿಶೇಷ ನಿಗಾವಹಿಸಿ ಅಗತ್ಯದ್ದಲ್ಲಿ ಮತ್ತೂಮ್ಮೆ ಪರೀಕ್ಷೆ ಮಾಡಿಸಬೇಕು ಎಂದು ಸೂಚಿಸಿದರು.

ಹೊರಗಿನಿಂದ ಬಂದವರ ಬಗ್ಗೆ  ನಿಗಾ ವಹಿಸಿ: ಬೆಂಗಳೂರು, ಮಂಗಳೂರು ಹಾಗೂ ಮೈಸೂರಿಗೆ ತುರ್ತು ಚಿಕಿತ್ಸೆ ಅಥವಾ ಇನ್ನಾವುದಾದರೂ ಕಾರಣಗಳಿಂದ ತೆರಳಿ ವಾಪಸ್‌ ಬಂದವರನ್ನು ಸುರಕ್ಷತೆ ದೃಷ್ಟಿಯಿಂದ ಹೋಂ ಕ್ವಾರಂಟೈನ್‌ನಲ್ಲಿ ಇರಿಸುವುದು ಅಗತ್ಯ ಎಂದು ಹೇಳಿದರು.

Advertisement

ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಮಾತನಾಡಿ, ರಾಜ್ಯದೊಳಗಿದ್ದ ಕಾರ್ಮಿಕರು ತಮ್ಮ ಜಿಲ್ಲೆಗಳಿಗೆ ತೆರಳಲು ಬಯಸಿದರೆ ಸೂಕ್ತ ಆರೋಗ್ಯ ತಪಾಸಣೆ ನಡೆಸಿ ಕಳಿಸಬೇಕಾಗಬಹುದು. ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದರು.

ಜಿಲ್ಲೆಯಲ್ಲಿ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಧಾನಮಂತ್ರಿ ಆರೋಗ್ಯ ಸುರಕ್ಷಾ ಯೋಜನೆ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯಡಿ ನೊಂದಣಿ ಮಾಡಿಕೊಳ್ಳಲು ಸೂಚಿಸಲಾಗಿದ್ದು ಎಲ್ಲ ಅರ್ಹ ಬಡ ಜನರ ಆರೋಗ್ಯ ತಪಾಸಣೆಗೆ ಹಾಗೂ ಚಿಕಿತ್ಸೆಯನ್ನು ಒದಗಿಸಲು ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಜಿಪಂ ಸಿಇಒ ಬಿ.ಎ. ಪರಮೇಶ್‌ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ. ಉಪವಿಭಾಗಾಧಿಕಾರಿ ಡಾ.ನವೀನ್‌ಭಟ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್‌, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕೃಷ್ಣಮೂರ್ತಿ, ಹಿಮ್ಸ್‌ ನಿರ್ದೇಶಕ ಡಾ. ರವಿಕುಮಾರ್‌ ಸಭೆಯಲ್ಲಿ ಹಾಜರಿದ್ದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next