ರೋಣ: ಈಗಾಗಲೇ ನೆರೆಯಲ್ಲಿ ಬಿದ್ದ ಮನೆಗಳಿಗೆ ಹಣ ಬಿಡುಗಡೆಯಾಗಿದ್ದು, ಕೂಡಲೇ ಮನೆ ಕಟ್ಟಲು ಪ್ರಾರಂಭ ಮಾಡಿ. ವಿಳಂಬವಾದರೆ ಉಳಿದ ಹಣ ಸಂದಾಯವಿಲ್ಲ ಅಥವಾ ಮರುಪಾವತಿ ಮಾಡಬೇಕಾಗುತ್ತದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ನೆರೆ ಸಂತ್ರಸ್ತ ಫಲಾನುಭವಿಗಳಿಗೆ ಹೇಳಿದರು.
ತಾಲೂಕಿನ ಹೊಳೆಆಲೂರಿನ ಶಿವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ನೆರೆ ಸಂತ್ರಸ್ತ ಫಲಾನುಭವಿಗಳ ಸಭೆಯಲ್ಲಿ ಅವರು ಮಾತನಾಡಿದರು. ಸರ್ವೇ ಕಾರ್ಯದಲ್ಲಿ ಅಲ್ಪಸ್ವಲ್ಪ ದೋಷವಾಗಿ ಇನ್ನು ಹಲವಾರು ಬಿದ್ದ ಮನೆಗಳಿಗೆ ನ್ಯಾಯ ದೊರೆತಿಲ್ಲದಿರುವುದು ಗಮನಕ್ಕೆ ಬಂದಿದೆ. ಸರಕಾರದ ಪ್ರಧಾನ ಮಂತ್ರಿ ಆವಾಸ ಯೋಜನೆ, ಆಶ್ರಯ ಯೊಜನೆಗಳಲ್ಲಿ ಮನೆಗಳನ್ನು ಕಲ್ಪಿಸಿ ಕೊಡಲಾಗುತ್ತದೆ. ಯಾರೂ ಚಿಂತಿಸುವ ಅಗತ್ಯವಿಲ್ಲ ಎಂದರು.
ಇದಕ್ಕೂ ಮುನ್ನ ಫಲಾನುಭವಿಗಳಿಗೆ ಮಾತನಾಡಲು ಅವಕಾಶ ಕೊಟ್ಟಾಗ ಅನೇಕರು ಊರಿನಲ್ಲಿ ಸುಸಜ್ಜಿತ ಮನೆಗಳು ಏನೂ ಹಾನಿಯಾಗಿಲ್ಲದಿದ್ದರೂ ಅಂತವರ ಮನೆಗೆ ಎ ಗ್ರೇಡ್‌ನಲ್ಲಿ ನೀಡಲಾಗಿದೆ. ಇಂತಹ ತಪ್ಪು ಸಮೀಕ್ಷೆ ಮಾಡಿದ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಯಾಕೆ ಎಂದು ಡಿಸಿ ಅವರನ್ನು ಪ್ರಶ್ನಿಸಿದರು. ಇನ್ನೂ ಕೆಲವರು ನಮ್ಮ ಮನೆಗಳು ಸಂಪೂರ್ಣ ಬಿದ್ದಿದ್ದರೂ 10 ಬಾರಿ ಅರ್ಜಿ ಕೊಟ್ಟರೂ ಇಲ್ಲಿಯವರೆಗೂ ಜಿಪಿಎಸ್ ಮಾಡಿಲ್ಲ. ಮನೆಗೆ ಹತ್ತಿಕೊಂಡೇ ಇನ್ನೊಂದು ಮನೆ ಗೋಡೆಯಿದೆ. ಅವರದ್ದು ಸಿ ಗ್ರೇಡ್‌ನಲ್ಲಿ ಬಂದಿದ್ದು, ಈಗ ನಮ್ಮ ಮನೆ ಎ ಗ್ರೇಡ್‌ನಲ್ಲಿ ಬಂದಿದ್ದರೂ ಗೊಡೆ ಕೆಡವಿ ಕಟ್ಟಿಸಿಕೊಳ್ಳಲು ಅವರಿಂದ ತಕರಾರು ಬರುತ್ತಿದೆ. ಇದಕ್ಕೆ ಏನು ಮಾಡಬೇಕು ಎಂದು ಅನೇಕರು ಹೇಳಿದರು.
ತಹಶೀಲ್ದಾರ್ ಜಿ.ಬಿ. ಜಕ್ಕನಗೌಡ್ರ, ತಾ.ಪಂ ಇಒ ಸಂತೋಷ ಪಾಟೀಲ, ಪಿಡಿಒ ಮಂಜುನಾಥ ಗಣಿ, ಗ್ರಾಪಂ ಅಧ್ಯಕ್ಷೆ ಸುಮಂಗಲಾ ಕಾತರಕಿ, ಉಪಾಧ್ಯಕ್ಷೆ ಸರೋಜಾ ಗೌರಿಮಠ, ಕಂದಾಯ ನಿರೀಕ್ಷಕ ರವಿ ಬಾರಕೇರ, ಉಪತಹಶೀಲ್ದಾರ್ ಬಡಿಗೇರ, ತಾ.ಪಂ ಸದಸ್ಯ ಜಗದೀಶ ಬ್ಯಾಡಗಿ, ಗ್ರಾಪಂ ಸದಸ್ಯರಾದ ಸಂಗಪ್ಪ ದುಗಲದ, ಸಂತೋಷ ಹಾದಿಮನಿ ಸೇರಿದಂತೆ ಮತ್ತಿತರರು ಇದ್ದರು.