ಯಾದಗಿರಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಲಮೂಲಗಳ ಅಭಿವೃದ್ಧಿ ಹಾಗೂ ನಿರ್ವಹಣೆ ಮಾಡುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಸುತ್ತೋಲೆಯಂತೆ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಆಯ್ದುಕೊಂಡು ನಿರ್ವಹಿಸುತ್ತಿರುವ 15 ಅಮೃತ ಸರೋವರ ಕೆರೆಗಳ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಜಿಪಂ ಸಿಇಒ ಅಮರೇಶ ಆರ್. ನಾಯಕ ಪಿಡಿಒಗಳಿಗೆ ಸೂಚಿಸಿದರು.
ರಾಮಸಮುದ್ರ ಗ್ರಾಪಂ ವ್ಯಾಪ್ತಿಯಲ್ಲಿ ಮಿಷನ್ ಅಮೃತ ಸರೋವರದಡಿ ಆಯ್ಕೆಯಾದ ವರ್ಕನಳ್ಳಿಯ ಕುಂಬಾರ ಕೆರೆ, ರಾಮಸಮುದ್ರದ ಸರ್ವೇ ನಂಬರ್ 18ರಲ್ಲಿ ನಿರ್ಮಾಣ ಹಂತದಲ್ಲಿರುವ ಅಮೃತ ಸರೋವರ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು.
ಭವಿಷತ್ತಿನಲ್ಲಿ ಉದ್ಬವಿಸುವ ನೀರಿನ ಸಮಸ್ಯೆ ಪರಿಹರಿಸಲು, ಗ್ರಾಮೀಣ ಜಲ ಭದ್ರತೆಗೆ ಧಕ್ಕೆಯಾಗದಂತೆ ವಿಶೇಷವಾಗಿ ರೈತರು ಹಾಗೂ ಮಹಿಳೆಯರ ನೀರಿನ ಭವಣೆ ನಿಭಾಯಿಸಲು, ಅಂತರ್ಜಲ ಮೂಲ ಅಭಿವೃದ್ಧಿ ಪಡಿಸುವುದು, ಜಲ ಸಂಪತ್ತಿನ ರಕ್ಷಣೆ, ಕೃಷಿ ಚಟುವಟಿಕೆ, ತೋಟಗಾರಿಕೆ, ಅರಣ್ಯೀಕರಣ ಅಭಿವೃದ್ಧಿ ಪಡಿಸುವ ಜೊತೆ ಪರಿಸರ ಸಮತೋಲನ ರಕ್ಷಿಸಿ, ಗ್ರಾಮೀಣ ಭಾಗದ ಜನರ ಆರೋಗ್ಯ ಸುಧಾರಿಸುವುದು ಮಿಷನ್ ಅಮೃತ ಸರೋವರ ಯೋಜನೆ ಉದ್ದೇಶವಾಗಿದೆ ಎಂದು ಹೇಳಿದರು.
ಆಜಾದಿಕಾ ಅಮೃತ ಮಹೋತ್ಸವ ಅಂಗವಾಗಿ ಮಿಷನ್ ಅಮೃತ ಸರೋವರ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಯಾದಗಿರಿ 34, ಗುರುಮಠಕಲ್ 20, ವಡಗೇರಾ 5, ಶಹಾಪುರ 11, ಸುರಪುರ 22 ಹಾಗೂ ಹುಣಸಗಿ 15 ಸೇರಿ ಒಟ್ಟು 107 ಕೆರೆಗಳನ್ನು ಆಯ್ದುಕೊಂಡಿದ್ದು, ಮೊದಲ ಹಂತವಾಗಿ ಆ. 15ರೊಳಗೆ 15 ಜಲಮೂಲಗಳನ್ನು ಅಮೃತ ಸರೋವರಗಳಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.
Related Articles
ತಾಪಂ ಇಒ ಬಸವರಾಜ ಶರಬೈ, ನರೇಗಾ ಯೋಜನೆ ಸಹಾಯಕ ನಿರ್ದೇಶಕ ಚಂದ್ರಶೇಖರ ಪವಾರ, ಪಿಡಿಒ ಗಿರಿಮಲ್ಲಣ್ಣ, ಜಿಪಂ ಎಡಿಪಿಸಿ ಬನ್ನಪ್ಪ ಬೈಟಿಪುಲ್ಲಿ, ಎನ್‌ಆರ್ ಎಂ ಜಿಲ್ಲಾ ಸಂಯೋಜಕ ಪ್ರಶಾಂತ, ಎನ್‌ಆರ್‌ಎಂ ತಾಲೂಕು ಸಂಯೋಜಕರಾದ ಜಬ್ಬರ ಪಾಷಾ, ಪವನ ಕುಮಾರ, ಪ್ರಸನ್ನ, ಉಮೇಶ, ತಾಂತ್ರಿಕ ಸಹಾಯಕ ನಿಂಗಪ್ಪ, ಐಇಸಿ ಸಂಯೋಜಕ ಬಸಪ್ಪ, ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರು ಇದ್ದರು.