Advertisement

ಸಮರ್ಪಕ ತ್ಯಾಜ್ಯ ನಿರ್ವಹಣಾ ಕ್ರಮಕ್ಕೆ ಸೂಚನೆ

09:16 AM May 10, 2022 | Team Udayavani |

ಹುಬ್ಬಳ್ಳಿ: ಅವಳಿನಗರದಲ್ಲಿ ಉತ್ಪತ್ತಿಯಾಗುವ ಒಣ ಹಾಗೂ ಹಸಿ ಕಸವನ್ನು ಪ್ರಾಥಮಿಕ ಹಂತದಲ್ಲಿಯೇ ವಿಂಗಡಿಸಿ ಹಸಿ ಕಸವನ್ನು ಕಾಂಪೋಸ್ಟ್‌ ಮಾಡಬೇಕು. ಒಣ ಕಸವನ್ನು ಪುನರ್‌ ವಿಂಗಡಿಸಿ ಮರು ಬಳಕೆದಾರರಿಗೆ ನೀಡಬೇಕು. ಬೃಹತ್‌ ತ್ಯಾಜ್ಯ ಉತ್ಪಾದಿಸುವವರು ಸಮರ್ಪಕವಾಗಿ ವಿಲೇವಾರಿ ಮಾಡಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯಮಟ್ಟದ ಸಮಿತಿ ಅಧ್ಯಕ್ಷರಾದ ನಿವೃತ್ತ ಉಪಲೋಕಾಯುಕ್ತ ನ್ಯಾ| ಸುಭಾಷ ಅಡಿ ಹೇಳಿದರು.

Advertisement

ಪ್ರವಾಸಿ ಮಂದಿರದಲ್ಲಿ ಸೋಮವಾರ ಘನ ತ್ಯಾಜ್ಯ, ಕಟ್ಟಡ ತ್ಯಾಜ್ಯ ಮತ್ತು ಪ್ಲಾಸ್ಟಿಕ್‌ ತ್ಯಾಜ್ಯ ನಿಯಮಗಳು-2016ರ ಅನುಷ್ಠಾನ ಕುರಿತು ಕೈಗೊಂಡ ಕ್ರಮಗಳ ಕುರಿತು ಹು-ಧಾ ಮಹಾನಗರ ಪಾಲಿಕೆ ಹಾಗೂ ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳೊಂದಿಗೆ ಪ್ರತ್ಯೇಕ ಪರಿಶೀಲನಾ ಸಭೆಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅವಳಿನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳು ಮುಖ್ಯವಾಗಿ ಘನ ತ್ಯಾಜ್ಯ, ಜೀವ ವೈದ್ಯಕೀಯ ತ್ಯಾಜ್ಯ, ಇ-ತ್ಯಾಜ್ಯ, ಬ್ಯಾಟರಿ ತ್ಯಾಜ್ಯ, ಕಟ್ಟಡ ತ್ಯಾಜ್ಯ ಹಾಗೂ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ನಿಯಮಗಳ ಅನುಸಾರವಾಗಿ ಪ್ರಾಥಮಿಕ ಹಂತದಲ್ಲಿ ವಿಂಗಡಿಸಿ ವಿಲೇವಾರಿ ಮಾಡಬೇಕು. ಈಗಾಗಲೇ ರಾಜ್ಯ ಸರಕಾರವು ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ಗಳನ್ನು ನಿಷೇಧಿಸಿದೆ. ಆದೇಶದನುಸಾರ ಕ್ರಮ ಕೈಗೊಳ್ಳಬೇಕು. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಬೇಕು. ಪ್ಲಾಸ್ಟಿಕ್‌ ತ್ಯಾಜ್ಯ ಭೂಮಿಗೆ ಸೇರಬಾರದು. ಮಹಾನಗರ ಪಾಲಿಕೆ ಈ ಬಗ್ಗೆ ಕ್ರಮ ವಹಿಸಬೇಕು. ಹಳೆಯ ಕಟ್ಟಡ ತೆರವುಗೊಳಿಸಿದ ಸಂದರ್ಭದಲ್ಲಿ ಬರುವ ಕಟ್ಟಡ ತ್ಯಾಜ್ಯವನ್ನು ನಿಯಮಗಳನ್ವಯ ವಿಲೇವಾರಿ ಮಾಡಬೇಕು ಎಂದು ಪಾಲಿಕೆಗೆ ಸೂಚಿಸಿದರು.

ರೈಲ್ವೆ ವಲಯದ ಅಧಿಕಾರಿಗಳೊಂದಿಗೆ ಸಭೆ: ರೈಲು ನಿಲ್ದಾಣ, ರೈಲ್ವೆ ಸೇತುವೆಗಳು ಹಾಗೂ ರೈಲ್ವೆ ಹಳಿಗಳ ಬಳಿ ಸಾರ್ವಜನಿಕರು ತ್ಯಾಜ್ಯ ಸುರಿಯುತ್ತಾರೆ. ಸಾರ್ವಜನಿಕರು ಪ್ರಯಾಣದ ಅವಧಿಯಲ್ಲಿ ಪ್ಲಾಸ್ಟಿಕ್‌ ಬಳಸದಂತೆ ತಡೆಯಲು ಕೈಗೊಂಡಿರುವ ಕ್ರಮಗಳ ಕುರಿತು ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಅವರಿಂದ ಮಾಹಿತಿ ಪಡೆದರು.

ಹುಬ್ಬಳ್ಳಿ ರೈಲ್ವೆ ನಿಲ್ದಾಣ ಹಾಗೂ ಕಾಲೋನಿಗಳಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯವನ್ನು ಒಣ ಕಸ ಹಾಗೂ ಹಸಿ ಕಸವಾಗಿ ವಿಂಗಡಿಸಿ, ಹಸಿ ಕಸವನ್ನು ಕಾಂಪೋಸ್ಟ್‌ ಮಾಡುತ್ತಿರುವುದಾಗಿ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರು ತಿಳಿಸಿದರು.

Advertisement

ರೈಲುಗಳಲ್ಲಿ ನೀಡುವ ಆಹಾರದ ಪೊಟ್ಟಣಗಳಲ್ಲಿ ಯಾವುದೇ ಪ್ಲಾಸ್ಟಿಕ್‌ ಉಪಯೋಗಿಸುತ್ತಿಲ್ಲ. ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಎಸೆಯದಂತೆ ಸಾರ್ವಜನಿಕರಿಗೆ ಅರಿವು ನೀಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ವಿವರಿಸಿದರು.

ಹುಬ್ಬಳ್ಳಿ, ಧಾರವಾಡ ಹಾಗೂ ಇತರ ರೈಲ್ವೆ ನಿಲ್ದಾಣಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳು ಮುಖ್ಯವಾಗಿ ಘನ ತ್ಯಾಜ್ಯ, ಇ-ತ್ಯಾಜ್ಯ, ಬ್ಯಾಟರಿ ತ್ಯಾಜ್ಯ ಹಾಗೂ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ನಿಯಮಾನುಸಾರವಾಗಿ ಕಟ್ಟುನಿಟ್ಟಾಗಿ ವಿಲೇವಾರಿ ಮಾಡಬೇಕು. ಪ್ಲಾಸ್ಟಿಕ್‌ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಲು ಕ್ರಮಕೈಗೊಳ್ಳಬೇಕೆಂದು ನ್ಯಾ| ಸುಭಾಷ ಅಡಿ ಸೂಚಿಸಿದರು.

ಸಭೆಯಲ್ಲಿ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ, ಹು-ಧಾ. ಮಹಾನಗರ ಪಾಲಿಕೆ ಆಯುಕ್ತ ಡಾ| ಬಿ. ಗೋಪಾಲಕೃಷ್ಣ, ಡಿಸಿಪಿ ಸಾಹಿಲ್‌ ಬಾಗ್ಲಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್‌.ಎನ್‌. ರುದ್ರೇಶ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ, ಪರಿಸರ ಅಧಿಕಾರಿ ಶೋಭಾ ಎಲ್‌. ಪೋಳ, ನೈಋತ್ಯ ರೈಲ್ವೆ ವಲಯದ ಹಿರಿಯ ಅಧಿಕಾರಿಗಳಾದ ಅರವಿಂದ ಮಳಖೇಡ, ಯು. ಸುಬ್ಬರಾವ, ಅಜಯಸಿಂಗ, ಆರ್‌.ಕೆ. ಸಿಂಗ ಮೊದಲಾದವರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next