ನವದೆಹಲಿ: ಒನ್ ಪ್ಲಸ್ ಕಂಪೆನಿಯ ಮಾಜಿ ಸಹ ಸಂಸ್ಥಾಪಕ ಕಾರ್ಲ್ ಪೇನ ಮಹತ್ವಾಕಾಂಕ್ಷೆಯ ನೂತನ ಕಂಪೆನಿ ನಥಿಂಗ್ ಬಿಡುಗಡೆ ಮಾಡಿರುವ ನಥಿಂಗ್ ಇಯರ್ (1) ಮಾರಾಟ ಭಾರತದಲ್ಲಿ ಇಂದಿನಿಂದ ಆರಂಭವಾಗಿದ್ದು, ಫ್ಲಿಪ್‍ಕಾರ್ಟ್‍ನಲ್ಲಿ ಕೇವಲ 2 ನಿಮಿಷದಲ್ಲಿ ಸೋಲ್ಡ್ ಔಟ್ ಆಗಿದೆ.
ಲಂಡನ್ ಮೂಲದ ನಥಿಂಗ್ ಕಂಪೆನಿಯು ಜುಲೈ 27ರಂದು ನಥಿಂಗ್ ಇಯರ್ (1) ಅನ್ನು ಜಗತ್ತಿನಾದ್ಯಂತ ಲಾಂಚ್ ಮಾಡಿತ್ತು. ಭಾರತದಲ್ಲಿ ಅದರ ಮೊದಲ ಮಾರಾಟ ಇಂದು (ಆಗಸ್ಟ್ 17) ಫ್ಲಿಪ್ ಕಾರ್ಟ್ ನಲ್ಲಿತ್ತು.
ಮಧ್ಯಾಹ್ನ 12ಕ್ಕೆ ಈ ನೂತನ ಟ್ರೂ ವೈರ್ ಲೆಸ್ ಇಯರ್ ಬಡ್‍ನ ಪ್ರಿ ಬುಕಿಂಗ್ ಮಾರಾಟವನ್ನು ತೆರೆಯಲಾಗಿತ್ತು. ಫ್ಲಿಪ್‌ಕಾರ್ಟ್‌ನಲ್ಲಿ ಪ್ರಿ-ಆರ್ಡರ್ ಮುಕ್ತವಾದ 2 ನಿಮಿಷಗಳಲ್ಲಿ ಇಯರ್ (1) ಸೋಲ್ಡ್ ಔಟ್ ಆಯಿತು. ಇದು ಪ್ರೀಮಿಯಂ ಇಯರ್‌ಬಡ್ಸ್ ವಿಭಾಗದಲ್ಲಿ ಅತ್ಯಂತ ವೇಗವಾಗಿ ಮಾರಾಟವಾಗಿದೆ ಎಂದು ಕಂಪೆನಿ ತಿಳಿಸಿದೆ.
ಪ್ರಮುಖ ಪ್ರಯಾಣಗಳು ಒಂದು ಸಣ್ಣ ಹೆಜ್ಜೆಯಿಂದ ಆರಂಭವಾಗುತ್ತವೆ. ನಥಿಂಗ್ ಇಯರ್ (1) ಮೂಲಕ ಗ್ರಾಹಕನಿಗೆ ತಂತ್ರಜ್ಞಾನವನ್ನು ಇನ್ನಷ್ಟು ಹತ್ತಿರಕ್ಕೆತರುತ್ತೇವೆ. ಇಂದು, ಭಾರತದ ಗ್ರಾಹಕರು ಇಯರ್ (1) ಗೆ ನೀಡಿರುವ ಪ್ರತಿಕ್ರಿಯೆಗೆ ಧನ್ಯವಾದ ಸಲ್ಲಿಸುತ್ತೇವೆ. ಗ್ರಾಹಕರಿಗೆ ಇನ್ನೂ ಉತ್ತಮವಾದುದುನ್ನು ಕೊಡಲು ಬದ್ಧರಾಗಿದ್ದೇವೆ. ಮುಂದಿನ ಮಾರಾಟ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸುತ್ತೇವೆ ಎಂದು ನಥಿಂಗ್ ತಂಡ ತಿಳಿಸಿದೆ.
ನಥಿಂಗ್ ಇಯರ್ (1) ಇಯರ್ ಬಡ್ ಪ್ರೀಮಿಯಂ ಶ್ರೇಣಿಯ ಇಯರ್ ಬಡ್‍ಗಳಲ್ಲಿರುವ ಸೌಲಭ್ಯಗಳನ್ನು ಕೈಗೆಟುಕುವ ದರಕ್ಕೆ ನೀಡುತ್ತಿದೆ. ಪ್ರಸ್ತುತ ಪ್ರೀಮಿಯಂ ಶ್ರೇಣಿಯ ಟ್ರೂ ವೈರ್ ಲೆಸ್ ಇಯರ್ ಬಡ್‍ಗಳ ದರ 20 ಸಾವಿರ ರೂ. ಆಸುಪಾಸಿನಲ್ಲಿದೆ. ಇಯರ್ ಒನ್ ದರ 5999 ರೂ. ಆಗಿದೆ. ಮೊದಲ ಮಾರಾಟಕ್ಕೆ ಫ್ಲಿಪ್‍ಕಾರ್ಟ್ ನಿಂದ ಐಸಿಐಸಿ ಕ್ರೆಡಿಟ್ ಕಾರ್ಡ್ ಗಳಿಗೆ 500 ರೂ. ರಿಯಾಯಿತು, 6 ತಿಂಗಳ ಗಾನಾ ಪ್ಲಸ್ ಚಂದಾದಾರಿಕೆ ಉಚಿತ ಆಫರ್ ನೀಡಲಾಗಿತ್ತು.