Advertisement

150 ಕ್ಷೇತ್ರಗಳ ಅಭ್ಯರ್ಥಿಗಳಿಗೆ ಸೂಚನೆ: ಎಚ್‌ಡಿಕೆ

03:45 AM May 09, 2017 | |

ಬೆಂಗಳೂರು:ರಾಜ್ಯದ 150 ವಿಧಾನಸಭೆ ಕ್ಷೇತ್ರಗಳಲ್ಲಿ ಮುಂದಿನ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಕೆಲಸ ಪ್ರಾರಂಭಿಸುವಂತೆ ಸೂಚನೆ ನೀಡಲಾಗಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 150 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದು, ಈಗಾಗಲೇ ಎಲ್ಲರಿಗೂ ಚುನಾವಣೆಗೆ ಸಜ್ಜಾಗಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಯಾವ ಯಾವ ಕ್ಷೇತ್ರಕ್ಕೆ ಯಾರ್ಯಾರು ಅಭ್ಯರ್ಥಿಗಳು ಎಂಬುದು ಆ 150 ಮಂದಿಗೆ ಗೊತ್ತಿದೆ. ಅಧಿಕೃತ ಪ್ರಕಟಣೆಯಷ್ಟೇ ಬಾಕಿ ಎಂದು ತಿಳಿಸಿದರು.

ಆದರೆ, ಟಿಕೆಟ್‌ ಪಕ್ಕಾ ಆಗಿದೆ ಎಂದು ಮೈ ಮರೆತು ಸ್ಥಳೀಯ ಕಾರ್ಯಕರ್ತರು ಹಾಗೂ ನಾಯಕರ ಜತೆಗೂಡಿ ಕೆಲಸ ಮಾಡದಿದ್ದರೆ ಅಭ್ಯರ್ಥಿಯನ್ನೇ ಬದಲಾಯಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ಹೇಳಿದರು.

ವೀಕ್ಷಕರ ನೇಮಕ
ಬೂತ್‌ ಮಟ್ಟದಿಂದ ಪಕ್ಷ ಬಲಪಡಿಸಲು ಮುಂದಾಗಿರುವ ಜೆಡಿಎಸ್‌, ಈ ತಿಂಗಳಾಂತ್ಯಕ್ಕೆ ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು ಹಾಗೂ ವಿಧಾನಸಭೆ ಕ್ಷೇತ್ರಾವಾರು ಪದಾಧಿಕಾರಿಗಳ ನೇಮಕ ಈ ತಿಂಗಳಾಂತ್ಯದೊಳಗೆ ಪೂರ್ಣಗೊಳಿಸಲು ತೀರ್ಮಾನಿಸಿದೆ.

Advertisement

ಇದಕ್ಕಾಗಿ ಜಿಲ್ಲಾವಾರು ವೀಕ್ಷಕರನ್ನು ನೇಮಿಸಿ ತತಕ್ಷಣದಿಂದಲೇ ಪ್ರವಾಸ ಕೈಗೊಂಡು ಎಲ್ಲೆಲ್ಲಿ ಪದಾಧಿಕಾರಿಗಳ ನೇಮಕಾತಿ ಆಗಿಲ್ಲವೋ ಅಲ್ಲಿ ನೇಮಿಸುವ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಜಿಲ್ಲಾ ಮತ್ತು ತಾಲೂಕು ಘಟಕಗಳಿಗೂ ವೀಕ್ಷಕರ ಸೂಚನೆ, ಆದೇಶ ಪಾಲಿಸಲು ತಿಳಿಸಲಾಗಿದೆ ಎಂದು ಹೇಳಿದರು.ಪ್ರತಿ ಜಿಲ್ಲೆಗೆ ಇಬ್ಬರು ವೀಕ್ಷಕರನ್ನು ನೇಮಿಸಲಾಗಿದ್ದು, ಆ ಎಲ್ಲ ಕಾರ್ಯ ರಾಜ್ಯಮಟ್ಟದ ಬೂತ್‌ ಸಮಿತಿ ಅಧ್ಯಕ್ಷರು ಪರಾಮರ್ಶೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಪ್ರತಿ ಬೂತ್‌ಗೆ ಕನಿಷ್ಠ 15 ಕಾರ್ಯಕರ್ತರ ನೇಮಕ ಹಾಊ ಪ್ರತಿ ಬೂತ್‌ಗೆ ಮಾರ್ಗದರ್ಶಕರಾಗಿ ಓರ್ವ ಹಿರಿಯ ಕಾರ್ಯಕರ್ತ, ಯುವ ಕಾರ್ಯಕರ್ತ ಹಾಗೂ ಮಹಿಳಾ ಕಾರ್ಯಕರ್ತರ ನೇಮಕ ಮಾಡಲಾಗುವುದು. ಬೂತ್‌ ಮಟ್ಟದಲ್ಲಿ ಸಮಿತಿ ರಚಿಸುವಾಗಲೂ ಅಲ್ಲಿನ ಸಮುದಾಯ ಪರಿಗಣಿಸಿ ಅವಕಾಶ ಕೊಡಲಾಗುವುದು ಎಂದು ಹೇಳಿದರು.

ಪಕ್ಷದಲ್ಲಿ ಎರಡನೇ ಹಾಗೂ ಮೂರನೇ ಹಂತದ ನಾಯಕರನ್ನು ಗುರುತಿಸಿ ಬೆಳೆಸುವ ಕಾರ್ಯ ನಡೆಯುತ್ತಿದೆ. ಹಿಂದೆ ನಮ್ಮ ಪಕ್ಷದಲ್ಲಿದ್ದವರು ಬೇರೆ ಬೇರೆ ಪಕ್ಷಗಳಿಗೆ ಹೋಗಿ ನೆಲೆ ಕಂಡುಕೊಂಡಿದ್ದಾರೆ. ಆ ಜಾಗ ಭರ್ತಿ ಮಾಡಬೇಕಿದೆ. ಬೂತ್‌ ಮಟ್ಟದಲ್ಲಿ ನಮ್ಮ ಸಂಘಟನೆ ಸ್ವಲ್ಪ ಮಟ್ಟಿನ ಕಡಿಮೆ ಇದೆ. ಹೀಗಾಗಿ, ಅಲ್ಲಿಂದಲೇ ಬಲಪಡಿಸುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.

ಪಕ್ಷದಲ್ಲಿ ಹಿರಿಯ ನಾಯಕರನ್ನೊಳಗೊಂಡ ಪ್ರಚಾರ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಎರಡು ಮೂರು ದಿನಗಳಲ್ಲಿ ಪ್ರಕಟವಾಗಲಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ವೈಫ‌ಲ್ಯ ಜನರ ಮುಂದೆ ಇಡುವ ಕೆಲಸ ಆ ಸಮಿತಿ ಮಾಡಲಿದೆ ಎಂದು ಹೇಳಿದರು.

*ಎಚ್‌.ವಿಶ್ವನಾಥ್‌ ಅವರು ನನ್ನ ಜತೆ ಸಂಪರ್ಕದಲ್ಲಿರುವುದು ನಿಜ. ಕಾಂಗ್ರೆಸ್‌ನ ಬೇರೆ ನಾಯಕರ ಜತೆ ಮಾತುಕತೆ ಬೆಳವಣಿಗೆ ನಡೆದಿಲ್ಲ. ಸಿ.ಎಂ. ಇಬ್ರಾಹಿಂ ದೇವೇಗೌಡರ ಜತೆ ಮಾತನಾಡಿರುವುದು ಬೇರೆ ವಿಚಾರ. ವಿಶ್ವನಾಥ್‌ ಗೌರವಾನ್ವಿತ ರಾಜಕಾರಣಿ, ಒಮ್ಮೆ ತೀರ್ಮಾನ ಕೈಗೊಂಡರೆ ಬದಲಾಯಿಸುವವರಲ್ಲ. ಎರಡು ಮೂರು ದಿನಗಳಲ್ಲಿ  ಆ ಬಗ್ಗೆ ಸ್ಪಷ್ಟತೆ ಸಿಗಲಿದೆ. ಅವರು ಜೆಡಿಎಸ್‌ಗೆ ಬಂದರೆ ಸ್ವಾಗತ.
– ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next