Advertisement

ಒಳಹರಿವು ಗಮನಿಸಿ ಕಾಲುವೆಗೆ ನೀರು: ಲಾಡ್‌

03:15 PM Aug 14, 2017 | Team Udayavani |

ಕೋಪ್ಪಳ/ಬೆಂಗಳೂರು: ತುಂಗಭದ್ರಾ ಜಲಾಶಯಕ್ಕೆ ಮುಂದೆ ಒಳ ಹರಿವಿನ ಪ್ರಮಾಣ ಗಮನಿಸಿ, ಸೆಪ್ಟೆಂಬರ್‌ ತಿಂಗಳಲ್ಲಿ ಐಸಿಸಿ ಸಭೆ ನಡೆಸಿ, ಎಡ ಹಾಗೂ ಬಲದಂಡೆ ಕಾಲುವೆಗಳಿಗೆ ನೀರು ಬಿಡಲು ನಿರ್ಧರಿಸಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ತಿಳಿಸಿದರು. ಬೆಂಗಳೂರಿನ ವಿಧಾನಸೌಧದಲ್ಲಿ ರವಿವಾರ ಸಂಜೆ ಕರೆದಿದ್ದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ
ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತುಂಗಭದ್ರಾ ಜಲಾಶಯದಲ್ಲಿ ನೀರಿನ ಒಳಹರಿವಿನ ಪ್ರಮಾಣ ತುಂಬ ಕಡಿಮೆಯಿದೆ.
ಪ್ರಸ್ತುತ ಜಲಾಶಯದಲ್ಲಿ 48.08 ಟಿಎಂಸಿ ನೀರಿದೆ. ಈ ನೀರಿನಲ್ಲಿ ಎಡ ಹಾಗೂ ಬಲದಂಡೆ ಕಾಲುವೆಗೆ ನೀರು ಹರಿಸಬೇಕಿದೆ. ಜೊತೆಗೆ ಕುಡಿಯಲು ನೀರನ್ನು ಕಾಯ್ದಿಟ್ಟುಕೊಳ್ಳಬೇಕಿದೆ. ಪ್ರಸಕ್ತ ವರ್ಷ ಅತ್ಯಂತ ಕಠಿಣ ಪರಿಸ್ಥಿತಿ ಎದುರಾಗಿದೆ. ಇರುವ ನೀರಿನಲ್ಲೇ
ನಿರ್ವಹಣೆ ಮಾಡುವುದು ಸವಾಲಿನ ವಿಷಯ. ಜಲಾಶಯಕ್ಕೆ ಒಳ ಹರಿವಿನ ಪ್ರಮಾಣದ ಸ್ಥಿತಿ-ಗತಿ ಪರಿಶೀಲಿಸಿ ಕಾಲುವೆಗಳಿಗೆ ನೀರು ಬಿಡಲಾಗುವುದು. ಸದ್ಯಕ್ಕೆ ಕಾಲುವೆಗಳಿಗೆ ನೀರು ಬಿಡುವುದು ಕಷ್ಟಸಾಧ್ಯ ಎಂದರು.ತುಂಗಭದ್ರಾ ಎಡದಂಡೆಯ ವಿಜಯನಗರ,
ರಾಯ ಹಾಗೂ ಬಸವ ಕಾಲುವೆಗಳಿಗೆ ಆಗಸ್ಟ್‌ ಅಂತ್ಯದ ವರೆಗೂ ಪ್ರತಿ ನಿತ್ಯ 200 ಕ್ಯೂಸೆಕ್‌ನಂತೆ ನಿಂತ ಬೆಳೆಗೆ ನೀರು ಹರಿಸಲು ಸಭೆಯಲ್ಲಿ ನಿರ್ಣಯಿಸಲಾಗಿದೆ. ಸೆಪ್ಟೆಂಬರ್‌ ನಂತರ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಅಂದಾಜಿಸಿ 2ನೇ ಬೆಳೆಗೆ ನೀರು ಬಿಡಲು ಐಸಿಸಿ ಸಭೆ ಕರೆಯಲಾಗುವುದು ಎಂದರು. ನೀರು ಬಿಡಲು ಪಟ್ಟು: ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಗಂಗಾವತಿ, ಕಂಪ್ಲಿ,
ಸಿಂಧನೂರು ರೈತರು, ಜಲಾಶಯದಲ್ಲಿ ಒಂದನೇ ಬೆಳೆಗೆ ಬೇಕಾದಷ್ಟು ನೀರು ಲಭ್ಯವಿದೆ. ಆದರೆ ಅಧಿಕಾರಿಗಳ ಮಾತು ಕೇಳಿ ನೀರು ಬಿಡಲು ಹಿಂದೇಟು ಹಾಕಲಾಗುತ್ತಿದೆ. ಕಾಲುವೆಗೆ ನೀರು ಬಿಡದಿದ್ದರೆ ಅಚ್ಚುಕಟ್ಟು ಪ್ರದೇಶದ ರೈತರ ಪರಿಸ್ಥಿತಿ ತುಂಬ ಗಂಭೀರವಾಗಲಿದೆ. ಮುಂದಿನ ದಿನದಲ್ಲಿ ನೀರಾವರಿ ಇಲಾಖೆ ಅತ್ಯಂತ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಈಗಲೇ ಎಚ್ಚೆತ್ತು ಕೂಡಲೇ ಕಾಲುವೆಗಳಿಗೆ ನೀರು ಬಿಡಬೇಕು ಎಂದು ಸಭೆಯಲ್ಲಿ ರೈತರು ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸಂತೋಷ ಲಾಡ್‌, ಕಾಲುವೆಗಳಿಗೆ ನೀರು ಬಿಡುವಲ್ಲಿ ನಮ್ಮದೇನೂ ಯಾವುದೇ ತಕರಾರಿಲ್ಲ. ಈಗ ಕಾಲುವೆಗೆ ನೀರು ಬಿಟ್ಟರೆ ರೈತರು ಬತ್ತದ ಮಧ್ಯದ ಅವ ಧಿಗೆ ನೀರು ಕೊಡಲು ಸಾಧ್ಯವಾಗುವುದಿಲ್ಲ. ಆಗ ರೈತರ ಭತ್ತ ಹಾಗೂ ವಿವಿಧ ಬೆಳೆಗಳು ನಷ್ಟ ಅನುಭವಿಸಿ
ಸರ್ಕಾರಕ್ಕೆ ಹೊರೆ ಹಾಕುವ ಮುನ್ನ ಈಗಲೇ ರೈತರು ಜಲ ಸಮಸ್ಯೆ ಅರಿತು ವಿಚಾರ ಮಾಡಬೇಕು. ನಾವು 120 ದಿನ ರೈತರ ಬೆಳೆಗೆ ನೀರು ಕೊಡಬೇಕಾಗುತ್ತದೆ. ಮೊದಲ ಹಂತದಲ್ಲಿ ಕನಿಷ್ಠ 60 ದಿನವಾದರೂ ನೀರು ಕೊಡಬೇಕು. ಆದರೆ ಇಲ್ಲದಿದ್ದರೆ ರೈತರ
ಬೆಳೆ ಹಾನಿಯಾಗಿ ನಷ್ಟ ಅನುಭವಿಸುತ್ತಾನೆ. ಆಗ ಚಿಂತಿಸುವ ಬದಲು ಈಗಲೇ ಪರ್ಯಾಯ ಬೆಳೆಗೆ ರೈತರು ಮನಸ್ಸು ಮಾಡಬೇಕು ಎಂದರು. ಅಚ್ಚುಕಟ್ಟು ಪ್ರದೇಶದಲ್ಲಿ ಮೆಕ್ಕೆಜೋಳ, ಜೋಳ ಸೇರಿದಂತೆ ಕಡಿಮೆ ನೀರು ಬಳಕೆಯಾಗುವ ಬೆಳೆ ಬೆಳೆಯಲು ರೈತರು ಮುಂದಾಗಬೇಕು. ಭತ್ತವನ್ನೆ ಬೆಳೆಯಲು ಮುಂದಾದರೆ ನೀರಿನ ಕೊರತೆ ಎದುರಿಸಬೇಕಾಗುತ್ತದೆ. ರೈತರು ಬಿಗಿಪಟ್ಟು ಹಿಡಿದರೆ ನಾವು ನೀರು ಬಿಡಬೇಕಾಗುತ್ತದೆ. ಮುಂದೆ ನೀವೇ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ಸೆಪ್ಟೆಂಬರ್‌ವರೆಗೂ ಒಳ ಹರಿವು
ನೋಡಿಕೊಂಡು 2ನೇ ಬೆಳೆಗೆ ನೀರು ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದರು. ಸಭೆಯಲ್ಲಿ ಸಚಿವ ತನ್ವೀರ್‌ ಸೇಠ್ ಸಂಸದ
ಸಂಗಣ್ಣ ಕರಡಿ, ಶಾಸಕ ಆನಂದಸಿಂಗ್‌, ಸುರೇಶ ಬಾಬು, ಬೋಸರಾಜ, ಶಿವರಾಜ ತಂಗಡಗಿ ಸೇರಿದಂತೆ ಸಿಂಧನೂರು, ಶಿರವಾರ, ಕಂಪ್ಲಿ, ಗಂಗಾವತಿ ಭಾಗದ ರೈತರು ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next