Advertisement

ನೋಟು ಅಮಾನ್ಯದಿಂದ ನಲುಗಿದ ಸಾಮಾಜಿಕ-ಆರ್ಥಿಕ ಕ್ಷೇತ್ರ

03:07 PM Nov 09, 2017 | Team Udayavani |

ದಾವಣಗೆರೆ: ಕೇಂದ್ರ ಸರ್ಕಾರ 2016ರ ನ.8 ರಂದು ಕೈಗೊಂಡ ಗರಿಷ್ಠ ಮುಖಬೆಲೆ ನೋಟು ಅಮಾನೀಕರಣ ಎಂಬುದು ಸಾಮಾಜಿಕ, ಆರ್ಥಿಕ ಕ್ಷೇತ್ರದ ದಮನೀಕರಣ ನೀತಿ ಎಂದು ಬೆಂಗಳೂರಿನ ಸಾಹಿತಿ ಮುರುಳಿಕೃಷ್ಣ ವಿಶ್ಲೇಷಿಸಿದ್ದಾರೆ.

Advertisement

ಸಿಪಿಐ ಜಿಲ್ಲಾ ಮಂಡಳಿ, ಸಿಪಿಐ(ಎಂ) ಜಿಲ್ಲಾ ಸಮಿತಿ ಸಂಯುಕ್ತಾಶ್ರಯದಲ್ಲಿ ಬುಧವಾರ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡ ನೋಟು ರದ್ಧತಿ ಮತ್ತು ಜಿ.ಎಸ್‌.ಟಿ.ಯ ದುಷ್ಪರಿಣಾಮ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ, ಕೇಂದ್ರ ಸರ್ಕಾರದ ಮಾಡಿದ ಗರಿಷ್ಠ ಮುಖಬೆಲೆ ನೋಟು ಅಮಾನ್ಯ ಕ್ರಮ ದೇಶದ ಸಾಮಾಜಿಕ, ಆರ್ಥಿಕ ಕ್ಷೇತ್ರದ ಮೇಲೆ ಊಹೆಗೂ ನಿಲುಕುದ ದುಷ್ಪರಿಣಾಮ ಬೀರಿದೆ. ಜನ ಸಾಮಾನ್ಯರು, ಕೃಷಿಕರು, ಕಾರ್ಮಿಕ ವರ್ಗವನ್ನು ಸಂಕಷ್ಟಕೀಡು ಮಾಡಿದೆ ಎಂದರು.

ಭಯೋತ್ಪಾದನೆ, ನಕ್ಸಲ್‌ ಚಟುವಟಿಕೆ, ಕಪ್ಪುಹಣ, ಭ್ರಷ್ಟಾಚಾರ, ಖೋಟಾ ನೋಟು ಹಾವಳಿ ತಡೆಯುವ ಉದ್ದೇಶದಿಂದ ಆರ್ಥಿಕ ಕ್ಷೇತ್ರದ ಸರ್ಜಿಕಲ್‌ ಸೈಕ್‌(ನಿರ್ದಿಷ್ಟ ದಾಳಿ) ನಡೆಸಿದ್ದಾಗಿ ಕೇಂದ್ರ ಸರ್ಕಾರ ನೋಟು ಅಮಾನ್ಯದ ಬಗ್ಗೆ ಹೇಳಿಕೊಂಡಿತ್ತು. ನೋಟು ಅಮಾನ್ಯದಂತಹ ತುರ್ತುಕ್ರಮಕ್ಕೆ ಒಂದು ವರ್ಷವಾದರೂ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಕನಸು ಈ ಕ್ಷಣಕ್ಕೂ
ನನಸಾಗಿಲ್ಲ. ಕೇಂದ್ರ ಸರ್ಕಾರ ನೋಟು ಅಮಾನ್ಯ ಧೀರ್ಘಾವಧಿ ಒಳ್ಳೆಯ ಪರಿಣಾಮ ಉಂಟು ಮಾಡಲಿದೆ ಎಂಬ ಅಂದಾಜಿಸಿತ್ತು. ಅದಕ್ಕೂ ಮುನ್ನ ಅಲ್ಪಾವಧಿಯ ಪರಿಣಾಮದ ಫಲವಾಗಿ ಆರ್ಥಿಕ ಕ್ಷೇತ್ರವೇ ಬೇರೆ ಕಡೆ ಮುಖ ಮಾಡಿದೆ ಎಂದರು.

2016ರ ನ. 8 ಮಧ್ಯರಾತ್ರಿಯಿಂದ ಅನ್ವಯವಾಗುವಂತೆ 500, 1ಸಾವಿರ ಮುಖಬೆಲೆಯ ನೋಟು ರದ್ಧುಪಡಿಸಿದ ಸಂದರ್ಭದಲ್ಲಿ 15.44 ಲಕ್ಷ ಕೋಟಿ ಮೌಲ್ಯದ ನೋಟುಗಳು ಚಲಾವಣೆಯಲ್ಲಿದ್ದವು. ಚಲಾವಣೆಯಲ್ಲಿದ್ದ ಒಟ್ಟಾರೆ ಶೇ. 85ರಷ್ಟು 500, 1 ಸಾವಿರ ಮುಖಬೆಲೆ ನೋಟುಗಳಿದ್ದವು. 15.44 ಲಕ್ಷ ಕೋಟಿ 24 ಬಿಲಿಯನ್‌ಗೆ ಸಮ. ಕೇಂದ್ರ ಸರ್ಕಾರ ಎಲ್ಲ ಹಣ ವಾಪಾಸ್ಸು ಬರುವ ನಿರೀಕ್ಷೆ ಇಟ್ಟುಕೊಂಡಿತ್ತು. ವಾಪಾಸ್ಸಾಗಿದ್ದು 15.28 ಲಕ್ಷ ಕೋಟಿ. ಇನ್ನೂ 16 ಸಾವಿರ ಕೋಟಿಯ ಲೆಕ್ಕಕ್ಕೇ ಸಿಕ್ಕಿಲ್ಲ ಎಂದು ದೂರಿದರು.
ಅತಿ ಮುಖ್ಯವಾಗಿ ಗರಿಷ್ಟ ಮುಖಬೆಲೆಯ ನೋಟುಗಳ ಅಮಾನ್ಯ ಮಾಡುವಂತಹ ಆರ್ಥಿಕ ದುಸ್ಥಿತಿಯ ವಾತಾವರಣ ಇರಲೇ ಇಲ್ಲ. ಜಗತ್ತಿನ ಇತಿಹಾಸದಲ್ಲಿ ಯಾವುದೇ ದೇಶದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ನೋಟುಗಳ ಅಪಮೌಲ್ಯ ಮಾಡಿಯೇ ಇಲ್ಲ. ನೋಟು ಅಮಾನ್ಯ ನಂತರ ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೇ ನೋಟು ಅಮಾನ್ಯ ಮಾಡಿದ್ದು ತಪ್ಪು ಎಂಬುದು ಮನವರಿಕೆ ಆಗಿದೆ. ಆದರೆ, ಅದನ್ನು ಬಹಿರಂಗವಾಗಿ ತೋರಿಸದೆ ನೋಟು ಅಮಾನ್ಯಕ್ಕೆ ದೇಶಪ್ರೇಮದ ನಶೆಯ ಸ್ಪರ್ಶ ನೀಡಲಾಗುತ್ತಿದೆ ಎಂದು ಹೇಳಿದರು.

ನೋಟು ಅಮಾನ್ಯದ ನಂತರ ಹೊರ ತಂದ 500, 2 ಸಾವಿರ ಮುಖಬೆಲೆಯ ನೋಟುಗಳ ಮುದ್ರಣಕ್ಕೆ 20 ಸಾವಿರ ಟನ್‌ ಕಾಗದ ಆಮದು ಮಾಡಿಕೊಳ್ಳಬೇಕಾಯಿತು.  1.29 ಲಕ್ಷ ಕೋಟಿ ಸಾಗಾಣಿಕೆ ವೆಚ್ಚ ಮಾಡಬೇಕಾಯಿತು. ನೋಟು ಅಮಾನ್ಯದಂತಹ ಬಹು ಮುಖ್ಯ ಆರ್ಥಿಕ ಕ್ರಮ ತೆಗೆದುಕೊಳ್ಳುವ ಮುನ್ನ ಕೇಂದ್ರ ಸರ್ಕಾರ ಯಾವುದೇ ಪೂರ್ವ ತಯಾರಿ ಮಾಡಿಕೊಂಡಿರಲಿಲ್ಲ. ಹಾಗಾಗಿ
ತಾತ್ಕಾಲಿಕ ಸಮಸ್ಯೆ ನಿವಾರಣೆ ಮಾಡಲಿಕ್ಕೆ ಸಾಧ್ಯವೇ ಆಗಲಿಲ್ಲ. ಮೊದಲು 50 ದಿನ ಕಾಲಾವಕಾಶ ಕೇಳಿದ್ದ ಪ್ರಧಾನಿ ನರೇಂದ್ರ ಮೋದಿ ಸಮಸ್ಯೆ ನಿವಾರಿಸಲು ಈವರೆಗೆ ಸಾಧ್ಯ ಆಗಿಲ್ಲ. ಆಗುವುದೂ ಇಲ್ಲ ಎಂದು ಹೇಳಿದರು.

Advertisement

ನೋಟು ಅಮಾನ್ಯದ ನಂತರ ಜನರು ತಮ್ಮದೇ ಹಣಕ್ಕಾಗಿ ಬ್ಯಾಂಕ್‌ಗಳ ಮುಂದೆ ಉದ್ದನೆಯ ಸರತಿ ಸಾಲಲ್ಲಿ ಮಳೆ, ಚಳಿ,
ಬಿಸಿಲು ಎನ್ನದೆ ಕಾಯಬೇಕಾಯಿತು. 100ಕ್ಕೂ ಹೆಚ್ಚು ಜನರು, 80ಕ್ಕೂ ಹೆಚ್ಚು ಬ್ಯಾಂಕ್‌ ಉದ್ಯೋಗಿಗಳು ಸಾವನ್ನಪ್ಪಿದರು. ಆದರೆ, ಕೇಂದ್ರ ಸರ್ಕಾರ ಒಂದೇ ಒಂದು ಸಾಂತ್ವನ ಮಾತು ಹೇಳದೆ ಅತ್ಯಂತ ಅಮಾನವೀಯವಾಗಿ ವರ್ತಿಸಿತು. ನೋಟು ಅಮಾನ್ಯದ ನಂತರ ಭಯೋತ್ಪಾದನೆ, ನಕ್ಸಲ್‌ ಚಟುವಟಿಕೆ, ಭ್ರಷ್ಟಾಚಾರ, ಕಪ್ಪುಹಣ, ನಕಲಿ ನೋಟು ಚಲಾವಣೆ ನಿಯಂತ್ರಣಕ್ಕೆ ಬಂದಿಲ್ಲ ಎಂದು ತಿಳಿಸಿದರು.

ಪ್ರೊ. ಡಾ| ಎ.ಬಿ. ರಾಮಚಂದ್ರಪ್ಪ ಮಾತನಾಡಿ, ನೋಟು ಅಮಾನ್ಯ ಆರ್ಥಿಕ ಬಾಂಬಾದರೆ, ಜಿಎಸ್‌ಟಿ ತೆರಿಗೆ ಬಾಂಬ್‌. ನೋಟು ಅಮಾನ್ಯ, ಜಿಎಸ್‌ಟಿ ದುಷ್ಪರಿಣಾಮದ ಗಮನ ಬೇರೆಡೆ ಸೆಳೆಯಲು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ ಎಂದು ದೂರಿದ ಅವರು, ಕಾಂಗ್ರೆಸ್‌-ಬಿಜೆಪಿ ಸದಾ ಜನರ ಕೊರಳ ಕೊಯ್ಯುವ ಪಕ್ಷಗಳು ಎಂದರು.

ಹಿರಿಯ ಕಾರ್ಮಿಕ ಮುಖಂಡ ಎಚ್‌. ಕೆ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕೆ.ಎಲ್‌. ಭಟ್‌, ಆನಂದರಾಜ್‌, ಎಂ.ಬಿ. ಶಾರದಮ್ಮ, ಟಿ.ಎಸ್‌. ನಾಗರಾಜ್‌, ಕೆ.ಜಿ. ಶಿವಮೂರ್ತಿ, ಇ. ಶ್ರೀನಿವಾಸ್‌, ಮಹಮ್ಮದ ಬಾಷಾ, ಆವರಗೆರೆ ವಾಸು ಇತರರು ಇದ್ದರು. ಐರಣಿ ಚಂದ್ರು, ಅಂಜಿನಪ್ಪ ಲೋಕಿಕೆರೆ ಜಾಗೃತಿ ಗೀತೆ ಹಾಡಿದರು. ಕೆ.ಎಸ್‌. ಆನಂದರಾಜ್‌ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next