Advertisement

ಇನ್ನೂ ದೂರಾಗಿಲ್ಲ ಮಹಿಳಾ ಅಸಮಾನತೆ

12:27 PM Mar 16, 2018 | Team Udayavani |

ಮೈಸೂರು: ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ತಂತ್ರಜ್ಞಾನದ ಜತೆಗೆ ಗುಣಮಟ್ಟದ ವೈದ್ಯಕೀಯ ಸೇವೆಗಳು ಲಭ್ಯವಿದ್ದರೂ ಸರಿಯಾದ ಚಿಕಿತ್ಸೆ ಲಭಿಸದ ಪರಿಣಾಮ ವಿಶ್ವದಲ್ಲಿ ಮೂರು ಲಕ್ಷ ಮಹಿಳೆಯರು ಗರ್ಭಧಾರಣೆಯ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಸಚಿವೆ ಎಂ.ಸಿ.ಮೋಹನ ಕುಮಾರಿ ವಿಷಾದಿಸಿದರು.

Advertisement

ಮೈಸೂರು ವಿಶ್ವವಿದ್ಯಾನಿಲಯದ ಅಭಿವೃದ್ಧಿ ಅಧ್ಯಯನ ವಿಭಾಗದಿಂದ ಮಾನಸಗಂಗೋತ್ರಿಯ ರಾಣಿ ಬಹದ್ದೂರ್‌ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಮಹಿಳಾ ಸಬಲೀಕರಣ ಮತ್ತು ಗ್ರಾಮೀಣಾಭಿವೃದ್ಧಿ ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಉತ್ತಮ ವೈದ್ಯಕೀಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಸಂಖ್ಯೆಯಲ್ಲಿ ಆಶಾ ಕಾರ್ಯಕರ್ತೆಯರನ್ನು ನೇಮಿಸಿದೆ. ಚಾಮರಾಜನಗರ ಜಿಲ್ಲೆಯಲ್ಲಿ 6 ಸಾವಿರ ಆಶಾ ಕಾರ್ಯಕರ್ತೆಯರಿದ್ದು, ತಾವು ಪ್ರತಿನಿಧಿಸುವ ಗುಂಡ್ಲುಪೇಟೆ ಕ್ಷೇತ್ರದಲ್ಲಿ 1 ಸಾವಿರ ಆಶಾ ಕಾರ್ಯಕರ್ತೆಯರಿದ್ದಾರೆ.

ಗುಂಡ್ಲುಪೇಟೆಯಲ್ಲಿ ಪುರುಷರ ಸಂಖ್ಯೆಗಿಂತ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ದುರಾದೃಷ್ಟವಶಾತ್‌ ಇಡೀ ಚಾಮರಾಜನಗರ ಜಿಲ್ಲೆಯಲ್ಲಿ ಮಹಿಳೆಯರ ಸ್ಥಿತಿ ಉತ್ತಮವಾಗಿಲ್ಲ. ಈ ಭಾಗದಲ್ಲಿ ಮಹಿಳೆಯರಿಗೆ ಉಡುಗೆಯನ್ನು ಆಯ್ಕೆ ಮಾಡಲು, ಖರೀದಿಸಲು ಇಂದಿಗೂ ಸ್ವಾತಂತ್ರ್ಯವಿಲ್ಲ. ಇದಲ್ಲದೆ ಕುಟುಂಬಗಳಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಮಹಿಳೆಯರ ಅಭಿಪ್ರಾಯವನ್ನೂ ಸಹ ಪರಿಗಣಿಸಲಾಗುವುದಿಲ್ಲ ಎಂದರು.

ಅಸಮಾನತೆ ಇದೆ: ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಪುರುಷರ ಮತ್ತು ಮಹಿಳೆಯರ ನಡುವೆ ಅಸಮಾನತೆ ಅಸ್ತಿತ್ವದಲ್ಲಿದೆ. ಈ ಹಿಂದೆ ಕೃಷಿ ಭೂಮಿಗಳಲ್ಲಿ ಕೆಲಸ ಮಾಡುವ ಪುರುಷರಿಗೆ ಪ್ರತಿನಿತ್ಯ 400 ರೂ. ವೇತನ ನೀಡಿದರೆ, ಮಹಿಳೆಯರಿಗೆ 100 ರೂ. ಮಾತ್ರ ನೀಡಲಾಗುತ್ತಿತ್ತು.

Advertisement

ಆದರೆ, ಪ್ರಸ್ತುತ ಮಹಿಳೆಯರ ನಿತ್ಯದ ಕೂಲಿ 300 ರೂ.ಗಳಿಗೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಪುರುಷರಷ್ಟೇ ಸಮಾನ ವೇತನ ನೀಡಲಾಗುವುದು ಎಂದ ಅವರು, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಅನೇಕ ಮಹಿಳೆಯರು ಕೆಲಸದ ಒತ್ತಡ, ಕೌಟುಂಬಿಕ ಸಮಸ್ಯೆಗಳಿಂದಾಗಿ ಖನ್ನತೆಯಿಂದ ಬಳಲುತ್ತಿದ್ದಾರೆ.

ಮಹಿಳೆಯರು ಹಿಂಸೆಗೆ ಸುಲಭವಾಗಿ ಗುರಿಯಾಗಲಿದ್ದು, ಲೈಂಗಿಕ ಕಿರುಕುಳ ಸೇರಿದಂತೆ ಅನೇಕ ರೀತಿಯ ಸಮಸ್ಯೆಗಳನ್ನು ಮಹಿಳೆಯರು ಎದುರಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನೆರೆಯ ರಾಜ್ಯ ಕೇರಳದಲ್ಲಿ ಮದುವೆಯಾದ ನಂತರ ಗಂಡಂದಿರು ಅವರ ಅತ್ತೆಯ ಮನೆಯಲ್ಲೇ ಇರಬೇಕಿದ್ದು, ಕೇರಳದ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಸಿಗಬೇಕಿದೆ.

ಆದರೆ, ಕರ್ನಾಟಕದಲ್ಲಿ ಸನ್ನಿವೇಶವು ಸಂಪೂರ್ಣ ಭಿನ್ನವಾಗಿದೆ. ರಾಜ್ಯ ಸರ್ಕಾರ ಮಹಿಳೆಯರ ಅನುಕೂಲಕ್ಕಾಗಿ ಬಜೆಟ್‌ನಲ್ಲಿ ಎಲ್‌ಕೆಜಿಯಿಂದ ಸ್ನಾತಕೋತ್ತರ ಪದವಿವರೆಗೂ ಉಚಿತ ಶಿಕ್ಷಣವನ್ನು ಹಾಗೂ ಉಚಿತ ಬಸ್‌ಪಾಸ್‌ ಸೌಲಭ್ಯವನ್ನು ಒದಗಿಸಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಮೈಸೂರು ವಿವಿ ಪ್ರಭಾರ ಕುಲಪತಿ ಪೊ›.ಸಿ.ಬಸವರಾಜು, ಕುಲಸಚಿವೆ ಡಿ.ಭಾರತಿ, ಪೊ›.ಜೆ.ಸೋಮಶೇಖರ್‌, ಶೃತಿ ತರುಣ್‌ಗಿರಿ, ಡಿ.ಪ್ರಾಣೇಶ್‌ರಾವ್‌ ಸೇರಿದಂತೆ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next