Advertisement

ಬಳಕೆಗಿಲ್ಲದ ಈದು “ಬಿ’ಪ್ರಾಥಮಿಕ ಆರೋಗ್ಯ ಉಪಕೇಂದ್ರ

10:37 PM Nov 05, 2019 | mahesh |

ಬಜಗೋಳಿ: ಈದು ಗ್ರಾ.ಪಂ. ವ್ಯಾಪ್ತಿಯ ಪಲ್ಕೆಯಲ್ಲಿರುವ ಹೊಸ್ಮಾರುವಿನ ಈದು “ಬಿ’ ಪ್ರಾಥಮಿಕ ಉಪಕೇಂದ್ರವಾದ ಕಟ್ಟಡಕ್ಕೆ ಬೀಗ ಹಾಕಲಾಗಿದ್ದು, ಸಾರ್ವಜನಿಕ ಬಳಕೆಯಿಲ್ಲದೆ ಸುಸಜ್ಜಿತ ಕಟ್ಟಡ ಪಾಳು ಬೀಳುವಂತಾಗಿದೆ. ಕಟ್ಟಡವು ಮೂಲ ಸೌಕರ್ಯ ಹೊಂದಿದ್ದರೂ ಸಾರ್ವಜನಿ ಕರ ಬಳಕೆಯಿಲ್ಲದೆ ಗಿಡ ಗಂಟಿಗಳು ಆವೃತವಾಗಿ ಪಾಳು ಬಿದ್ದಿವೆ.

Advertisement

2012ರಲ್ಲಿ ಸುಸಜ್ಜಿತ ಕಟ್ಟಡದಲ್ಲಿ ಆರಂಭಗೊಂಡ ಈ ಉಪಕೇಂದ್ರವು ಪ್ರಾರಂಭದಲ್ಲಿ ಉತ್ತಮ ಸೇವೆ ನೀಡುವ ಮೂಲಕ ಈದು ಪರಿಸರದ ಸಾರ್ವ ಜನಿಕರಿಗೆ ಉತ್ತಮ ಸೇವೆ ನೀಡುತ್ತಿತ್ತು. ಆದರೆ ಕಳೆದ 3 ವರ್ಷಗಳಿಂದ ಯಾವುದೇ ಸೇವೆ ನೀಡದೆ ಕಟ್ಟಡಕ್ಕೆ ಬೀಗ ಹಾಕಲಾಗಿದ್ದು, ಪಲ್ಕೆ ಭಾಗದ ಸಾರ್ವಜನಿಕರು ಸುಮಾರು 5 ಕಿ.ಮೀ. ಕ್ರಮಿಸಿ ಹೊಸ್ಮಾರುವಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಅವಲಂಬಿಸು ವಂತಾಗಿದೆ. ಈ ಭಾಗದಲ್ಲಿ ಯಾವುದೇ ಬಸ್‌ ಸೌಲಭ್ಯವಿಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ.

ಖಾಯಂ ವೈದ್ಯಾಧಿಕಾರಿಗಳಿಲ್ಲ
ಆದರೆ ಹೊಸ್ಮಾರುವಿನಲ್ಲಿರುವ ಈದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯಾಧಿಕಾರಿಗಳು ಇಲ್ಲದೆ ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಗಿರೀಶ್‌ ಗೌಡ ವಾರದಲ್ಲಿ ಒಂದು ದಿನ ಹೊಸ್ಮಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ನೀಡುತ್ತಿದ್ದು, ಸಾರ್ವಜನಿಕರು ತುರ್ತು ಸಂದರ್ಭ ಸುಮಾರು 17 ಕಿ.ಮೀ. ದೂರವಿರುವ ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ 27 ಕಿ.ಮೀ. ದೂರವಿರುವ ತಾಲೂಕು ಆರೋಗ್ಯ ಕೇಂದ್ರವನ್ನು ಅವಲಂಬಿಸು ವಂತಾಗಿದೆ.

ಪಾಳು ಬಿದ್ದ ಕಟ್ಟಡ
ಸುಸಜ್ಜಿತ ಕಟ್ಟಡ ಬಳಕೆಯಿಲ್ಲದೆ ಪಾಳು ಬಿದ್ದಿದ್ದು, ಗಿಡಗಂಟಿಗಳು ಆವೃತವಾಗಿದೆ. ಆರಂಭದಲ್ಲಿ ಕಿರಿಯ ಆರೋಗ್ಯ ಮಹಿಳಾ ಸಹಾಯಕಿ ಕಟ್ಟಡದಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಾರ್ವಜನಿಕರಿಗೆ ಬಹಳ ಅನುಕೂಲವಾಗಿತ್ತು. ಈದು ಪಲ್ಕೆ ಭಾಗದಲ್ಲಿ ಸುಮಾರು 500ಕ್ಕೂ ಅಧಿಕ ಮನೆಗಳಿವೆ.

ಈದು “ಬಿ’ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳೆದ 3 ವರ್ಷಗಳಿಂದ ಬೀಗ ಹಾಕಲಾಗಿದ್ದರೂ ಜನಪ್ರತಿನಿಧಿಗಳು ಯಾವುದೇ ರೀತಿಯಲ್ಲಿ ಪಾಳು ಬಿದ್ದ ಕಟ್ಟಡವನ್ನು ಮರು ಬಳಸುವಲ್ಲಿ ಕ್ರಮ ಕೈಗೊಳ್ಳದೆ ಪಾಳು ಬಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 2018- 19ನೇ ಸಾಲಿನಲ್ಲಿ 2 ಲಕ್ಷ ರೂ. ವೆಚ್ಚದ ಅನುದಾನದಲ್ಲಿ ಆವರಣ ಗೋಡೆ ನಿರ್ಮಿಸುವ ಅಗತ್ಯವಾದರೂ ಏನಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಸಮಸ್ಯೆ ಕುರಿತು ಹಲವು ಬಾರಿ ಜನಪ್ರತಿನಿಧಿಗಳನ್ನು ಸಂಪರ್ಕಿಸಲಾದರೂ ಯಾವುದೇ ರೀತಿಯ ಕ್ರಮ ಕೈಗೊಳ್ಳುವಲ್ಲಿ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದು, ಇನ್ನಾದರೂ ಎಚ್ಚೆತ್ತು ಪಲ್ಕೆಯಲ್ಲಿರುವ ಉಪಕೇಂದ್ರ ಕಟ್ಟಡ ಸಾರ್ವಜನಿಕರಿಗೆ ಬಳಕೆಯಾಗುವಂತಾಗಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

ಚಿಕಿತ್ಸೆಗೆ ಸೂಕ್ತ ಕ್ರಮ
ಈದು “ಬಿ’ ಉಪಕೇಂದ್ರದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪ್ರತಿನಿತ್ಯ ಅಪರಾಹ್ನದ ಅನಂತರ ಚಿಕಿತ್ಸೆ ನೀಡುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಡಾ. ಗಿರೀಶ್‌ ಗೌಡ ಎಂ.,
ಪ್ರಭಾರ ವೈದ್ಯಾಧಿಕಾರಿ, ಈದು ಪ್ರಾಥಮಿಕ ಆರೋಗ್ಯ ಕೇಂದ್ರ.

ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಈ ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ದಿವ್ಯಶ್ರೀ ಗಿರೀಶ್‌ ಅಮೀನ್‌, ಜಿ.ಪಂ. ಸದಸ್ಯರು

ಉಪಕೇಂದ್ರದಲ್ಲಿಯೇ ಚಿಕಿತ್ಸೆ ನೀಡಿ
ವಯೋವೃದ್ಧರು ನಾವು ಯಾವುದೇ ರೀತಿಯ ಚಿಕಿತ್ಸೆಗಾದರೂ ಹೊಸ್ಮಾರುವಿಗೆ ತೆರಳಲು ಕಷ್ಟಕರವಾಗುತ್ತಿದ್ದು, ಪಲ್ಕೆಯಲ್ಲಿರುವ ಉಪಕೇಂದ್ರದಲ್ಲಿಯೇ ಚಿಕಿತ್ಸೆ ನೀಡುವಂತಾದಲ್ಲಿ ತುಂಬಾ ಪ್ರಯೋಜನವಾದೀತು.
-ಗಿರಿಜಾ ಪೂಜಾರ್ತಿ, ಪಾಪುದಲ್ಕೆ

– ಸಂದೇಶ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next