ತಿ.ನರಸೀಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಯಾವುದೇ ಮುನಿಸಿಲ್ಲ, ರಾಜ್ಯದಲ್ಲಿ ಮತ್ತೂಮ್ಮೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದರಿಂದ ಮುಂದಿನ ಮುಖ್ಯಮಂತ್ರಿ ಅವರೇ ಆಗಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಮುಖ್ಯಮಂತ್ರಿಗಳ ಸಮುದಾಯದ ಜನರೇ ಇರುವ ತಾಲೂಕಿನ ಗುಡ್ಡದಕೊಪ್ಪಲು ಗ್ರಾಮದಲ್ಲಿ 25 ಲಕ್ಷ ರೂ.,ಗಳ ವೆಚ್ಚದ ಸಿಮೆಂಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಮಾತನಾಡಿದರು.
ವ್ಯಕ್ತಿಗಳಿಬ್ಬರು ಬೇರೆಯಾದರೂ ರಾಜಕಾರಣದಲ್ಲಿ ನಾವಿಬ್ಬರೂ ಒಂದೇ. ಎಂತಹ ಸಂದರ್ಭದಲ್ಲೂ ಮುನಿಸಿಕೊಳ್ಳುವ ಪ್ರಮಯವೇ ಇಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ ನಡೆಯಲಿದೆ ಎಂದು ಸಿಎಂ-ಎಚ್‌ಸಿಎಂ ಮುನಿಸಿನ ಗೊಂದಲಕ್ಕೆ ತೆರೆ ಎಳೆದರು.
ರಾಜ್ಯದಲ್ಲಿ 5 ವರ್ಷಗಳ ಕಾಲ ಸ್ಥಿರ ಸರ್ಕಾರ ನೀಡಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಇರುವವರೆಗೂ ಅವರೇ ಮುಂದುವರಿಯಲಿದ್ದಾರೆ. ಸಿಎಂ ಹುದ್ದೆ ಸಾಕೇಂದು ನಿರ್ಗಮಿಸಿದ ನಂತರವಷ್ಟೇ ತಾವು ಆ ಸ್ಥಾನದ ಆಕಾಂಕ್ಷಿಯಾಗುತ್ತೇನೆ. ಸದ್ಯಕ್ಕೆ ಮುಖ್ಯಮಂತ್ರಿಯಾಗಬೇಕೆಂಬ ಬಯಕೆಯಿಲ್ಲ ಎಂದು ಸ್ಪಷ್ಪಪಡಿಸಿದರು.
ಒತ್ತುವರಿ ತೆರವಿಗೆ ಸೂಚನೆ: ಗ್ರಾಮಸ್ಥರು ಮನವಿ ಹಿನ್ನೆಲೆಯಲ್ಲಿ ಗುಡ್ಡದಕೊಪ್ಪಲು ಗ್ರಾಮದ ಅಡ್ಡಹಳ್ಳದ ಓಣಿ ಒತ್ತುವರಿ ತೆರವುಗೊಳಿಸುವಂತೆ ಸ್ಥಳದಲ್ಲಿಯೇ ಹಾಜರಿದ್ದ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ವೈ.ಎನ್.ಶಂಕರೇಗೌಡ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ ಜಾಗೃತಿ ಸಮಿತಿ ಅಧ್ಯಕ್ಷ ಸುನೀಲ್ ಬೋಸ್, ಜಿಪಂ ಸದಸ್ಯ ಟಿ.ಎಚ್.ಮಂಜುನಾಥನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರಕುಮಾರ್, ಹಿಂ.ವರ್ಗಗಳ ವಿಭಾಗದ ಅಧ್ಯಕ್ಷ ಎ.ಎನ್.ಸ್ವಾಮಿ, ತಾಪಂ ಸದಸ್ಯ ಆರ್.ಚಲುವರಾಜು, ಕೆಪಿಸಿಸಿ ಸದಸ್ಯ ಧನಂಜಯಗೌಡ, ಅಂಕನಹಳ್ಳಿ ಪಿಎಸಿಸಿಎಸ್ ಮಾಜಿ ಅಧ್ಯಕ್ಷ ಮಹದೇವು, ಕೆಆರ್‌ಐಡಿಎಲ್ ಎಇಇ ಪ್ರಭುಶಂಕರ ಮತ್ತಿತರರಿದ್ದರು.