Advertisement

ಅಂತ್ಯವಲ್ಲ ; ಆರಂಭವಷ್ಟೇ: ಡಿ.ಕೆ. ಶಿವಕುಮಾರ್‌

10:04 AM Oct 28, 2019 | mahesh |

ಬೆಂಗಳೂರು: ಇದು ಅಂತ್ಯವಲ್ಲ, ಆರಂಭವಷ್ಟೇ ಎಂದು ತಿರುಗೇಟು ನೀಡುವ ಮೂಲಕ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ರಾಜಕೀಯ ಹೋರಾಟದ ಸುಳಿವು ನೀಡಿದರು. ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪದಲ್ಲಿ 51 ದಿನಗಳ ಜೈಲುವಾಸ ಅನುಭವಿಸಿ ಶನಿವಾರ ಬೆಂಗಳೂರಿಗೆ ಮರಳಿದ ಅವರಿಗೆ ಪಕ್ಷದ ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡಿದರು. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜಕೀಯವಾಗಿ ಸಾಕಷ್ಟು ಮಾತನಾಡುವುದಿದೆ; ಮುಂದಕ್ಕೆ ಎಲ್ಲವನ್ನೂ ಹೇಳುತ್ತೇನೆ. ಸತ್ಯ, ನ್ಯಾಯ ಸೂಕ್ತ ಕಾಲದಲ್ಲಿ ಉತ್ತರ ಕೊಡುತ್ತದೆ ಎಂದರು.

Advertisement

ಅನಂತರ ಕೆಪಿಸಿಸಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಇಂಧನ ಸಚಿವ ಆಗಿದ್ದಾಗ ಎಲ್ಲ ಶಾಸಕರಿಗೆ, ಸಂಸದರಿಗೆ ಫೋನ್‌ ಗಿಫ್ಟ್ ಕೊಟ್ಟಿದ್ದೆ. ಮೂರ್ನಾಲ್ಕು ಮಂದಿ ಬಿಟ್ಟರೆ ಉಳಿದವರೆಲ್ಲರೂ ತೆಗೆದುಕೊಂಡಿದ್ದಾರೆ. 50 ಸಾವಿರ ರೂ. ಮೇಲ್ಪಟ್ಟ ಗಿಫ್ಟ್ ತೆಗೆದುಕೊಂಡಿರುವ ಅವರಿಗೆ ಏಕೆ ನೋಟಿಸ್‌ ಕೊಟ್ಟಿಲ್ಲ? ಇದರ ತನಿಖೆ ಆಗುವುದು ಬೇಡವೇ? ಎಂದು ಕುಟುಕಿದರು.

ನಾನು ಯಾವುದೇ ತಪ್ಪು, ಅಕ್ರಮ ಮಾಡಿದ್ದರೆ ನನಗೆ ನೇಣು ಹಾಕಲಿ, ಯಾವುದೇ ಶಿಕ್ಷೆ ನೀಡಲಿ. ಅನುಭವಿಸಲು ಸಿದ್ಧ. ಕಾನೂನು, ದೇವರು ಇರುವಾಗ ನಾನು ಜೈಲು, ತನಿಖಾ ಸಂಸ್ಥೆ ಬಗ್ಗೆ ಮಾತನಾಡುವುದಿಲ್ಲ. ನಾನು ಜೈಲಿನಲ್ಲಿ ಕಾನೂನು ಅಧ್ಯಯನ ಮಾಡಿದ್ದೇನೆ ಎಂದರು.

ನಾನು ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ. ನಾನು ಚುನಾವಣ ಆಯೋಗಕ್ಕೆ ಮಾಹಿತಿ ನೀಡಿದ್ದೇನೆ. ನನ್ನ ಸೋದರ, ನನ್ನ ಪತ್ನಿ ಅಫಿದವಿತ್‌ನಲ್ಲಿ ತಪ್ಪಾಗಿಲ್ಲ. ಪುತ್ರಿಯ ಅಫಿದವಿತ್‌ ಕೂಡ ಕೊಟ್ಟಿದ್ದೇನೆ. ನಮ್ಮ ಅಫಿದವಿತ್‌ ಬಗ್ಗೆ ಕಾನೂನು ಪ್ರಕ್ರಿಯೆ ನಡೆಯುತ್ತಿದೆ ಎಂದರು.

ನಾನು ಕೃಷಿಕನಾಗಿ ಹುಟ್ಟಿ ಬೆಳೆದೆ. ಫ್ಯಾಶನ್‌ ಆಗಿ ರಾಜಕೀಯ ಆಯ್ಕೆ ಮಾಡಿಕೊಂಡೆ. ಯಾರಿಗೂ ನಾನು ಅನ್ಯಾಯ ಮಾಡಿಲ್ಲ. ಅಧಿಕಾರ ಎಲ್ಲರಿಗೂ ಎಲ್ಲ ಅವಧಿಯಲ್ಲಿ ಸಿಗುವುದಿಲ್ಲ. ನಾನು ತಾಳ್ಮೆಯಿಂದ ಹೋರಾಡುತ್ತೇನೆ. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದರು.

Advertisement

ಸೋಲು, ಗೆಲುವು ಸಹಜ
ಶಾಸಕರ ರಕ್ಷಣೆ ಹೊಸದಲ್ಲ. ಹಿಂದೆಯೂ ಪಕ್ಷ ವಹಿಸಿದ್ದ ಕೆಲಸ, ಜವಾಬ್ದಾರಿಯನ್ನು ನಿಭಾ ಯಿಸಿಕೊಂಡು ಬಂದಿದ್ದೇನೆ. ಸೋಲು, ಗೆಲುವು ಸಹಜವಾಗಿ ಸ್ವೀಕರಿಸಿದ್ದೇನೆ. ನಾನು ನನ್ನ ವಿವೇಚನೆಗೆ ವಿರುದ್ಧ ಯಾವತ್ತೂ ನಡೆದುಕೊಂಡಿಲ್ಲ. ಆ.5ರಂದು ಇಡಿ ವಿಚಾರಣೆ ಮುಗಿಸಿ ಬಂದಾಗ ಕೂಡ ಹೇಳಿದ್ದೆ. ನನ್ನ ಮಾತು, ನಿರ್ಧಾರಕ್ಕೆ ಬದ್ಧವಾಗಿದ್ದೇನೆ. ಜನರ ಪ್ರೀತಿ ನನ್ನ ಬೆನ್ನಿಗಿದೆ. ಅದಕ್ಕೆ ಚಿರಋಣಿ. ಅವರ ಋಣ ತೀರಿಸುವ ಗುರಿ ಹೊಂದಿದ್ದೇನೆ. ನನ್ನ ಹೋರಾಟದಲ್ಲಿ ಪಕ್ಷದ ನಾಯಕರು ಸಾಕಷ್ಟು ಸಹಕಾರ ನೀಡಿದ್ದಾರೆ.

ಜೈಲಿನಲ್ಲಿದ್ದಾಗ ಭೇಟಿಗೆ ನನ್ನ ಕುಟುಂಬದವರಿಗೆ ಅವಕಾಶ ನೀಡಲಾಗಲಿಲ್ಲ. ದೇವೇಗೌಡರಿಗೂ ಭೇಟಿಗೆ ಅವಕಾಶ ಸಿಗಲಿಲ್ಲ. ದಿನೇಶ್‌ ಗುಂಡೂರಾವ್‌ ಅವರನ್ನು ಹಿಂದಿನ ಬಾಗಿಲಿನಿಂದ ಕರೆಯಿಸಿ ಭೇಟಿ ಮಾಡಿದೆ. ಡಾ| ಜಿ. ಪರಮೇಶ್ವರ್‌ ಅವರನ್ನು ಡಾಕ್ಟರ್‌ ಎಂದು ಹೇಳಿ ಕರೆಯಿಸಿ ಭೇಟಿ ಮಾಡಿ ಹೋದರು. ಸಿದ್ದರಾಮಯ್ಯ ಅವರಿಗೂ ಭೇಟಿಗೆ ಅವಕಾಶ ಆಗಿಲ್ಲ ಎಂದರು.

ಸೇಬಿನ ಹಾರದ ಸ್ವಾಗತ
ವಿಮಾನ ನಿಲ್ದಾಣದಿಂದ ಮೆರವಣಿಗೆಯಲ್ಲಿ ದಾರಿಯಲ್ಲಿ ಶಿವಕುಮಾರ್‌ಗೆ 2 ಕ್ವಿಂಟಾಲ್‌ಸೇಬಿನಿಂದ ಮಾಡಿದ ಬೃಹತ್‌ ಹಾರವನ್ನು ಕ್ರೇನ್‌ ಮೂಲಕ ಹಾಕಲಾಯಿತು. ಈ ಸಂದರ್ಭದಲ್ಲಿ ಹಾರದಿಂದ ಒಂದು ಸೇಬನ್ನು ತೆಗೆದು ಕಚ್ಚಿ ತಿಂದರು. ಬಳಿಕ ಸೇಬಿನ ಹಾರವನ್ನು ಬೆಂಬಲಿಗರತ್ತ ಹಾಕಿದರು.

ಈ ಸಂದರ್ಭ ವಿಮಾನ ನಿಲ್ದಾಣದಲ್ಲಿ ಹಾಜರಿದ್ದ ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಸ್ವಾಗತಿಸಿದರು. ಕಾಂಗ್ರೆಸ್‌ ನಾಯಕರಾದ ಕೃಷ್ಣ ಬೈರೇಗೌಡ, ಲಕ್ಷ್ಮೀ ಹೆಬ್ಟಾಳ್ಕರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next