ಬಳ್ಳಾರಿ: ಜಿಂದಾಲ್ ಸಂಸ್ಥೆ ಯಾವುದೇ ಅಕ್ರಮ ಎಸಗುತ್ತಿಲ್ಲ. ಎಲ್ಲವೂ ಕಾನೂನಿನ ಚೌಕಟ್ಟಿನಲ್ಲೇ ನಡೆಯುತ್ತಿದೆ. ಜಮೀನು ಪರಭಾರೆ ವಿಷಯದಲ್ಲಿ ಯಾರೋ ಒಬ್ಬರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆಂದರೆ ಆ ಬಗ್ಗೆ ಪ್ರತಿಕ್ರಿಯಿಸಲು ಇಷ್ಟಪಡುವುದಿಲ್ಲ ಎಂದು ಜಿಂದಾಲ್ ಸಮೂಹ ಸಂಸ್ಥೆಯ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈ ಹಿಂದೆ ಕೈಗೊಂಡಿದ್ದ ನಿರ್ಣಯದಂತೆ ಜಮೀನು ಮಾರಾಟ ಮಾಡುತ್ತಿದೆ. ಜಿಂದಾಲ್ ಸಂಸ್ಥೆಯ ಎಲ್ಲ ಕಾರ್ಯಗಳನ್ನು ಕಾನೂನು ಚೌಕಟ್ಟಿನಲ್ಲಿ ನಡೆಸುತ್ತಿದ್ದೇವೆ. ಜಮೀನು ಪರಭಾರೆ ವಿಷಯ ರಾಜಕಾರಣಗೊಳ್ಳುತ್ತಿದ್ದರೆ ಅದರ ಬಗ್ಗೆ ಮಾತನಾಡಲ್ಲ. ರಾಜಕೀಯದಲ್ಲಿ ಇದೆಲ್ಲ ಸಾಮಾನ್ಯ.
ರಾಜ್ಯ ಸರ್ಕಾರ ಜಮೀನು ಮಾರಾಟ ಮಾಡುತ್ತಿರುವ ವಿಷಯದ ಬಗ್ಗೆ ಚರ್ಚೆ ಮಾಡಲು ಇಷ್ಟವಿಲ್ಲ. ನಾವು ಅಕ್ರಮವಾಗಿ ಜಮೀನು ಪಡೆದಿಲ್ಲ. ಪಡೆಯೋ ಕೆಲಸವನ್ನೂ ಮಾಡುತ್ತಿಲ್ಲ. ಇದರಲ್ಲಿ ರಾಜಕೀಯ ಮಾಡೋದು ಸಂಸ್ಥೆಗೆ ಅಗತ್ಯವಿಲ್ಲ ಎಂದರು.
ಜಮೀನು ಪರಭಾರೆಗೆ ಸಂಬಂ ಧಿಸಿ ಮಾಜಿ ಸಚಿವ ಎಚ್.ಕೆ. ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಜ್ಜನ್, “ಆಕ್ಷೇಪ ವ್ಯಕ್ತಪಡಿಸಿದವರು ಯಾರೆಂದು ನನಗೆ ಗೊತ್ತಿಲ್ಲ. ಕೆಲವರು ಮಾತ್ರ ಈ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಮಾತನಾಡೋ ಹಕ್ಕಿದೆ. ಅದೇ ಪ್ರಜಾಪ್ರಭುತ್ವದ ವೈಶಿಷ್ಟ. ಅಲ್ಲದೇ ಸಂಸ್ಥೆಯಿಂದ ರಾಜ್ಯಕ್ಕೆ, ರಾಜ್ಯದ ಜನರಿಗೆ ಯಾವುದೇ ಅನಾನುಕೂಲವಾಗಿಲ್ಲ’ ಎಂದರು.
ಎಫ್‌ಕೆಸಿಸಿಐ ಅಧ್ಯಕ್ಷ ಸುಧಾಕರ ಶೆಟ್ಟಿ ಮಾತನಾಡಿ, ಜಿಂದಾಲ್ ಸಂಸ್ಥೆಗೆ ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ಜಮೀನು ಮಾರಾಟ ಮಾಡಬೇಕು. ಇಲ್ಲದಿದ್ದಲ್ಲಿ ರಾಜ್ಯದಲ್ಲಿ ಇತರ ಉದ್ಯಮಗಳನ್ನು ಸ್ಥಾಪನೆ ಮಾಡಲು ಯಾರೂ ಮುಂದೆ ಬರುವುದಿಲ್ಲ. ಆದ್ದರಿಂದ ಸರ್ಕಾರ ಈ ಹಿಂದೆ ಕೈಗೊಂಡ ನಿರ್ಣಯದಂತೆ ಜಮೀನು ಪರಭಾರೆ ಮಾಡಿಕೊಡಬೇಕು ಎಂದರು.