ಗಂಟೆ ಏಳೂ ಮುಕ್ಕಾಲು. ಶಾಲೆಯ ಬಸ್ಸು ಬರುವ ಸಮಯ. ಅಡುಗೆ ಕೆಲಸಗಳನ್ನೆಲ್ಲ ಪೂರೈಸಿ ಅಮ್ಮ ಶ್ಯಾಮಲಳನ್ನು ಕರೆದರು, “ಪುಟ್ಟಿ ಬೇಗ ತಯಾರಾಗು. ಶಾಲೆಯ ಬಸ್ಸು ಬರುವ ಸಮಯ.’ ಶ್ಯಾಮಲಳಿಂದ ಉತ್ತರ ಬರಲಿಲ್ಲ. ಅಮ್ಮನಿಗೆ ಆಶ್ಚರ್ಯವಾಯಿತು. “ಪುಟ್ಟಿ’ ಎನ್ನುತ್ತ ಹಾಲಿಗೆ ಬಂದರು. ಶ್ಯಾಮಲಾ ಪುಟ್ಟಿ ಕಾಣಿಸಲಿಲ್ಲ. ಹಾಲಿನ ಸೋಫಾದಲ್ಲಿ ಶಾಲೆಯ ಚೀಲ ಇತ್ತು. “ಶ್ಯಾಮಲಾ ಎಲ್ಲಿ ಹೋದೆ’ ಎಂದರು ಜೋರಾಗಿ. ಉತ್ತರ ಬರಲಿಲ್ಲ. ಗಾಬರಿಯಾಯಿತು. ಮನೆಯಿಂದ ಹೊರಬಂದು ಗೇಟಿನ ಬಳಿ ನೋಡಿದರು. ಅಲ್ಲೂ ಶ್ಯಾಮಲಾ ಪತ್ತೆ ಇಲ್ಲ!
ಅಪ್ಪ ಸೋಫಾದ ಮೇಲೆ ಕುಳಿತು, ಪೇಪರು ಓದುತ್ತಿದ್ದರು. “ಶ್ಯಾಮಲಾ ಕಾಣಿಸ್ತಿಲ್ಲ. ನನಗೇಕೋ ಭಯ ಆಗುತ್ತೇರೀ.’ “ಸರಿಯಾಗಿ ನೋಡು. ಇಲ್ಲೇ ಇರ್ತಾಳೆ. ಎಲ್ಲಿಗೆ ಹೋಗ್ತಾಳೆ.’ “ಎಲ್ಲ ಕಡೆ ನೋಡಿದೇರೀ ಕಾಣಿಸ್ತಿಲ್ಲ. ಸ್ಕೂಲು ಬ್ಯಾಗು ಇಲ್ಲೇ ಇದೆ. ಆದರೆ ಪುಟ್ಟಿ ಇಲ್ಲ!’ ಅಪ್ಪ ಕೂಡ ಹುಡುಕಿದರು. “ಶೂ ಇಲ್ಲ! ಯೂನಿಫಾರ್ಮ್ ಕೂಡ ಇಲ್ಲ ! ಸ್ನೇಹಿತರ ಮನೆಗೆ ಹೋಗುವ ಸಮಯ ಇದಲ್ಲ. ಎಲ್ಲಿಗೆ ಹೋದರೂ ಹೇಳಿ ಹೋಗ್ತಾಳೆ.’ ಮತ್ತೆ ಮತ್ತೆ ಅಮ್ಮ ಶ್ಯಾಮಲಳ ಹೆಸರನ್ನು ಕೂಗಿ ಕರೆದರು. ಉತ್ತರ ಬರಲಿಲ್ಲ. “ರೀ ನಾವು ಪುಟ್ಟಿàಗೆ ಹುಟ್ಟುಹಬ್ಬಕ್ಕೆ ಕೊಡಿಸಿದ ಸೈಕಲ್ ಕೂಡ ಕಾಣಿಸ್ತಿಲ್ಲ’ ಎಂದರು ಅಮ್ಮ. “ಹಾಗಾದರೆ ಶಾಲೆಗೆ ಬೈಸಿಕಲ್‌ನಲ್ಲೇ ಹೋಗಿರಬೇಕು’ ಎಂದರು ಅಪ್ಪ.
ಅಷ್ಟು ಹೊತ್ತಿಗೆ ಶಾಲೆಯ ಬಸ್ಸು ಬಂದು ಎರಡೆರೆಡು ಬಾರಿ ಹಾರ್ನ್ ಮಾಡಿ ಉತ್ತರಕ್ಕೆ ಕಾಯದೆ ಹೊರಟು ಹೋಯಿತು. “ಶಾಲೆಯ ಬಸ್ಸೂ ಹೋಯಿತಲ್ಲ. ಈಗೇನು ಮಾಡೋದು? ಶಾಲೆಯಲ್ಲಿ ವಿಶ್ವ ಪರಿಸರ ದಿನ ಇದೆ ಅಂತ ಹೇಳ್ತಿದ್ದಳು.’ ಶಾಲೆಗೆ ಪೋನ್ ಮಾಡಿ ನೋಡ್ತೇನೆ ಎನ್ನುತ್ತ ಶಾಲೆಯ ನಂಬರಿಗೆ ಪೋನು ಮಾಡಿ ವಿಚಾರಿಸಿದರು ಅಮ್ಮ. “ಯಾರು? ಇನ್ನೂ ಬಸ್ಸುಗಳು ಬಂದಿಲ್ಲ. ಆಮೇಲೆ ಫೋನ್ ಮಾಡಿ.’ ಎಂದರು ಸ್ಕೂಲಿನವರು.
ಅಸಹಾಯಕತೆಯಿಂದ ಅಮ್ಮ ಅಪ್ಪನತ್ತ ನೋಡಿದರು. ಸಹಜ ಕಾಳಜಿ ಹಾಗು ಗಾಬರಿಯಿಂದ ಕಣ್ಣಲ್ಲಿ ಹನಿಗೂಡಿತು. “ಈಗ ಏನ್ರೀ ಮಾಡೋಡು?’ “ಬಾ. ಶಾಲೆಯ ಬಳಿಗೆ ಹೋಗಿ ವಿಚಾರಿಸೋಣ.’ ಅಮ್ಮ ಅಪ್ಪ ಶಾಲೆಯನ್ನು ತಲುಪಿದರು. ಶಾಲೆಯ ದೊಡ್ಡ ಗೇಟು ಹಾಕಿತ್ತು. ಪ್ರಾಂಗಣದ ಮೂಲೆಯಲ್ಲಿದ್ದ ವೇದಿಕೆಯ ಮೇಲೆ ಕಾರ್ಯಕ್ರಮ ನಡೆಯುತ್ತಿತ್ತು. ಮಕ್ಕಳನ್ನೆಲ್ಲ ಸಾಲಾಗಿ ಶಿಸ್ತಿನಿಂದ ಕೂರಿಸಿದ್ದರು. ಅಪ್ಪ ಅಮ್ಮ ಆತಂಕದಿಂದ ಸುತ್ತಲೂ ನೋಡಿದರು. ಶ್ಯಾಮಲಾ ಕಾಣಿಸಲಿಲ್ಲ.
ಕೊನೆಯಲ್ಲಿ ಕಾರ್ಯಕ್ರಮದ ಉದ್ಘೋಷಕಿ ರಮಾ ಟೀಚರ್ ಮೈಕಿನಲ್ಲಿ ಮಾತು ಮುಂದುವರೆಸಿದ್ದರು, “ಮಕ್ಕಳೇ, ನಿಮಗೆ ವಿಶ್ವ ಪರಿಸರ ದಿನವನ್ನು ಭಿನ್ನವಾಗಿ ಆಚರಿಸಬೇಕೆಂದು ಒಂದು ವಿಶೇಷ ಸಲಹೆ ನೀಡಿದ್ದೆವು. ತೀರ ಭಿನ್ನವಾಗಿ, ಶಿಷ್ಟವಾಗಿ ಆಚರಿಸುತ್ತಿರುವ ಮಕ್ಕಳ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಪಡೆದವರು ನಾಲ್ಕನೇ ತರಗತಿಯ ಶ್ಯಾಮಲಾ ಪ್ರಕಾಶ್.’ ಶ್ಯಾಮಲಾಳನ್ನು ವೇದಿಕೆಗೆ ಕರೆತರಲಾಯಿತು. “ಶ್ಯಾಮಲಾ, ನಿನ್ನ ಪರಿಸರ ದಿನಾಚರಣೆಯ ವೈಶಿಷ್ಟ್ಯವೇನು?’ಎಂದು ರಮಾ ಟೀಚರ್ ಕೇಳಿದರು.
“ಹುಟ್ಟುಹಬ್ಬಕ್ಕೆ ಅಪ್ಪ ಅಮ್ಮ ನನಗೊಂದು ಬೈಸಿಕಲ್ ತಂದು ಕೊಟ್ಟರು. ನಾನು ಇಂದಿನಿಂದ ಶಾಲೆಗೆ ಸೈಕಲ್ಲಿನಲ್ಲಿಯೇ ಬರುವುದೆಂದು ತೀರ್ಮಾನಿಸಿ ಬಂದೆ.’ “ನಿನ್ನ ಕೈಯಲ್ಲಿರುವ ನೋಟ್ ಪುಸ್ತಕ ಏನದು?’ “ಇಂದಿನಿಂದ ನನ್ನ ಶಾಲಾ ಚೀಲದ ಹೊರೆಯನ್ನು ಕಡಿಮೆ ಮಾಡಲೇಬೇಕೆಂದು ತೀರ್ಮಾನಿಸಿ ಕೇವಲ ಒಂದು ನೋಟ್‌ಬುಕ್ಕನ್ನು ತಂದಿದ್ದೇನೆ. ಶಾಲೆಯಲ್ಲಿ ಬರೆದುದನ್ನೆಲ್ಲ ಮನೆಗೆ ಹೋಗಿ ಬರೆಯುವೆ.’ ಶ್ಯಾಮಲಾ ಪುಟ್ಟಿಯ ಮಾತುಗಳನ್ನು ಕೇಳುತ್ತಿದ್ದಂತೆ, ಶಾಲೆಯ ಗೇಟಿನ ಹೊರಗಿದ್ದ ಅಮ್ಮನ ಕಣ್ಣುಗಳಲ್ಲಿ ಹನಿಗೂಡಿದವು.
ಮತ್ತೂರು ಸುಬ್ಬಣ್ಣ