Advertisement

ಫಲಾನುಭವಿಗಳಿಗೆ ತಲುಪುತ್ತಿಲ್ಲ ಮಾಸಾಶನ

12:49 PM May 01, 2019 | Team Udayavani |

ಬ್ಯಾಡಗಿ: ಸಾಮಾಜಿಕ ಭದ್ರತೆ ಯೋಜನೆಯಡಿ ಮಾಸಾಶನ ಪಡೆಯುತ್ತಿರುವ ಫಲಾನುಭವಿಗಳಿಗೆ ಪ್ರತಿ ತಿಂಗಳು ಸರಿಯಾಗಿ ಹಣ ತಲುಪುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಈ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ತನಿಖಾಧಿಕಾರಿ ಸಿ.ಪಿ.ಆಡೂರ ಎಚ್ಚರಿಸಿದರು.

Advertisement

ಅಣ್ಣಾ ಹಜಾರೆ ಭ್ರಷ್ಟಾಚಾರ ವಿರೋಧಿ ಜನಾಂದೋಲನ ಜಿಲ್ಲಾ ಘಟಕ ಲಿಖೀತ ದೂರು ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ಅಂಚೆ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲೇ ಉತ್ತಮ ಇತಿಹಾಸ ಹೊಂದಿರುವ ಅಂಚೆ ಇಲಾಖೆಗೆ ಮಸಿಬಳಿಯುವಂಥ ಕೆಲಸ ಕೆಲವು ಪೋಸ್ಟ್‌ಮನ್‌ಗಳಿಂದಾಗುತ್ತಿದೆ. ಈ ವಿಷಯದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಸರ್ಕಾರದಿಂದ ಬಿಡುಗಡೆಗೊಳಿಸಿದ ಹಣವು ಸಮರ್ಪಕವಾಗಿ ತಲುಪಿಸುವ ಉದ್ದೇಶದಿಂದಲೇ ಅಂಚೆ ಇಲಾಖೆಯನ್ನು ಆಯ್ಕೆ ಮಾಡಿಕೊಂಡು ತನ್ಮೂಲಕ ಫಲಾನುಭವಿಗಳಿಗೆ ಹಣ ವಿತರಿಸಲಾಗುತ್ತಿದೆ. ಅದಾಗ್ಯೂ ಸಹ ನಿಯತ್ತಿಗೆ ಹೆಸರಾದಂತಹ ಅಂಚೆ ಇಲಾಖೆಯ ಮೇಲೆಯೇ ಸಾರ್ವಜನಿಕರು ದೂರು ನೀಡುವಂತಹ ಸ್ಥಿತಿ ಬಂದೊದಗಿರುವುದು ದುರದೃಷ್ಟಕರ ಸಂಗತಿ ಎಂದರು.

ಜಿಲ್ಲಾ ಘಟಕದ ಸಂಚಾಲಕ ಹಾಗೂ ಮಾಜಿ ಸೈನಿಕ ಮಲ್ಲೇಶಪ್ಪ ಚಿಕ್ಕಣ್ಣನವರ ಮಾತನಾಡಿ, ಅಂಚೆ ಇಲಾಖೆಯಲ್ಲಿ ಪಾರದರ್ಶಕತೆ ಮಾಯವಾಗಿದೆ. ವಯೋವೃದ್ಧರು, ವಿಕಲಚೇತನರು, ವಿಧವೆಯರಲ್ಲಿ ಬಹುತೇಕರು ಅನಕ್ಷರಸ್ಥರಾಗಿದ್ದಾರೆ. ಇದನ್ನೇ ದೌರ್ಬಲ್ಯವೆಂದು ಭಾವಿಸಿಕೊಂಡ ಅಂಚೆ ಇಲಾಖೆ ಸಿಬ್ಬಂದಿ ಪ್ರತಿ ತಿಂಗಳು ಹಣ ವಿತರಿಸದೇ ಮೂರ್‍ನಾಲ್ಕು ತಿಂಗಳಿಗೊಮ್ಮೆ ನೀಡುವ ಮೂಲಕ ಮೋಸವೆಸಗುತ್ತಿದ್ದಾರೆ ಎಂದು ದೂರಿದರು.

ಫರೀದಾಬಾನು ನದೀಮುಲ್ಲಾ, ಸುರೇಶ ಛಲವಾದಿ ಮಾತನಾಡಿ, ಯಾವ ತಿಂಗಳ ಹಣವನ್ನು ಪಡೆಯುತ್ತಿದ್ದೇವೆ ಎಂಬ ಮಾಹಿತಿ ಫಲಾನುಭವಿಗಳಿಗೆ ಮಾಹಿತಿ ಇಲ್ಲದಂತಾಗಿದೆ. ಹೀಗಾಗಿ ಫಲಾನುಭವಿಗಳ ಎರಡ್ಮೂರು ತಿಂಗಳ ಹಣ ಪೋಸ್ಟ್‌ಮನ್‌ರ ಜೇಬುಗಳಲ್ಲಿ ಉಳಿಯುತ್ತಿದೆ ಎಂದರು. ವಿಕಲಚೇತನರ ಸಂಘದ ತಾಲೂಕಾಧ್ಯಕ್ಷ ಪಾಂಡು ಸುತಾರ, ಅಂಚೆ ಕಚೇರಿಯ ಪೋಸ್ಟ್‌ ಮಾಸ್ಟರ್‌ ಎಚ್.ಯು. ಹಿತ್ತಲಮನಿ, ಎಸ್‌.ಎಂ. ಕೊರಕಲಿ, ಪಿರಾಂಬಿ, ಗುತ್ತೆವ್ವ ಹರಿಜನ ಹಾಗೂ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next