Advertisement

8 ತಿಂಗಳಾದ್ರೂ ಸಂಬಳ ಕೊಟ್ಟಿಲ್ಲ

03:34 PM May 29, 2019 | Team Udayavani |

ಟೇಕಲ್: ರಾಜ್ಯ ಸರ್ಕಾರ 8 ತಿಂಗಳುಗಳಿಂದ ಗ್ರಾಮ ಪಂಚಾಯ್ತಿ ನೌಕರರಿಗೆ ವೇತನ ಬಿಡುಗಡೆ ಮಾಡದ ಕಾರಣ, ಹಸಿದ ಹೊಟ್ಟೆಯಲ್ಲಿ ಕಾರ್ಯನಿರ್ವಹಿಸುವಂತಾಗಿದೆ. ಕುಟುಂಬ ನಿರ್ವಹಣೆ ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

Advertisement

ಗ್ರಾಪಂಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಡಾಟಾ ಆಪರೇಟರ್‌, ಕರವಸೂಲಿಗಾರರು, ನೀರಗಂಟಿ, ಕಚೇರಿ ಸಹಾಯಕರಿಗೆ ಸರ್ಕಾರ 8 ತಿಂಗಳಿಂದ ವೇತನ ಬಿಡುಗಡೆ ಮಾಡಿಲ್ಲ. ವೇತನ ಯಾವಾಗ ಬಿಡುಗಡೆಯಾಗುತ್ತದೆ ಎಂದು ಚಾತಕ ಪಕ್ಷಯಂತೆ ಕಾಯುತ್ತಿದ್ದಾರೆ.

ಅಲ್ಲದೆ, ಈಗ ಶಾಲಾ ಕಾಲೇಜುಗಳು ಪ್ರಾರಂಭವಾಗಿದೆ. ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಪುಸ್ತಕ, ಪೆನ್ನು, ಬ್ಯಾಗು ಮತ್ತು ಶಾಲಾ ಫೀಜು ಮುಂತಾದ ಹಣ ಕಟ್ಟಲು ಹಣವಿಲ್ಲದೆ ಪರದಾಡುತ್ತಿದ್ದಾರೆ. ಹಲವು ನೌಕರರು ಸಂಬಳವನ್ನೇ ನಂಬಿ ಕೆಲಸ ಮಾಡುತ್ತಿದ್ದಾರೆ.

ಇನ್ನೂ ಕೆಲವರು ಸ್ನೇಹಿತರ ಬಳಿ, ಕಿರಾಣಿ ಅಂಗಡಿಗಳಲ್ಲಿ ದಿನಸಿ ಸಾಲ ತಂದು ಕುಟುಂಬ ಪೋಷಣೆ ಮಾಡುತ್ತಿದ್ದಾರೆ. ಅಂಗಡಿಗಳಲ್ಲೂ ಸಾಮಗ್ರಿ ತಂದ ಲೆಕ್ಕ ಗಗನಕ್ಕೇರಿದೆ.

ಇದರಿಂದ ಅವರೂ ಸರಿಯಾದ ಸಮಯಕ್ಕೆ ವಸ್ತುಗಳನ್ನು ಕೊಡುತ್ತಿಲ್ಲ. ಕೆಲವರ ಸಾಲ ಜಾಸ್ತಿಯಾಗಿರುವುದರಿಂದ ಕಚೇರಿಗೆ ಬರುವುದು, ಇಲ್ಲ ಅವರಿಂದ ತಪ್ಪಿಸಿಕೊಳ್ಳಲು ನೌಕರರು ಬರುವ ಮಾರ್ಗಗಳನ್ನೇ ಬದಲಿಸಿ ಹೋಗುವುದು ಬರುವುದು ಮಾಡುತ್ತಿದ್ದಾರೆ.

Advertisement

ಈಗ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾಲ ಕೊಡುವವರೂ ಇಲ್ಲ, ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದೋ ಬಿಡುವುದೋ ಎಂಬ ಚಿಂತೆಯಲ್ಲಿದ್ದಾರೆ. ಪಂಚಾಯ್ತಿ ನೌಕರರು ರಜಾ ದಿನಗಳಲ್ಲಿ ಬೇರೆ ಕೆಲಸ ಮಾಡುವುದಕ್ಕೂ ಆಗುತ್ತಿಲ್ಲ.

ಇಲ್ಲಿ ಕೆಲಸ ಮಾಡಿದರೆ ಸರ್ಕಾರ ಸಮಯಕ್ಕೆ ಸರಿಯಾಗಿ ಸಂಬಳ ಬಿಡುಗಡೆಯಾಗುತ್ತಿಲ್ಲ, ಇದರಿಂದ ನೌಕರರ ಸ್ಥಿತಿ ಡೋಲಾಯಮಾನವಾಗಿ ಕಾಸಿಗಾಗಿ ಪರದಾಡುವ ಪ್ರಸಂಗ ತಲೆದೋರಿದೆ.

ಸರ್ಕಾರ ಈಗಲಾದರೂ ಪಂಚಾಯ್ತಿ ನೌಕರರಿಗೆ ಬಾಕಿ ಇರುವ ವೇತನವನ್ನು ಶೀಘ್ರ ಬಿಡುಗಡೆ ಮಾಡಿ ಅವರ ಕುಟುಂಬಗಳವರು ತುಂಬು ಹೊಟ್ಟೆ ತುಂಬ ಊಟ ಮಾಡಲು ಮತ್ತು ಅವರ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ನೆರವಾಗುವುದರ ಜೊತೆಗೆ ಪಂಚಾಯ್ತಿ ನೌಕರರ ಕುಟುಂಬಗಳಲ್ಲಿರುವ ವೃದ್ಧರು ಅಥವಾ ರೋಗಿಗಳ ಔಷಧೋಪಚಾರಕ್ಕೆ ಆಸ್ಪತ್ರೆ ಖರ್ಚಿಗೆ ಹಣ ಸಹಾಯವಾದಂತೆ ಆಗಿಸಲು ಪ್ರಯತ್ನಿಸುತ್ತದೆಂದು ನೊಂದ ನೌಕರರು ಸರ್ಕಾರಕ್ಕೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಸರ್ಕಾರ ಬಡ ಗ್ರಾಮ ಪಂಚಾಯ್ತಿ ನೌಕರರ ನೋವಿಗೆ ಸ್ಪಂದಿಸಿ ಸಹಾಯ ಮಾಡಲು ಯತ್ನಿಸುವುದೇ ಎಂಬುದು ಕಾದು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next