Advertisement

Karkare ಯನ್ನು ಕೊಂದಿದ್ದು ಕಸಬ್‌ ಅಲ್ಲ,RSS ನಂಟಿದ್ದ ಪೊಲೀಸ್‌: ಕಾಂಗ್ರೆಸ್‌ ನಾಯಕ

01:04 AM May 06, 2024 | Team Udayavani |

ಮುಂಬಯಿ: “26/11 ಮುಂಬಯಿ ಉಗ್ರ ದಾಳಿಯ ವೇಳೆ ಉಗ್ರ ನಿಗ್ರಹ ಪಡೆ(ಎಟಿಎಸ್‌) ಮುಖ್ಯಸ್ಥ ಹೇಮಂತ್‌ ಕರ್ಕರೆ ಸತ್ತಿದ್ದು, ಪಾಕ್‌ ಉಗ್ರ ಅಜ್ಮಲ್‌ ಕಸಬ್‌ ಗುಂಡಿನಿಂದಲ್ಲ. ಬದಲಿಗೆ ಆರ್‌ಎಸ್‌ಎಸ್‌ ನಂಟು ಹೊಂದಿದ್ದ ಪೊಲೀಸ್‌ ಅಧಿಕಾರಿಯಿಂದ’ ಎಂ ದು ಹೇಳುವ ಮೂಲಕ ಮಹಾರಾಷ್ಟ್ರದ ವಿಪಕ್ಷ ಹಾಗೂ ಕಾಂಗ್ರೆಸ್‌ ನಾಯಕ ವಿಜಯ್‌ ನಾಮದೇವರಾವ್‌ ವಡೇಟ್ಟಿವಾರ್‌ ವಿವಾದದ ಕಿಡಿ ಹೊತ್ತಿಸಿದ್ದಾರೆ. ಕಾಂಗ್ರೆಸ್‌ ನಾಯಕನ ಹೇಳಿಕೆಯನ್ನು ಬಿಜೆಪಿ ಉಗ್ರವಾಗಿ ಖಂಡಿಸಿದೆ.

Advertisement

ಮುಂಬಯಿ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಜ್ವಲ್‌ ನಿಕಂ ವಿರುದ್ಧ ಹರಿಹಾಯ್ದಿರುವ ವಡೇಟ್ಟಿವಾರ್‌, “”ನಿಕಂ ಬಿರಿಯಾನಿ ವಿಷಯವನ್ನು ಪ್ರಸ್ತಾವಿಸಿ ಕಾಂಗ್ರೆಸ್‌ ತೇಜೋವಧೆ ಮಾಡಿದರು. ಯಾರಾದರೂ ಅಪರಾಧಿಗೆ ಬಿರಿಯಾನಿ ಕೊಡುತ್ತಾರೆಯೇ? ತಾವು ಹೇಳಿದ್ದು ಸುಳ್ಳು ಎಂದ ನಿಕಂ ಬಳಿಕ ಒಪ್ಪಿಕೊಂಡಿದ್ದಾರೆ. ನಿಕಂ ದೇಶದ್ರೋಹಿ ವಕೀಲ. ತಮ್ಮ ಹೇಳಿಕೆಯನ್ನು ಕೋರ್ಟ್‌ನಲ್ಲಿ ಸಾಕ್ಷೀಕರಿಸಲಿಲ್ಲ. ಕರ್ಕರೆ ಸತ್ತಿದ್ದು ಕಸಬ್‌ ಹಾರಿಸಿದ ಬುಲೆಟ್‌ ಅಲ್ಲ. ಬದಲಿಗೆ ಆರ್‌ಎಸ್‌ಎಸ್‌ ನಂಟಿರುವ ಪೊಲೀಸ್‌ ಅಧಿಕಾರಿಯ ಹಾರಿಸಿದ ಗುಂಡಿನಿಂದ. ಈ ಸತ್ಯವನ್ನು ಕೋರ್ಟ್‌ನಿಂದ ಮುಚ್ಚಿಟ್ಟಿರುವ ವ್ಯಕ್ತಿಗೆ ಬಿಜೆಪಿ ಟಿಕೆಟ್‌ ನೀಡುತ್ತದೆ ಎಂದಾದರೆ, ಬಿಜೆಪಿ ಏಕೆ ಈ ದೇಶದ್ರೋಹಿಗಳಿಗೆ ಬೆಂಬಲಿಸುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ” ಎಂದಿದ್ದರು.

ನಿಕಂ ಅವರು ಕಸಬ್‌ ಪ್ರಕರಣದಲ್ಲಿ ಸರಕಾರಿ ವಕೀಲರಾಗಿದ್ದರು. ತಮ್ಮ ಹೇಳಿಕೆ ವಿವಾ ದಕ್ಕೆ ಕಾರಣವಾಗುತ್ತಿದ್ದಂತೆ ವಡೇಟ್ಟಿವಾರ್‌, ತಾನು ಪೊಲೀಸ್‌ ಅಧಿಕಾರಿ ಎಸ್‌.ಎಂ. ಮುಶ್ರಿಫ್ ಬರೆದ “ಹೂ ಕಿಲ್ಡ್‌ ಕರ್ಕರೆ?’ ಪುಸ್ತಕದಲ್ಲಿರುವುದನ್ನು ಪ್ರಸ್ತಾವಿಸಿದ್ದೇನೆ ಎಂದಿದ್ದಾರೆ.

ಬಿಜೆಪಿ ಕೆಂಡ: ಓಟ್‌ ಬ್ಯಾಂಕ್‌ಗಾಗಿ ಕಾಂಗ್ರೆಸ್‌ ಯಾವ ಕೀಳುಮಟ್ಟಕ್ಕಾದರೂ ಇಳಿಯುತ್ತದೆ. ವಡೇಟ್ಟಿವಾರ್‌ ಕಸಬ್‌ಗ ಕ್ಲೀನ್‌ಚಿಟ್‌ ನೀಡಿದ್ದಾರೆ. ಉಗ್ರರಿಗೆ ಬೆಂಬಲ ನೀಡುತ್ತಿರುವುದಕ್ಕೆ ಕಾಂಗ್ರೆಸ್‌ಗೆ ನಾಚಿಕೆಯಾಗುವುದಿಲ್ಲವೇ? ಪಾಕಿಸ್ಥಾನ‌ ಏಕೆ ಕಾಂಗ್ರೆಸ್‌ ಗೆಲ್ಲಬೇಕು ಎಂದು ಬಯಸುತ್ತಿದೆ ಎಂದು ಇವತ್ತು ಇಡೀ ದೇಶಕ್ಕೆ ಗೊತ್ತಾಯಿತು ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್‌ ತಾಬ್ಡೆ ಹೇಳಿದ್ದಾರೆ.

ಪಾಕಿಸ್ಥಾನ‌ಕ್ಕೆ ಸಹಾಯವಾಗುವ ಆಧಾರರಹಿತ ಹೇಳಿಕೆ ನೀಡಿರುವ ಬೇಜವಾಬ್ದಾರಿ ವಿಪಕ್ಷ ನಾಯಕ ಬಗ್ಗೆ ನನಗೆ ಕನಿಕರವಿದೆ. ಯಾವ ಆಧಾರದ ಮೇಲೆ ಅವರು ಈ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ. ರಾಜ ಕಾರಣದಲ್ಲಿದ್ದು ದೇಶದ ಗೌರವವನ್ನು ಹಾಳು ಮಾಡುತ್ತಿರುವುದು ಆಶ್ಚರ್ಯ ತರಿಸುತ್ತದೆ.
ಉಜ್ಜಲ್‌ ನಿಕಂ, ಮುಂಬಯಿ ಉತ್ತರ ಬಿಜೆಪಿ ಅಭ್ಯರ್ಥಿ

Advertisement
Advertisement

Udayavani is now on Telegram. Click here to join our channel and stay updated with the latest news.

Next