Advertisement

ಬರೀ ಮಣ್ಣು ಅನ್ನದಿರಿ! ಪಾಯದಿಂದ ಹಿಡಿದು ಅಡಿ ಅಡಿಗೂ ಮಣ್ಣೇ ಹೊನ್ನು

07:20 AM Sep 11, 2017 | Harsha Rao |

ಸಾವಿರಾರು ವರ್ಷಗಳಿಂದ ನಮ್ಮಲ್ಲಿ ಮನೆ ಕಟ್ಟಲು ಬಹು ಹೆಚ್ಚಾಗಿ ಬಳಕೆಯಲ್ಲಿದ್ದದ್ದು ಮಣ್ಣು, ಈಗಲೂ ಕೂಡ ನಮ್ಮಲ್ಲಿ ದಶಕಗಳ ಹಿಂದೆ ಕಟ್ಟಿದ ಮಣ್ಣಿನ ಮನೆಗಳು ಸದೃಢವಾಗಿರೋದು ಇದೇ ಕಾರಣಕ್ಕೆ. ಲಕ್ಷಾಂತರ ಜನ ಇವುಗಳಲ್ಲಿ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಸಿಮೆಂಟ್‌ ಎಂಬ ವಸ್ತು ಸರ್ವವ್ಯಾಪಿಯಾಗಿ ಬಳಕೆಯಲ್ಲಿ ಬಂದನಂತರ ನಾವು ನಮ್ಮ ಮೂಲ ಸೊಗಡನ್ನು- ಅರ್ಥಾತ್‌ ಮಣ್ಣಿನ ವಾಸನೆಯನ್ನೇ ಮರೆತು ಕೃತಕ ಕಾಡಿನಲ್ಲಿ ಜೀವಿಸುವಂತಾಗಿದೆ. ಆದರೆ ಈಗಲೂ ಕೂಡ ಮಣ್ಣನ್ನು ಸೂಕ್ತ ರೀತಿಯಲ್ಲಿ ಬಳಸಿ ನಮ್ಮ ಮನೆಗಳನ್ನು ಅತಿ ಸುಂದರ, ಆರೋಗ್ಯಕರ ಹಾಗೂ ಕಡಿಮೆ ಬೆಲೆಗೆ ಕಟ್ಟಿಕೊಳ್ಳಬಹುದಾಗಿದೆ.

Advertisement

ಗೋಡೆಗಳಲ್ಲಿ ಮಣ್ಣಿನ ಬಳಕೆ
“ಸಾಯಿಲ್‌ ಸಿಮೆಂಟ್‌ ಬ್ಲಾಕ್ಸ್‌’ – ಮಣ್ಣಿಗೆ ಸ್ವಲ್ಪ ಸಿಮೆಂಟ್‌ ಬೆರೆಸಿ ಒತ್ತಡ ಹೇರಿ ತಯಾರಿಸುವ ಇಟ್ಟಿಗೆಗಳು ಪರಿಸರ ಪ್ರೇಮಿ ಮನೆ ಕಟ್ಟಬಯಸುವವರ ಅಚ್ಚುಮೆಚ್ಚಿನ ವಸ್ತುವೇ ಸರಿ. ಒಣ ಮಣ್ಣನ್ನು ಜರಡಿ ಹಿಡಿದು ಅದರ ಗುಣ ಆಧರಿಸಿ ಸುಮಾರು ಐದರಿಂದ ಹತ್ತು ಪ್ರತಿಶತ ಸಿಮೆಂಟ್‌ ಬೆರೆಸಿ ಮಿಶ್ರಣ ಮಾಡಿ ನಂತರ ನೀರು ಹಾಕಿ ಕಲಸಿ ಅಚ್ಚುಗಳಲ್ಲಿ ಒತ್ತಡ ಹೇರಿ ತಯಾರಾಗುವ ಈ ಇಟ್ಟಿಗೆಗಳು ಸಾಕಷ್ಟು ಗಟ್ಟಿಯಾಗಿರುತ್ತವೆ. ಇವಕ್ಕೆ ಪ್ಲಾಸ್ಟರ್‌ ಕೂಡ ಅಗತ್ಯವಾಗಿರುವುದಿಲ್ಲ. ಅದಕ್ಕೆ ಇಲ್ಲೂ ದುಡ್ಡು ಉಳಿಸಬಹುದು.

ನಿಮ್ಮಲ್ಲಿ ಉತ್ತಮ ಸುಣ್ಣ ಸಿಗುವಂತಿದ್ದರೆ, ಈ ಮಿಶ್ರಣಕ್ಕೆ ಒಂದು ಪಾಲು ಬೆರೆಸಿ ಮತ್ತೂ ಉತ್ತಮ ಬಣ್ಣ, ಗುಣಧರ್ಮಗಳನ್ನು ಹೊಂದಿರುವ ಇಟ್ಟಿಗೆಗಳನ್ನು ತಯಾರಿಸಬಹುದು. ಅದರಲ್ಲೂ ನಿಮ್ಮ ಜಮೀನಿನ ಮಣ್ಣು ಸೂಕ್ತವಾಗಿದ್ದಲ್ಲಿ, ಇಡೀ ಮನೆ ಕಟ್ಟಲು ಹೊರಗಿನಿಂದ ಸುಟ್ಟ ಇಟ್ಟಿಗೆಗಳನ್ನು ತರುವ ಅಗತ್ಯವೇ ಇರುವುದಿಲ್ಲ.

ಸಿಮೆಂಟ್‌ ಗಾರೆಹಾಕಿ ಇಟ್ಟಿಗೆ ಗೋಡೆಗಳನ್ನು ಕಟ್ಟಿದಾಗ, ಮರಳು ದಪ್ಪವಾಗಿದ್ದರೆ, ಒಮ್ಮೊಮ್ಮೊ ಸಣ್ಣಸಣ್ಣ ರಂಧ್ರಗಳು ಉಳಿದು, ನಂತರ ಜೋರಾಗಿ ಮಳೆ ಬಂದಾಗ ಒಳಗೆ ತೇವ ಕೊಡುವುದುಂಟು. ಇಂಥ ಸಂದರ್ಭದಲ್ಲಿ, 1ಕ್ಕೆ 6ರಂತೆ ಸಿಮೆಂಟ್‌ ಮಾಮೂಲಿ ಮಿಶ್ರಣದ ಜೊತೆಗೆ ಒಂದು ಪಾಲು ಒಣ ಮಣ್ಣನ್ನು ಜರಡಿ ಹಿಡಿದು ಹಾಕಿ ಕಟ್ಟಿದರೆ – ಈ ಸಣ್ಣ ರಂಧ್ರಗಳೆಲ್ಲ ಮುಚ್ಚಿಕೊಂಡು ತೇವಾಂಶ ಒಳಗೆ ಬಾರದಂತೆ ತಡೆಯುತ್ತದೆ. ಜೊತೆಗೆ ಸಾಕಷ್ಟು ಸಿಮೆಂಟ್‌ ಕೂಡ ಉಳಿತಾಯವಾಗುತ್ತದೆ.

ಪಾಯದಲ್ಲಿ ಮಣ್ಣು
ಮನೆಯ ಅಡಿಪಾಯ ಎಲ್ಲರಿಗೂ ಬಹು ಗಟ್ಟಿಯಾಗಿ ಇರಬೇಕು ಎಂಬ ಆಸೆ ಇರುವ ಕಾರಣ ಆದಷ್ಟೂ ಹೆಚ್ಚು ಸಿಮೆಂಟ್‌ ಬಳಸಿ ಪಾಯವನ್ನು ಹಾಕಲಾಗುತ್ತದೆ. ಆದರೆ ಪಾಯದ ಕೆಳಗೆ ಬರಿ ಮಣ್ಣಿರುವುದನ್ನು ನಾವು ಮರೆಯುತ್ತೇವೆ. ನಾವು ನಮ್ಮ ಮನೆಯನ್ನು ಎಷ್ಟೇ ಗಟ್ಟಿಯಾಗಿ ಕಟ್ಟಿದರೂ ಕಡೆಗೆ ಎಲ್ಲ ಭಾರವನ್ನೂ ಹೊರುವುದು ಪಾಯದ ಕೆಳಗಿರುವ ಮಣ್ಣುತಾನೆ? ಹಾಗಾಗಿ ನಮ್ಮ ಮನೆಯ ಪಾಯ ತೀರ ಗಟ್ಟಿಯಾಗಿರಲಿ ಎಂದೇನೂ ಲೆಕ್ಕ ಹಾಕಿ, ಒಂದಕ್ಕೆ ಎರಡು ಸಿಮೆಂಟ್‌ ಸುರಿಯುವ ಅಗತ್ಯ ಇಲ್ಲ. ಸೈಜು ಕಲ್ಲುಗಳನ್ನು ಮಣ್ಣಿನಲ್ಲಿ ಕಟ್ಟಿ ಹಾಕಿದ ಪಾಯಗಳು ನೂರಾರು ವರ್ಷ ದೃಢವಾಗಿರುವುದನ್ನು ನಾವು ಹಳೆಯ ಕಟ್ಟಡಗಳನ್ನು ಒಡೆಯುವಾಗ ಗಮನಿಸಿರುತ್ತೇವೆ! ಹಾಗಾಗಿ ನೀವು ಒಂದು ಮಹಡಿಯ ಮನೆ ಕಟ್ಟುವಂತಿದ್ದರೆ, ನಿಮ್ಮ ಮನೆಯ ಅಡಿಪಾಯದ ಕೆಳಗಿನ ಮಣ್ಣು ಗಟ್ಟಿಯಾಗಿದ್ದರೆ, ನೀವು ಸೈಜು ಕಲ್ಲುಗಳನ್ನು ಮಣ್ಣಿನಲ್ಲೇ ಕಟ್ಟಿ ಪಾಯವನ್ನು ಹಾಕಬಹುದು. ಆದರೆ ಪಾಯ ಹಾಕುವಾಗ ಕಲ್ಲುಗಳನ್ನು ಸರಿಯಾಗಿ “ನಾಟು -ಪಾಟು’ ಅಂದರೆ ಒಂದೆರಡು ಕಲ್ಲುಗಳನ್ನು ಉದ್ದುದ್ದಕ್ಕೂ ನಂತರದನ್ನು ಅಡ್ಡಡ್ಡಕ್ಕೂ ಇಡುವುದರ ಮೂಲಕ ಇಡೀ ಗೋಡೆಯನ್ನು ಕಲ್ಲುಗಳಿಂದಲೇ ಬೆಸೆದು ಪಾಯ ಹಾಕಿದರೆ, ನಿಮ್ಮ ಮನೆಯ ಪಾಯ ಗಟ್ಟಿಯಾಗಿರುತ್ತದೆ.

Advertisement

ಮಣ್ಣಿನ ನೆಲ
ಒಳ್ಳೆಯ ಟೈಲ್ಸ್‌ಗಳು ಕಡಿಮೆ ಬೆಲೆಗೆ ಸಿಗಲು ಶುರು ಮಾಡಿದಾಗಿನಿಂದ ಜನ ಮಣ್ಣಿನ ನೆಲವನ್ನು ಸಂಪೂರ್ಣ ಎನ್ನುವಷ್ಟು ಬಿಟ್ಟಿದ್ದಾರೆ. ಸಿಮೆಂಟ್‌ನ ವ್ಯಾಮೋಹ ನಗರ ವಾಸಿಗಳನ್ನು ಎಷ್ಟು ಕಾಡಲು ತೊಡಗಿದೆಯೆಂದರೆ, ಇಡೀ ನಿವೇಶನವನ್ನೆಲ್ಲ ಟೈಲ್ಸ್‌ ಹಾಗೂ ಸಿಮೆಂಟ್‌ನಿಂದ ಮುಚ್ಚಿಹಾಕಿ ಕಾಲಿಗೆ ಮಣ್ಣಿನ ಮೇಲೆ ಓಡಾಡುವ ಅನುಭವವೇ ಇಲ್ಲದಂತೆ
ಮಾಡಿರುತ್ತಾರೆ. ಹೀಗಾಗಲು ಮುಖ್ಯ ಕಾರಣ- ಮಣ್ಣು ಇದ್ದಲ್ಲಿ ನೀರು ಬಿದ್ದರೆ ಕೆಸರು ಉಂಟಾಗಿ, ಓಡಾಡಲು ಕಷ್ಟ, ಜೊತೆಗೆ ಮನೆಯ ಗೋಡೆಗೆ ಮಳೆ ಬಂದಾಗ ಸಿಡಿದು ಹಾಳಾಗುತ್ತದೆ ಎಂಬ ಆತಂಕ! ಮಣ್ಣಿನ ನೆಲದ ಮೇಲೆ ನೀರು ಬಿದ್ದಾಗ ಸರಾಗವಾಗಿ ಹರಿದು ಹೋಗುವಂತೆ ಇಳಿಜಾರನ್ನು ನೀಡಿದರೆ, ಕೆಸರು ಉಂಟಾಗುವುದಿಲ್ಲ. ಮನೆಯ ಸುತ್ತ ಮಣ್ಣಿನ ನೆಲ ಇರುವುದರಿಂದ ಹಸಿರು ಗಿಡ ನೆಡಲು ಅನುಕೂಲ ಆಗುತ್ತದೆ. ಜೊತೆಗೆ ಮಳೆ ನೀರು ಸ್ವಾಭಾವಿಕವಾಗಿ ಇಂಗಲೂ ಕೂಡ ಸುಲಭವಾಗುತ್ತದೆ.

ನಿಮಗೆ ಮತ್ತೂ ಹೆಚ್ಚಿನ ಆತಂಕ ಇದ್ದರೆ, ಮನೆಯ ಸುತ್ತಲೂ ಓಡಾಡಲು ಕಾಲಳತೆಗೆ ಒಂದೊಂದು ಅಡಿ ದೂರದಲ್ಲಿ ಒಂದೊಂದು ಕಲ್ಲನ್ನು ಇಟ್ಟು, ಅದರ ಮೇಲೆ ಓಡಾಡಲು ಅನುಕೂಲ ಮಾಡಿಕೊಂಡು ಮಿಕ್ಕೆಡೆ ಮಣ್ಣನ್ನು ಹಾಗೆಯೇ ಬಿಟ್ಟುಕೊಳ್ಳಬಹುದು.

ಬಣ್ಣ ಬಳಿಯಲು ಮಣ್ಣು
ಸಾಂಪ್ರದಾಯಿಕವಾಗಿ ದೇವಸ್ಥಾನಗಳಿಗೆ ಬಿಳಿ ಕೆಂಪು ಬಣ್ಣದ ಪಟ್ಟಿಗಳನ್ನು ಬಳಿಯುವುದನ್ನು ನಾವೆಲ್ಲ ನೋಡಿದ್ದೇವೆ. ಈ ಕೆಂಪನ್ನು ಮಣ್ಣಿಗೆ ಸ್ವಲ್ಪ ಅಂಟು ಹಾಗೂ ಸುಣ್ಣವನ್ನು ಬೆರೆಸಿ ತಯಾರಿಸಲಾಗುತ್ತದೆ. ಈಗಲೂ ಕೂಡ ನಿಮಗೆ ಜಾನಪದ ಶೈಲಿಯಲ್ಲಿ ನಿಮ್ಮ ಮನೆಯನ್ನು ಸಿಂಗರಿಸ ಬೇಕೆಂದಿದ್ದರೆ, ಮಣ್ಣಿಗೆ ಸ್ವಲ್ಪ ಫೆವಿಕೊಲ್‌ ಅನ್ನು ಬೆರೆಸಿ ಬಣ್ಣದಂತೆ ಬಳಿದು ನೋಡಿ. ಆಗ ಸ್ವಾಭಾವಿಕವಾಗೇ ನೆಲದ ಬಣ್ಣದ ಗೋಡೆ ಹಾಗೂ ಸೀಲಿಂಗ್‌ ನಿಮ್ಮದಾಗುತ್ತದೆ. ಇದರ ಮೇಲೆ ಜಾನಪದ ಶೈಲಿಯಲ್ಲಿ ಸುಣ್ಣ ಬಳಸಿ ವಿವಿಧ ಚಿತ್ರಗಳನ್ನು ಬಿಡಿಸಿದರೆ, ಮೂಲ ಸೊಗಡಿಗೆ ಹತ್ತಿರವಾದ ಅಲಂಕಾರಿಕ ಗೋಡೆಗಳು ನಿಮ್ಮದಾಗುತ್ತವೆ.

ಸೂರು ತಂಪಾಗಿಸಲು ಮಣ್ಣು
ಕಾಂಕ್ರಿಟ್‌ ಸೂರು ಬೇಸಿಗೆಯಲ್ಲಿ ಅತಿ ಬೇಗ ಬಿಸಿಯೇರಿ ಮನೆಯೊಳಗೆ ಶಾಖ ಹರಿಸಲು ತೊಡಗಿದರೆ, ಅದೇ ಶಾಖವನ್ನು
ವಿದ್ಯುತ್‌ ಪಂಖಗಳು ಕೆಳಗೆ ಬೀಸಿ ನಮಗೆ ಮತ್ತೂ ಸೆಖೆಯನ್ನು ಉಂಟು ಮಾಡುತ್ತವೆ. ಮಣ್ಣಿಗೆ ಉತ್ತಮ ಊಷ್ಣನಿರೋಧಕ ಗುಣವಿದೆ. ಮರುಭೂಮಿಯಲ್ಲೂ ಕೂಡ ಒಂದಡಿ ಕೆಳಗೆ ತಂಪಾಗಿರುವುದು ಅಧ್ಯಯನಗಳ ಮೂಲಕ ನಮಗೆ ತಿಳಿದಿದೆ. ಹಾಗಾಗಿ ನಿಮ್ಮ ಸೂರಿನ ಮೇಲೆ ಒಂಭತ್ತು ಇಂಚು ಮಣ್ಣನ್ನು ಹಾಕಿ “ರೂಫ್ ಗಾಡರ್ನ್ ‘- ಸೂರು ಉದ್ಯಾನ ನಿರ್ಮಿಸಿಕೊಂಡರೆ, ಬಿಸಿಲು ಎಷ್ಟೇ ತೀವ್ರವಾಗಿದ್ದರೂ ಕೂಡ ನಿಮ್ಮ ಮನೆಯ ಒಳಗೆ ತಂಪಾಗಿರುತ್ತದೆ. ಆದರೆ ಹೀಗೆ ನಿಮ್ಮ ಸೂರಿನ ಮೇಲೆ ಹೆಚ್ಚುವರಿ ಭಾರ ಹೇರುವ ಮೊದಲು ನುರಿತ ಆರ್ಕಿಟೆಕ್ಟ್ ಇಂಜಿನಿಯರ್‌ಗಳಿಂದ ಅದರ ಗಟ್ಟಿತನವನ್ನು ಪರೀಕ್ಷಿಸಿಕೊಳ್ಳಿ. ನೀವು ನಿಮ್ಮ ಮನೆಯನ್ನು ವಿನ್ಯಾಸ ಮಾಡುವಾಗಲೇ ಸೂರು ಉದ್ಯಾನವನದ ಭಾರ ಹೊರುವಂತೆ ನೋಡಿಕೊಂಡಿದ್ದರೆ, ನಂತರ ನಿಮ್ಮ ತಲೆಯ ಮೇಲಿನ ಸೂರನ್ನು ತಂಪಾಗಿಡುವುದು ಸುಲಭವಾಗುತ್ತದೆ.
ಈಗಲೂ ಕೂಡ ಮಣ್ಣಿನ ಅವಲಂಬನೆ ಮನೆ ಕಟ್ಟುವಾಗಿ ಕಡಿಮೆಯಾಗಬೇಕಿಲ್ಲ, ಸ್ವಲ್ಪ ಯೋಚಿಸಿ ಬಳಸಿದರೆ ಸುಂದರ ಮನೆ ನಿಮ್ಮದಾಗುವುದರ ಜೊತೆಗೆ ಹಣದ ಉಳಿತಾಯವೂ ಆಗುತ್ತದೆ.

ಹೆಚ್ಚಿನ ಮಾಹಿತಿಗೆ: 9844132826

– ಆರ್ಕಿಟೆಕ್ಟ್ ಕೆ. ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next