ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಕಣಕ್ಕಿಳಿಯುವ ಕುರಿತು ತಮ್ಮ ಸಹೋದರ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚಿಸಿದ ಬೆನ್ನಲ್ಲೇ, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅವರು ‘ರಾಜ್ಯ ರಾಜಕಾರಣದಲ್ಲಿ ಆಸಕ್ತಿ ಹೊಂದಿಲ್ಲ’ ಎಂದು ಬುಧವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ”ಕರ್ನಾಟಕದಿಂದ ಲೋಕಸಭೆಯಲ್ಲಿ ಕಾಂಗ್ರೆಸ್‌ನ ಏಕೈಕ ಸದಸ್ಯನಾಗಿರುವುದರಿಂದ ಇದು ಕಷ್ಟ. ನನ್ನೊಂದಿಗೆ ಚರ್ಚಿಸದ ವಿಷಯದ ಬಗ್ಗೆ ನಾನು ನಿಮ್ಮೊಂದಿಗೆ ಹೇಗೆ ಚರ್ಚಿಸಲಿ… ನನಗೆ ರಾಜ್ಯ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಅಲ್ಲದೆ, ಉಪಚುನಾವಣೆಯಿಂದ ಬೇಸತ್ತಿದ್ದೇನೆ, ಕಳೆದ ಇಪ್ಪತ್ತು ವರ್ಷಗಳಲ್ಲಿ ಹಲವಾರು ಉಪಚುನಾವಣೆಗಳ ಜವಾಬ್ದಾರಿಯನ್ನು ತೆಗೆದುಕೊಂಡ ನಂತರ, ಸಾರ್ವಜನಿಕ ಹಣವನ್ನು ವ್ಯರ್ಥ ಮಾಡುವುದು ನನಗೆ ಇಷ್ಟವಿಲ್ಲ” ಎಂದು ಸುರೇಶ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಾನು ಸದ್ಯಕ್ಕೆ ಸ್ಪರ್ಧಿಸಲು ಸಿದ್ಧನಿಲ್ಲ. ನಾನು ಹೈಕಮಾಂಡ್ ನಿರ್ದೇಶನ ಮಾತ್ರವಲ್ಲದೆ, ನನ್ನ ಮೇಲೆ ವಿಶ್ವಾಸವಿಟ್ಟು ಮೂರು ಬಾರಿ ಲೋಕಸಭೆಗೆ ಕಳುಹಿಸಿದ ನನ್ನ ಕ್ಷೇತ್ರದ ಕಾರ್ಯಕರ್ತರಿಂದ ಅನುಮತಿ ಪಡೆಯಬೇಕು. ಹತ್ತು ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ತಮ್ಮ ಮೇಲೆ ಒತ್ತಡವಿದೆ. ನನ್ನ ಲೋಕಸಭೆ ಕ್ಷೇತ್ರದ ಎಲ್ಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳಿಂದ ಮತ್ತು ಹೊರಗಿನ ಸುಮಾರು ಆರು ಕ್ಷೇತ್ರಗಳಿಂದ ನನಗೆ ಒತ್ತಡವಿದೆ. ಹೀಗಾಗಿ ಚುನಾವಣೆಗೆ ಸ್ಪರ್ಧಿಸಲು ವಿವಿಧ ಅಂಶಗಳಿವೆ. ಸ್ಥಳೀಯರನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕು ಮತ್ತು ಅವುಗಳನ್ನು ವಿವರವಾಗಿ ಚರ್ಚಿಸಬೇಕಾಗಿದೆ ಎಂದರು.
ಶಿವಕುಮಾರ್ ಅವರು ಮಂಗಳವಾರ ರಾಮನಗರದಿಂದ ವಿಧಾನಸಭೆ ಚುನಾವಣೆಗೆ ಸುರೇಶ್ ಅವರನ್ನು ಕಣಕ್ಕಿಳಿಸುವ ಪ್ರಸ್ತಾಪವಿದ್ದು, ಈ ಬಗ್ಗೆ ಪಕ್ಷದಿಂದ ಸಂದೇಶ ಬಂದಿದೆ ಎಂದು ಹೇಳಿದ್ದರು. ಆದರೆ ಸುರೇಶ್ ಇನ್ನೂ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದಿದ್ದಾರೆ.
ರಾಮನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಪ್ರಸ್ತಾಪದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ, ಇದುವರೆಗೆ ಕಾಂಗ್ರೆಸ್‌ನ ಯಾವುದೇ ರಾಜ್ಯ ಅಥವಾ ಕೇಂದ್ರ ನಾಯಕರು ಈ ಬಗ್ಗೆ ತಮ್ಮೊಂದಿಗೆ ಮಾತನಾಡಿಲ್ಲ. ನನಗೆ ಜವಾಬ್ದಾರಿ ಇದೆ, ನನ್ನ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಬೆಂಗಳೂರು ಗ್ರಾಮಾಂತರದ ಜನರು ನನ್ನನ್ನು ಲೋಕಸಭಾ ಸದಸ್ಯರನ್ನಾಗಿ ಮಾಡಿದ್ದಾರೆ, ಆ ಕೆಲಸವನ್ನು ಪೂರ್ಣಗೊಳಿಸಬೇಕು ಎಂದರು.
ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಸ್ಪರ್ಧಿಸಿ ಸೋತಿದ್ದ ಇಕ್ಬಾಲ್ ಹುಸೇನ್ ಅವರು ಜನಪರ ಕೆಲಸ ಮಾಡುತ್ತಿದ್ದಾರೆ ಎಂದ ಸುರೇಶ್, ಅವರ ಹೆಸರನ್ನು ಮತ್ತೊಮ್ಮೆ ಅವಿರೋಧವಾಗಿ ಅಭ್ಯರ್ಥಿಯಾಗಿ ಪಕ್ಷಕ್ಕೆ ಶಿಫಾರಸು ಮಾಡಲಾಗಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.
ಸುರೇಶ್ ಅವರನ್ನು ರಾಮನಗರದಿಂದ ಕಣಕ್ಕಿಳಿಸಿದರೆ, ಹೆಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರೊಂದಿಗೆ ಇಬ್ಬರು ಒಕ್ಕಲಿಗ ಪ್ರಭಾವಿಗಳ ನಡುವಿನ ಕದನ ಎಂದು ಮಾಧ್ಯಮಗಳಲ್ಲಿ ಚರ್ಚೆಯಾಗಿತ್ತು.ರಾಮನಗರ ಶಿವಕುಮಾರ್ ಮತ್ತು ಸುರೇಶ್ ಅವರ ತವರು ಜಿಲ್ಲೆಯಾಗಿದ್ದರೆ, ಕುಮಾರಸ್ವಾಮಿ ಮತ್ತು ಕುಟುಂಬಕ್ಕೆ ಕರ್ಮಭೂಮಿಯಾಗಿದೆ.
ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಪ್ರಸ್ತುತ ರಾಮನಗರ ಕ್ಷೇತ್ರವನ್ನು ಜೆಡಿಎಸ್ ಶಾಸಕಿಯಾಗಿ ಪ್ರತಿನಿಧಿಸುತ್ತಿದ್ದಾರೆ. ಆಡಳಿತಾರೂಢ ಬಿಜೆಪಿ ರಾಮನಗರ ಕ್ಷೇತ್ರದ ಅಭ್ಯರ್ಥಿಯನ್ನು ಇನ್ನೂ ಘೋಷಣೆ ಮಾಡಿಲ್ಲ.