ಮಡಿಕೇರಿ: ರಾಜಕೀಯದಲ್ಲಿ ಖಂಡಿತಾ ಆಸಕ್ತಿ ಇಲ್ಲ, ಮೈಸೂರು ಅರಮನೆ ಪರಂಪರೆ ಮುಂದುವರಿಸಿಕೊಂಡು ಹೋಗಲು ಬದ್ಧ ಎಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣರಾಜ ಒಡೆಯರ್ ಹೇಳಿದ್ದಾರೆ.
ಸುಂಟಿಕೊಪ್ಪದಲ್ಲಿ ಡಿ. ಶಿವಪ್ಪ ಸ್ಮಾರಕ 25ನೇ ವರ್ಷದ ಫುಟ್‌ಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯ ಉದ್ಘಾಟಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ರಾಜಕೀಯದಿಂದ ದೂರ ಎಂದು ಈಗಾಗಲೇ ಹೇಳಿದ್ದೇನೆ, ಮುಂದೆಯೂ ದೂರವೇ ಇರುತ್ತೇನೆ ಎಂದರು.
ಸಮಾಜದಲ್ಲಿ ಸಾಮರಸ್ಯ ಕಾಪಾಡಲು ಕ್ರೀಡಾಕೂಟಗಳು ಬಹಳ ಮುಖ್ಯ. ಕೊಡಗಿನ ಕೋಲ್ಕತಾ ಎಂದು ಖ್ಯಾತಿ ಪಡೆದು ಫುಟ್‌ಬಾಲ್ ಕ್ರೀಡೆಗೆ ಹೆಸರಾಗಿರುವ ಸುಂಟಿಕೊಪ್ಪದಲ್ಲಿ 25 ವರ್ಷಗಳಿಂದ ಫುಟ್ಬಾಲ್ ಪಂದ್ಯಾವಳಿ ಆಯೋಜಿಸುತ್ತಿರುವ ಡಿ.ಶಿವಪ್ಪ ಕುಟುಂಬದ ಪ್ರಯತ್ನ ಶ್ಲಾಘನೀಯ, ಕೊಡಗಿನಲ್ಲಿ ಕ್ರೀಡಾ ಚಟುವಟಿಕೆಗೆ ಮುಂದಿನ ದಿನಗಳಲ್ಲಿ ನನ್ನಿಂದಾದ ಪ್ರೋತ್ಸಾಹ ನೀಡುವೆ ಎಂದರು.
ಡಿ.ಶಿವಪ್ಪ ಸ್ಮಾರಕ ಫುಟ್ಬಾಲ್ ಪಂದ್ಯಾವಳಿಯ ಪ್ರಾಯೋಜಕರಾದ ಉದ್ಯಮಿ ವಿಶಾಲ್ ಶಿವಪ್ಪ ಮಾತನಾಡಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣವಾಗಿ ಸುಂಟಿಕೊಪ್ಪ ಶಾಲಾ ಕ್ರೀಡಾಂಗಣ ರೂಪಿಸುವ ಯೋಜನೆ ಇದ್ದು, ಶಾಸಕ ಡಾ| ಮಂಥರ್ ಗೌಡ ಅವರ ಸಹಕಾರದಿಂದ ಅನುಷ್ಠಾನಗೊಳಿಸುವುದಾಗಿ ಹೇಳಿದರು.