ಬೆಂಗಳೂರು: ಉಪ ಚುನಾವಣೆ ಬಳಿಕ “ಇಂದಿರಾ ಕ್ಯಾಂಟೀನ್’ ಹೆಸರು ಬದಲಾಯಿಸಿ “ಕೆಂಪೇಗೌಡ ಕ್ಯಾಂಟೀನ್’ ಎಂದು ಮರು ನಾಮಕರಣ ಮಾಡುವುದಕ್ಕೆ ಬಿಬಿಎಂಪಿ ಆಡಳಿತ ಚಿಂತನೆ ನಡೆಸಿದೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆದರೆ, ನಾನಾ ಕಾರಣಗಳಿಂದ ಕ್ಯಾಂಟೀನ್ ಹೆಸರು ಬದಲಾಯಿಸುವುದಕ್ಕೆ ಬಿಜೆಪಿ ನಾಯಕರು ಹಿಂದೇಟು ಹಾಕಿದ್ದರು.
ಹೆಸರು ಬದಲಾವಣೆ ಸಂಬಂಧ “ಉದಯವಾಣಿ’ ಜತೆ ಮಾತನಾಡಿದ ಉಪ ಮೇಯರ್ ರಾಮ್ ಮೋಹನ್ ರಾಜು, ಆರ್ಥಿಕ ಇಲಾಖೆ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಶೇ.25ರಷ್ಟು ಅನುದಾನ ನೀಡುವುದಕ್ಕೆ ಮಾತ್ರ ಸಾಧ್ಯ ಎಂದು ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಿದೆ. ಅದರಂತೆ ಕ್ಯಾಂಟೀನ್ ನಿರ್ವಹಣೆ ಅಸಾಧ್ಯ. ಹಾಗಾಗಿ, ಉಪಚುನಾವಣೆ ನಂತರ “ಕೆಂಪೇಗೌಡ ಕ್ಯಾಂಟೀನ್’ ಎಂದು ಮರು ನಾಮಕರಣ ಮಾಡಿ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆಯುವುದಕ್ಕೆ ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಉಪಚುನಾವಣೆ ಬಳಿಕ ಮನವಿ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಸಂಪೂರ್ಣ ಅನುದಾನದಡಿ 2017ರ ಕಾಂಗ್ರೆಸ್ ಸರ್ಕಾರ ಆರಂಭಿಸಿದ ಇಂದಿರಾ ಕ್ಯಾಂಟೀನ್ ಯೋಜನೆಗೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಯಾವುದೇ ಅನುದಾನ ಮೀಸಲಿಡಲಿಲ್ಲ. ಆದರೂ ಬಡವರಿಗೆ ಅನ್ನ ನೀಡುವ ಯೋಜನೆ ಎಂಬ ಕಾರಣಕ್ಕೆ ಪಾಲಿಕೆ ತನ್ನ ಹಣದಲ್ಲಿ ಕ್ಯಾಂಟೀನ್ ನಿರ್ವಹಿಸುತ್ತಿದೆ ಎಂದರು. ಕಾಂಗ್ರೆಸ್ ನಾಯಕಿಯ ಹೆಸರಿನ ಯೋಜನೆ ಎಂಬ ಕಾರಣಕ್ಕೆ ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟೀನ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಆದರೆ, ಇಂದಿರಾ ಕ್ಯಾಂಟೀನ್ ನಿರ್ವಹಣೆ ಬಿಬಿಎಂಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ಪಾಲಿಕೆ ಆಡಳಿತಾರೂಢ ಬಿಜೆಪಿ ಪಕ್ಷದ ನಾಯಕರು ಕ್ಯಾಂಟೀನ್ ಹೆಸರು ಬದಲಾಯಿಸಿ ಯೋಜನೆ ಮುಂದುವರಿಸುವುದಕ್ಕೆ ಮುಂದಾಗಿದ್ದಾರೆ.