Advertisement

ಮಿನಿ ವಿಧಾನಸೌಧಕ್ಕಿಲ್ಲ ಉದ್ಘಾಟನೆ ಭಾಗ್ಯ

01:57 PM Oct 17, 2020 | Suhan S |

ಭಟ್ಕಳ: ಪಟ್ಟಣದಲ್ಲಿ ಮಿನಿ ವಿಧಾನಸೌಧ ಆಗಬೇಕೆನ್ನುವ ಬಹು ವರ್ಷಗಳ ಕನಸು ನನಸಾಗಿದ್ದರೂ ಕಟ್ಟಡಕ್ಕೆ ಇನ್ನೂ ಉದ್ಘಾಟನೆ ಭಾಗ್ಯ ದೊರೆತಿಲ್ಲ.

Advertisement

1994ರಲ್ಲಿ ಪ್ರಥಮ ಬಾರಿಗೆ ಬಿಜೆಪಿಯಿಂದ ಆರಿಸಿ ಬಂದಿದ್ದ ಡಾ| ಚಿತ್ತರಂಜನ್‌ ಭಟ್ಕಳಕ್ಕೆ ಮಿನಿ ವಿಧಾನ ಸೌಧ ಬೇಕು ಎನ್ನುವ ಕನಸು ಕಂಡಿದ್ದರು.ನಂತರ ಮೂರು ಕೋಟಿ ಮಂಜೂರಿಯಾದರೂ ಕಟ್ಟಡ ಮಾತ್ರ ಆರಂಭವಾಗಿಲ್ಲ. ನಂತರ ಮಿನಿವಿಧಾನ ಸೌಧದ ಕನಸು ಕಮರಿ ಹೋಗಿದ್ದು, ಶಾಸಕ ಮಂಕಾಳ ವೈದ್ಯ ಅದಕ್ಕೆ ಮರು ಜೀವ ತುಂಬಿ10 ಕೋಟಿ ರೂ. ಮಂಜೂರಿ ಮಾಡಿಸಿದ್ದರು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮಿನಿ ವಿಧಾನ ಸೌಧಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದರು.ಕಾಮಗಾರಿ ನಡೆಸಿದ ಬೆಳಗಾವಿಯ ಪ್ರೌಢ ಇಂಡಿಯಾ ಪ್ರಮೋಟರ್ ಕಂಪೆನಿಯವರು 2017ರಲ್ಲಿ ಕಾಮಗಾರಿ ಆರಂಭಿಸಿ ಫೆ. 2020ರಲ್ಲಿ ಮುಗಿಸಿದ್ದು, ಲೋಕೋಪಯೋಗಿ ಇಲಾಖೆ ನಿಗದಿಪಡಿಸಿದ್ದ ಸಮಯ ಮಿತಿಯೊಳಗೆ ಕಟ್ಟಡ ಕಟ್ಟಿದಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಿಮುಗಿಸಿದ್ದರು.

ಕಳೆದ 9 ತಿಂಗಳ ಹಿಂದೆ ಕಟ್ಟಡಕಂದಾಯ ಇಲಾಖೆಗೆ ವಹಿಸಿಕೊಡಲಾಗಿದ್ದರೂಇನ್ನೂ ಉದ್ಘಾಟನೆ ಭಾಗ್ಯ ಮಾತ್ರ ದೊರೆತಿಲ್ಲ. ಇದಕ್ಕೆ ಹೆಚ್ಚುವರಿ ಕಾಮಗಾರಿಯಾಗಿ ಮೇಲ್ಛಾವಣಿಗೆ ತಗಡಿನ ಹೊದಿಕೆ ಹಾಗೂಕಚೇರಿಗಳ ಪೀಠೊಪಕರಣಗಳಿಗೆ ಹಣ ಮಂಜೂರಿಯಾಗದೇ ಇರುವುದೇ ಕಾರಣ ಎನ್ನಲಾಗಿದೆ. ಸರಕಾರಕ್ಕೆ ಒಟ್ಟೂ 3.45 ಕೋಟಿ ರೂಪಾಯಿಗಳ ಅಂದಾಜು ವೆಚ್ಚ ಸಲ್ಲಿಸಲಾಗಿದ್ದು, ಶಾಸಕ ಸುನೀಲ್‌ ನಾಯ್ಕ ಸತತ ಪ್ರಯತ್ನದಿಂದ ಮುಖ್ಯ ಮಂತ್ರಿಗಳಾನುಮೋದನೆ ದೊರೆತಿದೆ ಎನ್ನಲಾಗಿದೆ.

ಭಟ್ಕಳ ಮಧ್ಯದಲ್ಲಿ ನಾಲ್ಕು ಅಂತಸ್ತುಗಳ ಮಿನಿ ವಿಧಾನ ಸೌಧ ಉದ್ಘಾಟನೆಗೆ ಸಜ್ಜಾಗಿ ನಿಂತಿದ್ದು, ಇದರಲ್ಲಿ ಪಾರ್ಕಿಂಗ್‌, ನೆಲ ಮಹಡಿ, ಪ್ರಥಮ ಮಹಡಿ, ಎರಡನೇ ಮಹಡಿಗಳು ತಲಾ 990 ಚದರ ಅಡಿ ಇದ್ದು, ಒಟ್ಟೂ ಕ್ಷೇತ್ರ 3960 ಚದರ ಅಡಿಗಳಷ್ಟಿದೆ. ಇದರಲ್ಲಿ ನೆಲ ಮಹಡಿಯಲ್ಲಿ ಇವಿಎಂ, ಸ್ಟ್ರಾಂಗ್‌ರೂಮ್‌, ರೆಕಾರ್ಡ್‌ ರೂಮ್‌ಗಳಿದ್ದು, ಮೊದಲನೇ ಮಹಡಿಯಲ್ಲಿ ಸಬ್‌ ರಿಜಿಸ್ಟ್ರಾರ್‌ ಕಚೇರಿ, ಟ್ರಸರಿಕಚೇರಿ, ಸರ್ವೆ ಇಲಾಖೆ ಕಚೇರಿಗಳು ಇರಲಿವೆ. ಎರಡನೇ ಮಹಡಿಯಲ್ಲಿ ತಹಶೀಲ್ದಾರ್‌ ಕಚೇರಿ, ಕೋರ್ಟ್‌ ಹಾಲ್‌ ಇರಲಿದ್ದು, ಮೂರನೇ ಮಹಡಿಯಲ್ಲಿ ಶಾಸಕರ ಕಚೇರಿ, ಸಹಾಯಕ ಆಯುಕ್ತರ ಕಚೇರಿ ಇರಲಿದೆ.

ಮಿನಿ ವಿಧಾನ ಸೌಧ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದ್ದು, ಬಸ್‌ ನಿಲ್ದಾಣ,ತಾಲೂಕು ಆಸ್ಪತ್ರೆ, ಪ್ರವಾಸಿ ಬಂಗಲೆ, ಸಂತೆ ಮಾರುಕಟ್ಟೆಗಳಿಗೆ ಸಮೀಪವಿದ್ದು, ಜನರಿಗೆಅತ್ಯಂತ ಅನುಕೂಲಕರವಾದ ಜಾಗಾದಲ್ಲಿದೆ. ಆದರೆ ನೆಲ ಮಹಡಿಯಲ್ಲಿ ಇವಿಎಂ, ಸ್ಟ್ರಾಂಗ್‌ ರೂಮ್‌, ರೆಕಾರ್ಡ್‌ ರೂಮ್‌ಗೆ ಅವಕಾಶಮಾಡಿಕೊಡಲಾಗಿದ್ದು, ತಹಶೀಲ್ದಾರ್‌ ಕಚೇರಿ ಎರಡನೇ ಮಹಡಿಗೆ, ಸಹಾಯಕ ಆಯುಕ್ತರು ಹಾಗೂ ಶಾಸಕರ ಕಚೇರಿ ಮೂರನೇ ಮಹಡಿಯಲ್ಲಿಟ್ಟಿರುವುದು ಮಾತ್ರ ಜನತೆಗೆ ತೊಂದರೆಯಾಗಲಿದೆ. ಕಟ್ಟಡಕ್ಕೆ ಲಿಪ್ಟ್ ಇದ್ದರೂ ನಮ್ಮಲ್ಲಿ ಎಷ್ಟು ಜನರು ಸರಾಗವಾಗಿ ಲಿಪ್ಟ್ ಬಳಸಬಹದು ಎನ್ನುವುದೇ ಇಲ್ಲಿ ಪ್ರಶ್ನೆಯಾಗಿದೆ. ನೆಲ ಮಹಡಿಯಲ್ಲಿ ತಹಶೀಲ್ದಾರ್‌ ಕಚೇರಿ, ಮೊದಲ ಮಹಡಿಯಲ್ಲಿ ಸಹಾಯಕ ಆಯುಕ್ತರು ಹಾಗೂ ಶಾಸಕರ ಕಚೇರಿ ಇರುವುದರಿಂದ ನಾಗರಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎನ್ನುವುದು ಜನತೆಯ ಆಗ್ರಹವಾಗಿದೆ.

Advertisement

ಮಿನಿ ವಿಧಾನ ಸೌಧ ಕಟ್ಟಡದ ಸಿವಿಲ್‌ ಕಾಮಗಾರಿ ಸಂಪೂರ್ಣ ಮುಗಿದಿದ್ದು, ಕಟ್ಟಡದ ಉದ್ಘಾಟನೆ ಮಾಡಬೇಕಾಗಿದೆ. ಆದರೆ ಆಲ್ಲಿಗೆ ಬರಲಿರುವ ಕಚೇರಿಗಳಿಗೆ ಪೀಠೊಪಕರಣಗಳಿಗೆ 3.45 ಕೋಟಿ ರೂ. ಮುಖ್ಯ ಮಂತ್ರಿಗಳಿಗೆ ಅನುಮೋದನೆ ದೊರೆತಿದೆ. ಹಣ ಮಂಜೂರಾದ ನಂತರ ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಲಿದ್ದಾರೆ. –ಸುನೀಲ್‌ ನಾಯ್ಕ, ಶಾಸಕ

ಮಿನಿ ವಿಧಾನ ಸೌಧ ಕಟ್ಟಡ ಮುಗಿದಿರುವುದು ನಿಜ. ಆದರೆ ಕಟ್ಟಕ್ಕೆ ಸ್ಥಳಾಂತರಗೊಳ್ಳುವ ಕಚೇರಿಗಳಪೀಠೊಪಕರಣಕ್ಕೆ ಸರಕಾರದಿಂದ ಹಣ ಮಂಜೂರಿಯಾಗುವುದು ಸ್ವಲ್ಪ ವಿಳಂಬವಾಗಿರುವುದರಿಂದ ಹಣ ಮಂಜೂರಿಯಾಗಿ ಪೀಠೊಪಕರಣಜೋಡಿಸಿಯೇ ಉದ್ಘಾಟನೆ ಮಾಡಲು ಯೋಚಿಸಲಾಗಿದೆ.  -ಡಾ| ಹರೀಶ ಕುಮಾರ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next