ನವದೆಹಲಿ: ವ್ಯಭಿಚಾರವು ಅಪರಾಧವಾಗಿಯೇ ಇರಬೇಕು. ವ್ಯಭಿಚಾರ ಕಾನೂನನ್ನು ದುರ್ಬಲ ಗೊಳಿಸುವುದರಿಂದ ವಿವಾಹದ ಪಾವಿತ್ರ್ಯತೆಯ ಮೇಲೆ ಪರಿಣಾಮ ಬೀರುತ್ತದೆ. ಪುರುಷನ ಅನೈತಿಕ ಸಂಬಂಧಕ್ಕೆ ಕಾನೂನು ಮಾನ್ಯತೆ ನೀಡುವುದರಿಂದ ವೈವಾಹಿಕ ಬಂಧಕ್ಕೆ ಧಕ್ಕೆಯಾಗಲಿದೆ. ಇದು ಸುಪ್ರೀಂಕೋರ್ಟ್‌ನಲ್ಲಿ ಕೇಂದ್ರ ಬುಧವಾರ ಸಲ್ಲಿಸಿರುವ ಅಫಿಡವಿಟ್‌ನ ಸಾರಾಂಶ. ಈ ಮೂಲಕ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 497ರ ಅಡಿಯಲ್ಲಿ ಪುರುಷ ಮತ್ತು ಮಹಿಳೆಯರಿಗೆ ಸಮಾನ ಹೊಣೆ ಹೊರಿಸಬೇಕೆಂದು ಕೋರಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಕೇಂದ್ರ ವಿರೋಧ ವ್ಯಕ್ತಪಡಿಸಿದೆ.
ಕೇರಳದ ಜೋಸೆಫ್ ಶೈನ್ ಸಲ್ಲಿಸಿದ್ದ ಈ ಪಿಐಎಲ್ ಹಿನ್ನೆಲೆಯಲ್ಲಿ ವ್ಯಭಿಚಾರ ಕುರಿತ ಕಾನೂನನ್ನು ಹೊಂದಿರುವ ಐಪಿಸಿ ಸೆಕ್ಷನ್ 497ರ ಸಾಂವಿಧಾನಿಕತೆ ಮರುವಿಮರ್ಶೆ ಗೊಳಿ ಸಲು ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ರಚಿಸಿತ್ತು. ವ್ಯಭಿಚಾರ ಸಂಬಂಧ ಮಹಿಳೆಗೆ ಶಿಕ್ಷೆಯಿಂದ ವಿನಾಯ್ತಿ ನೀಡುವುದನ್ನು ಬದಲಾಯಿಸಬೇಕೇ ಎಂಬುದನ್ನೂ ಸಿಜೆಐ ನ್ಯಾ.ದೀಪಕ್ ಮಿಶ್ರಾ ನೇತೃತ್ವ ಪೀಠ ನಿರ್ಣಯಿಸಲಿದೆ.
ಅರ್ಜಿದಾರರ ವಾದವೇನು?: ಪುರುಷರ ವಿರುದ್ಧ ತಾರತಮ್ಯ ತೋರುವ ಐಪಿಸಿ ಸೆಕ್ಷನ್ 497 ಅಸಾಂವಿಧಾನಿಕವಾಗಿದ್ದು, ಇದು ಕಲಮು 14, 15, 21 ಅನ್ನು ಉಲ್ಲಂ ಸುತ್ತದೆ. ಇಬ್ಬರು ಸಮ್ಮತಿಯ ಸಮಾಗಮ ನಡೆಸಿದಾಗ ಒಬ್ಬರನ್ನು ಹೊಣೆಗಾರಿಕೆಯಿಂದ ಹೊರಗಿಡುವುದು ಸರಿಯಲ್ಲ ಎಂಬುದು ಜೋಸೆಫ್ ವಾದ.
ಕಾನೂನು ಹೇಳ್ಳೋದೇನು?
ವ್ಯಕ್ತಿಯೊಬ್ಬನು ಇನ್ನೊಬ್ಬ ಪುರುಷನ ಪತ್ನಿಯೆಂದು ತಿಳಿದಿದ್ದರೂ, ಆ ಪುರುಷನ ಸಮ್ಮತಿಯಿಲ್ಲದೆ ಆ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದರೆ ಅದು ಅತ್ಯಾಚಾರದ ಅಪರಾಧವಲ್ಲ. ಅದು ವ್ಯಭಿಚಾರದ ಅಪರಾಧ. ಅಂತಹ ಕೃತ್ಯ ಎಸಗಿದ ಪುರುಷನಿಗೆ 5 ವರ್ಷಗಳ ತನಕ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. ಆದರೆ ಮಹಿಳೆಗೆ ಇದು ಅನ್ವಯಿಸುವುದಿಲ್ಲ ಎಂದು ಐಪಿಸಿ ಸೆಕ್ಷನ್ 497 ಹೇಳುತ್ತದೆ.