Advertisement

ಕರ್ನಾಟಕಕ್ಕೆ ಒಂದು ಪೈಸೆಯೂ ಬಾಕಿ ಇಲ್ಲ: ನಿರ್ಮಲಾ ತಿರುಗೇಟು

12:31 AM Mar 25, 2024 | Team Udayavani |

ಬೆಂಗಳೂರು: ಕೇಂದ್ರದ ವಿರುದ್ಧ ಕರ ಸಮರ ಸಾರಿರುವ ರಾಜ್ಯ ಸರಕಾರಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿರುಗೇಟು ನೀಡಿದ್ದಾರೆ. ಜನರಲ್ಲಿ ಗೊಂದಲ ಸೃಷ್ಟಿಸಿ ಪ್ರಧಾನಿ ಮೋದಿ ಅವರಿಂದ ಅನ್ಯಾಯ ಆಗಿದೆ ಎನ್ನುವಂತೆ ಬಿಂಬಿಸಬೇಡಿ ಎಂದು ಎಚ್ಚರಿಸಿದ್ದಾರೆ.

Advertisement

ಬೆಂಗಳೂರಿನ ಆರ್‌.ವಿ. ದಂತ ಕಾಲೇಜು ಆವರಣದಲ್ಲಿ ಥಿಂಕರ್ಸ್‌ ಫೋರಮ್‌ ವತಿಯಿಂದ ರವಿವಾರ ಆಯೋಜಿಸಿದ್ದ ಅನೌಪಚಾರಿಕ ಸಂವಾದದಲ್ಲಿ ಅವರು ಅಂಕಿಅಂಶ ಸಹಿತ ಚಾಟಿ ಬೀಸಿದರು.

ಯುಪಿಎ ಅಧಿಕಾರದಲ್ಲಿದ್ದಾಗ 12ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಶೇ. 30.5ರಷ್ಟು ಮಾತ್ರ ಶಿಫಾರಸು ಮಾಡಿತ್ತು. 13ನೇ ಹಣಕಾಸು ಆಯೋಗ ಶೇ. 32ರಷ್ಟು ಶಿಫಾರಸು ಮಾಡಿತ್ತು. ಆಗೆಲ್ಲ ಇಲ್ಲದ ಸಮಸ್ಯೆ ಈಗ ಕರ್ನಾಟಕ ಸರಕಾರಕ್ಕೆ ಬಂದಿರುವುದೇಕೆ ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.

14ನೇ ಹಣಕಾಸು ಆಯೋಗ ಶೇ. 42ರಷ್ಟು ಶಿಫಾರಸು ಮಾಡಿದಾಗ ಪ್ರಧಾನಿ ಮೋದಿ ಒಪ್ಪಿಕೊಂಡು ಅಷ್ಟು ತೆರಿಗೆ ಪಾಲನ್ನು ಕರ್ನಾಟಕಕ್ಕೆ ಕೊಟ್ಟಿದ್ದಾರೆ. ಜಮ್ಮು- ಕಾಶ್ಮೀರದಲ್ಲಿ 370ನೇ ವಿಧಿ ತೆರವು ಮಾಡಿರುವುದರಿಂದ 15ನೇ ಹಣ ಕಾಸು ಆಯೋಗದ ಶಿಫಾರಸಿನಲ್ಲಿ ಕೊಂಚ ಕಡಿಮೆ ಆಗಿದ್ದು, ಶೇ. 41ರಷ್ಟು ತೆರಿಗೆ ಪಾಲು ಕೊಡ ಲಾಗುತ್ತಿದೆ ಎಂದು ನಿರ್ಮಲಾ ಹೇಳಿದ್ದಾರೆ.

ತೆರಿಗೆ ಹಂಚಿಕೆ, ಸಹಾಯಾನುದಾನ ಏರಿಕೆ
2004-14ರ ವರೆಗಿನ ಯುಪಿಎ ಅವಧಿಯಲ್ಲಿ ವಾರ್ಷಿಕ ಸರಾಸರಿ 81,795 ಕೋಟಿ ರೂ. ತೆರಿಗೆ ಹಂಚಿಕೆಯಾಗುತ್ತಿದ್ದರೆ, 2014-24ರ ಎನ್‌ಡಿಎ ಅವಧಿಯಲ್ಲಿ 2,93,336 ಕೋಟಿ ರೂ. ತೆರಿಗೆ ಹಂಚಿಕೆ ಮಾಡಲಾಗುತ್ತಿದೆ.

Advertisement

ಅಂದರೆ ಯುಪಿಎ ಅವಧಿಗಿಂತ ತೆರಿಗೆ ಹಂಚಿಕೆ ಪ್ರಮಾಣದಲ್ಲಿ ಶೇ. 258ರಷ್ಟು ಏರಿಕೆ ಆಗಿದೆ ಎಂದು ಸಚಿವೆ ನಿರ್ಮಲಾ ವಿವರಿಸಿದರು. ಅದೇ ರೀತಿ ಯುಪಿಎ ಅವಧಿಯಲ್ಲಿ ವಾರ್ಷಿಕ 60,779 ಕೋಟಿ ರೂ. ಸಿಗುತ್ತಿದ್ದ ಕೇಂದ್ರದ ಸಹಾಯಾನುದಾನವು ಎನ್‌ಡಿಎ ಅವಧಿಯಲ್ಲಿ 2,27,832 ಕೊಟಿ ರೂ. ಸಿಗುತ್ತಿದ್ದು, ಶೇ. 273ರಷ್ಟು ಹೆಚ್ಚಳ ಆಗಿದೆ ಎಂದು ವಿವರಿಸಿದರು.

7 ಸಾವಿರ ಕೋಟಿ ರೂ. ಬಡ್ಡಿರಹಿತ ಸಾಲ ಸೌಲಭ್ಯ
ಕೋವಿಡ್‌ ಸಂದರ್ಭದಲ್ಲಿ ಇಡೀ ದೇಶವೇ ಹೊಡೆತ ಅನುಭವಿಸಿದ್ದರಿಂದ ಮೂಲಸೌಕರ್ಯ ವೃದ್ಧಿಸಿಕೊಳ್ಳುವ ಸಲುವಾಗಿ ಎಲ್ಲ ರಾಜ್ಯಗಳಿಗೂ 50 ವರ್ಷಗಳ ಅವಧಿಗೆ ಬಡ್ಡಿರಹಿತ ಸಾಲ ಸೌಲಭ್ಯವನ್ನು ನೀಡಲಾಗಿತ್ತು. ಈ ಪೈಕಿ ಕರ್ನಾಟಕ ಸರಕಾರ 7,130 ಕೋಟಿ ರೂ.ಗಳನ್ನು ಪಡೆದಿದೆ ಎಂದರು.

1.06 ಲಕ್ಷ ಕೋ.ರೂ. ಜಿಎಸ್‌ಟಿ ನಷ್ಟ ಪರಿಹಾರ ಚುಕ್ತಾ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿಯನ್ನು ಜಾರಿಗೊಳಿಸುವ ಮೊದಲು ಶೇ. 11.68ರಷ್ಟಿದ್ದ ಸಂಯುಕ್ತ ವಾರ್ಷಿಕ ಬೆಳವಣಿಗೆ ದರ (ಸಿಎಜಿಆರ್‌)ವು ಈಗ ಶೇ. 15 ರಷ್ಟಿದ್ದು, ಇದನ್ನು ಕರ್ನಾಟಕ ಸರಕಾರಕ್ಕೆ ಒಪ್ಪಿಕೊಳ್ಳಲಾಗುತ್ತಿಲ್ಲ ಎಂದು ನಿರ್ಮಲಾ ತಿರುಗೇಟು ನೀಡಿದ್ದಾರೆ.

ಪ್ರಣಬ್‌ ಮುಖರ್ಜಿ ಜಾರಿಗೊಳಿಸಲು ಮುಂದಾಗಿದ್ದ ಜಿಎಸ್‌ಟಿ ವ್ಯವಸ್ಥೆಯನ್ನು ಅರುಣ್‌ ಜೇತ್ಲೀ ಅವರು ಜಾರಿಗೆ ತಂದರು. ತೆರಿಗೆ ಸಂಗ್ರಹಣೆಯಲ್ಲಿ ಕಾರ್ಯಕ್ಷಮತೆ ಹೆಚ್ಚಿಸಿ, ಸೋರಿಕೆ ತಡೆಗಟ್ಟಿದ್ದೇವೆ. ತೆರಿಗೆ ವ್ಯಾಪ್ತಿಯಿಂದ ಹೊರಗಿದ್ದವರನ್ನು ಜಿಎಸ್‌ಟಿ ಜಾಲಕ್ಕೆ ತಂದಿದ್ದೇವೆ. ಇದರಿಂದ ಅಪರೋಕ್ಷ ತೆರಿಗೆ ಸಂಗ್ರಹ ಹೆಚ್ಚಳವಾಗಿದೆ. ಕರ್ನಾಟಕ ಸಹಿತ ಎಲ್ಲ ರಾಜ್ಯಗಳಿಗೂ ಅನುಕೂಲ ಆಗಿದೆ. ಲೆಕ್ಕಪರಿಶೋಧಕರ ಪ್ರಮಾಣಪತ್ರದಂತೆ 2017-22ರ ವರೆಗೆ ಕರ್ನಾಟಕಕ್ಕೆ 1.06 ಲಕ್ಷ ಕೋಟಿ ರೂ. ಜಿಎಸ್‌ಟಿ ನಷ್ಟ ಪರಿಹಾರ ಕೊಟ್ಟಿದ್ದು, ಈವರೆಗೆ ಯಾವುದೇ ಬಾಕಿ ಉಳಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ರೈಲು, ವಿಮಾನ ಸಂಪರ್ಕಕ್ಕೂ ಹೆಚ್ಚಿನ ಆದ್ಯತೆ
2014-23ರ ವರೆಗೆ ರೈಲ್ವೇ ಯೋಜನೆಗಳಿಗೆ ವಾರ್ಷಿಕ ಸರಾಸರಿ 3,434 ಕೋಟಿ ರೂ.ಗಳಂತೆ ಕರ್ನಾಟಕಕ್ಕೆ ಸಿಕ್ಕಿದೆ. ಈ ಹಿಂದೆ 835 ಕೋಟಿ ರೂ. ಮಾತ್ರ ಸಿಗುತ್ತಿತ್ತು. ಏಳು ವಂದೇ ಭಾರತ್‌ ರೈಲುಗಳ ಪೈಕಿ 4 ರೈಲುಗಳು ಕರ್ನಾಟಕವನ್ನು ಸಂಪರ್ಕಿಸುತ್ತಿವೆ, ಉಡಾನ್‌ ಯೋಜನೆಯಡಿ 7 ವಿಮಾನ ನಿಲ್ದಾಣಗಳಿಗೆ ಚಾಲನೆ ಕೊಡಲಾಗಿದೆ, 57 ಹೊಸ ವಾಯುಮಾರ್ಗಗಳಿಗೆ ಚಾಲನೆ ಕೊಡಲಾಗಿದೆ. 5 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌-2 ನಿರ್ಮಿಸಲಾಗಿದೆ. ಇದೆಲ್ಲ ಈ ಸರಕಾರದ ಕಣ್ಣಿಗೆ ಕಾಣುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಇಲ್ಲದ ವಿಶೇಷ ನಿಧಿಯ ಸೃಷ್ಟಿ
ಇದೆಲ್ಲವನ್ನೂ ಮುಚ್ಚಿಟ್ಟು ಹಣಕಾಸು ಆಯೋಗ ಅಂತಿಮ ವರದಿ ಶಿಫಾರಸು ಮಾಡದೆ ಇರುವ 5,495 ಕೋಟಿ ರೂ.ಗಳ ವಿಶೇಷ ನಿಧಿಯನ್ನು ಕೊಟ್ಟಿಲ್ಲ ಎನ್ನುವ ಸುಳ್ಳನ್ನು ಎಲ್ಲೆಡೆ ಹೇಳಿಕೊಂಡು ಬರಲಾಗುತ್ತಿದೆ. ನಾನು ಕರ್ನಾಟಕದಿಂದ ಆಯ್ಕೆಯಾಗಿ, ಸಂಸದೆಯಾಗಿ, ಕೇಂದ್ರ ಸಚಿವೆಯಾಗಿ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದೇನೆ ಎನ್ನುತ್ತಾರೆ. ಆದರೆ ಹಣಕಾಸು ಆಯೋಗದ ಶಿಫಾರಸಿನಲ್ಲಿ ಇಲ್ಲದ ವಿಶೇಷ ನಿಧಿಯನ್ನು ಕೊಟ್ಟಿಲ್ಲ ಎನ್ನುವುದು ಅತೀ ದೊಡ್ಡ ಸುಳ್ಳು ಎಂದು ತಿರುಗೇಟು ಕೊಟ್ಟರು.

ವಿತ್ತ ಸಚಿವೆ ನಿರ್ಮಲಾ ಹೇಳಿದ್ದೇನು?
-ಯುಪಿಎ ಅವಧಿಯಲ್ಲಿ 12ನೇ ಹಣಕಾಸು ಆಯೋಗ ರಾಜ್ಯಕ್ಕೆ ಶೇ. 30.5 ನೆರವಿಗೆ ಶಿಫಾರಸು.
-ಆಗ ಇಲ್ಲದ ಸಮಸ್ಯೆ ಮೋದಿ ಸರಕಾರದ ಅವಧಿಯಲ್ಲಿ ಏಕೆ?
-ತೆರಿಗೆ ಸಂಗ್ರಹ ವ್ಯವಸ್ಥೆಯಲ್ಲಿ ಕಾರ್ಯಕ್ಷಮತೆ ಹೆಚ್ಚಿಸಲು ಕ್ರಮ.
-7 ವಂದೇ ಭಾರತ್‌ ರೈಲುಗಳ ಪೈಕಿ 4 ಕರ್ನಾಟಕ ರಾಜ್ಯದ ಮೂಲಕ ಪ್ರಯಾಣ

ಕೇಂದ್ರ ಹಣಕಾಸು ಆಯೋಗದ ಶಿಫಾರಸಿನಂತೆ ಕರ್ನಾಟಕಕ್ಕೆ ತೆರಿಗೆ ಹಂಚಿಕೆ, ಸಹಾಯಾನುದಾನ ನೀಡಲಾಗಿದೆ. ಯಾವುದೇ ಬಾಕಿ ಉಳಿಸಿಕೊಂಡಿಲ್ಲ. ಪ್ರತೀ ಪೈಸೆಯನ್ನೂ ಸಕಾಲದಲ್ಲಿ ಕೊಟ್ಟಿದ್ದೇವೆ. ಕೆಲವು ಸಂದರ್ಭಗಳಲ್ಲಿ 2 ತಿಂಗಳ ಮುಂಗಡವಾಗಿ ಕೊಟ್ಟಿರುವುದೂ ಇದೆ. ಯಾರೂ ಇಷ್ಟು ಪ್ರಮಾಣದ ನೆರವು ಕೊಟ್ಟಿಲ್ಲ. ತಪ್ಪಾಗಿ ಆರೋಪಿಸಲಾಗುತ್ತಿದೆ. ಯಾವ್ಯಾವ ದಿನಾಂಕದಲ್ಲಿ ಎಷ್ಟೆಷ್ಟು ಬಿಡುಗಡೆ ಆಗಿದೆ ಎಂಬುದನ್ನೂ ಹೇಳಬಲ್ಲೆ. ಜನರ ದಾರಿ ತಪ್ಪಿಸಬೇಡಿ. ಪ್ರತಿಯೊಂದರ ಕಾಗದ-ಪತ್ರ ಹಿಡಿದು ಹೇಳುತ್ತಿದ್ದೇನೆ.
– ನಿರ್ಮಲಾ ಸೀತಾರಾಮನ್‌,
ಕೇಂದ್ರ ಹಣಕಾಸು ಸಚಿವೆ

ಒಕ್ಕೂಟ ವ್ಯವಸ್ಥೆಯಲ್ಲಿ ಹೇಗೆ ಕೆಲಸ ಮಾಡ ಬೇಕು ಎಂಬುದನ್ನು ತೆಲಂಗಾಣ ಸಿಎಂ ರೇವಂತ ರೆಡ್ಡಿ ಅವರನ್ನು ನೋಡಿ ಕಲಿಯಬೇಕು. ಸಿಎಂ ತಮ್ಮ ತಪ್ಪುಗಳಿಗೆ ಕೇಂದ್ರವನ್ನೇ ಬೊಟ್ಟು ಮಾಡುತ್ತಿದ್ದಾರೆ.
-ಆರ್‌. ಅಶೋಕ್‌, ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next